Advertisement

ಕೇಂದ್ರದ ಪರವಾನಿಗೆ ಮುಕ್ತಿ ಪ್ರಸ್ತಾವನೆಗೆ ರಾಜ್ಯ ನಕಾರ

11:16 AM Feb 27, 2020 | sudhir |

ಬೆಂಗಳೂರು: ಖಾಸಗಿ ಸಾರಿಗೆ ಸೇವೆಗೆ ಪೂರಕ ಮತ್ತು ಸರಕಾರಿ ಸಾರಿಗೆ ಸಂಸ್ಥೆಗಳಿಗೆ ಮಾರಕವಾದ ಐಷಾರಾಮಿ ಬಸ್‌ಗಳನ್ನು “ಪರವಾನಿಗೆ ಮುಕ್ತ’ಗೊಳಿಸುವ ಕೇಂದ್ರದ ಪ್ರಸ್ತಾವನೆಗೆ ರಾಜ್ಯ ಸರಕಾರ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದು, ಯಾವುದೇ ಕಾರಣಕ್ಕೂ ಇದಕ್ಕೆ ತನ್ನ ಸಮ್ಮತಿ ಇಲ್ಲ ಎಂದು ನಿಷ್ಠುರವಾಗಿ ಪ್ರತಿಕ್ರಿಯಿಸಿದೆ.

Advertisement

22 ಆಸನಕ್ಕಿಂತ ಹೆಚ್ಚಿನ ಎಸಿ ಡಿಲಕ್ಸ್‌ ಬಸ್‌ಗಳ ಕಾರ್ಯಾಚರಣೆಗೆ ಪ್ರಸ್ತುತ ಸಾರಿಗೆ ಇಲಾಖೆಯಿಂದ ಪರವಾನಿಗೆ ಪಡೆಯುವುದು ಕಡ್ಡಾಯ. ಆದರೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ನಗರಗಳಲ್ಲಿ ಕೈಗೆಟಕುವ ಮತ್ತು ಆರಾಮದಾಯಕ ಸಾರಿಗೆ ಸೇವೆ ಕಲ್ಪಿಸುವ ಸಲುವಾಗಿ ಇಂತಹ ಬಸ್‌ಗಳನ್ನು ಪರವಾನಿಗೆಯಿಂದ ಶಾಶ್ವತವಾಗಿ ಮುಕ್ತಗೊಳಿಸಲು ಉದ್ದೇಶಿಸಿದ್ದು, ಪ್ರಸ್ತಾವನೆ ಯನ್ನು ಎಲ್ಲ ರಾಜ್ಯ ಸಾರಿಗೆ ಇಲಾಖೆಗಳ ಮುಂದಿಟ್ಟಿತ್ತು. ಆದರೆ ಇದನ್ನು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ತಳ್ಳಿಹಾಕಿದೆ. ಈ ಕುರಿತು ಕೇಂದ್ರದ ಸಚಿವಾಲಯಕ್ಕೆ ಈಚೆಗೆ ಪತ್ರ ಬರೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ರಾಜ್ಯದ ಅಸಮ್ಮತಿ: ಆಯುಕ್ತರು
ಈಗಾಗಲೇ ರಸ್ತೆಗಿಳಿದ ಮತ್ತು ಮುಂದೆ ಇಳಿಯಲಿರುವ 22 ಆಸನಗಳಿಗಿಂತ ಹೆಚ್ಚಿನ ಸಾಮರ್ಥ್ಯದ ಎಸಿ ಡಿಲಕ್ಸ್‌ ಬಸ್‌ಗಳನ್ನು ಪರವಾನಿಗೆಯಿಂದ ಮುಕ್ತಗೊಳಿಸುವ ಕರಡು ಪ್ರಸ್ತಾ ವನೆಗೆ 30 ದಿನಗಳಲ್ಲಿ ಅಭಿಪ್ರಾಯ ತಿಳಿಸುವಂತೆ ಸೂಚಿಸಲಾಗಿತ್ತು. ಇದು ಖಾಸಗಿ ಸಾರಿಗೆಯನ್ನು ಉತ್ತೇಜಿಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಅಸಮ್ಮತಿ ಸೂಚಿಸಲಾಗಿದೆ ಎಂದು ಸಾರಿಗೆ ಆಯುಕ್ತ ಎನ್‌. ಶಿವಕುಮಾರ್‌ “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.

ತೆರಿಗೆ ಗೊಂದಲ
ರಾಜ್ಯದ ಮೊದಲ ಮತ್ತು ಎರಡನೇ ಹಂತದ ನಗರಗಳಲ್ಲಿ 22 ಸೀಟುಗಳಿಗಿಂತ ಹೆಚ್ಚು ಸಾಮರ್ಥ್ಯದ ಲಕ್ಷಕ್ಕೂ ಅಧಿಕ ಎಸಿ ವಾಹನಗಳಿವೆ. ಅವೆಲ್ಲವುಗಳನ್ನು ಪರವಾನಿಗೆಯಿಂದ ಮುಕ್ತಗೊಳಿಸಿದರೆ ತೆರಿಗೆಗೆ ಕತ್ತರಿ ಬೀಳುವುದು ಒಂದೆಡೆಯಾದರೆ, ಯಾವ ಮಾದರಿಯ ತೆರಿಗೆ ವಿಧಿಸಬೇಕು ಎನ್ನುವುದು ಗೊಂದಲವಾಗಲಿದೆ. ಇದಕ್ಕಾಗಿ ಕೇಂದ್ರ ಮೋಟಾರು ವಾಹನ ಕಾಯ್ದೆ ಜತೆಗೆ ಕರ್ನಾಟಕ ಮೋಟಾರು ವಾಹನ ಕಾಯ್ದೆಗೂ ತಿದ್ದುಪಡಿ ತರಬೇಕಾಗುತ್ತದೆ ಎಂದು ಸಾರಿಗೆ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಬಿಎಂಟಿಸಿಗೆ ದೊಡ್ಡ ಪೆಟ್ಟು
ಈ ಕರಡು ಅಧಿಸೂಚನೆಗೆ ಒಂದು ವೇಳೆ ಅಂತಿಮ ಆದೇಶ ಹೊರಡಿಸಿದರೆ, ಮೊದಲ ಪೆಟ್ಟು ನಿತ್ಯ 40 ಲಕ್ಷಕ್ಕೂ ಅಧಿಕ ಪ್ರಯಾಣಿಕರನ್ನು ಹೊತ್ತೂಯ್ಯುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗೆ ಬೀಳಲಿದೆ. ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸಂಸ್ಥೆಗೆ ಇದು ನುಂಗಲಾರದ ತುತ್ತಾಗಲಿದೆ ಎನ್ನಲಾಗಿದೆ.

Advertisement

ಕೇಂದ್ರದ ಪ್ರಸ್ತಾವನೆ ಏನು?
– 22 ಆಸನಗಳಿಗಿಂತ ಮೇಲ್ಪಟ್ಟ ಎಸಿ ಡಿಲಕ್ಸ್‌ ಬಸ್‌ಗಳು ಪರವಾನಿಗೆಯಿಂದ ಮುಕ್ತ
– ಮೋಟಾರು ವಾಹನ ಕಾಯ್ದೆ 1988ರ ಸೆಕ್ಷನ್‌ 66ರ ಉಪನಿಯಮ 1ರಲ್ಲಿ ಈ ಅವಕಾಶ
– ನಗರಗಳಲ್ಲಿ ಸಂಚರಿಸುವ ಎಸಿ ಡಿಲಕ್ಸ್‌ ಬಸ್‌ಗಳಿಗೆ ಪರ್ಮಿಟ್‌ನಿಂದ ಮುಕ್ತಿ
– ನಗರದಲ್ಲಿ ಜನರಿಗೆ ಕೈಗೆಟಕುವ ಮತ್ತು ಆರಾಮದಾಯಕ ನಗರ ಸಾರಿಗೆ ಸೇವೆ ಲಭ್ಯ

ರಾಜ್ಯದ ವಿರೋಧವೇನು?
– ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿ ನಾಲ್ಕೂ ಸಾರಿಗೆ ಸಂಸ್ಥೆಗಳಿಗೆ ಕೊಡಲಿ ಪೆಟ್ಟು
– ಉದ್ದೇಶಿತ ಪ್ರಸ್ತಾವನೆಯು ಖಾಸಗಿ ಸಾರಿಗೆ ಸೇವೆಗಳಿಗೆ ಪೂರಕ
– ಖಾಸಗಿ ಬಸ್‌ಗಳ ವಿಪರೀತ ಹಾವಳಿ ಇದೆ
– ಪರವಾನಿಗೆಯಿಂದ ಮುಕ್ತಗೊಳಿಸುವುದು ಸಮಂಜಸವಲ್ಲ
– ಈ ಕ್ರಮ ದಿಂದ ಪ್ರಯಾಣಿಕರ ಮೇಲೂ ಅಡ್ಡ ಪರಿಣಾಮ

Advertisement

Udayavani is now on Telegram. Click here to join our channel and stay updated with the latest news.

Next