Advertisement

ಬನ್ನಿ, ಸೈಬರ್‌ ಸ್ವಯಂ ಸೇವಕರಾಗಿ :ದೇಶದ್ರೋಹಿ ಪೋಸ್ಟ್‌ ಮೇಲೆ ಕಣ್ಣಿಡಲು ಜನರಿಗೆ ಕೇಂದ್ರ ಕರೆ

02:32 AM Feb 10, 2021 | Team Udayavani |

ಹೊಸದಿಲ್ಲಿ: ಟ್ವಿಟರ್‌, ಫೇಸ್‌ಬುಕ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿನ ದೇಶ ವಿದ್ರೋಹಿ ಪೋಸ್ಟ್‌ಗಳ ಮೇಲೆ ಹದ್ದಿನ ಕಣ್ಣಿಡಲು ಜನರನ್ನೇ ಬಳಸಿಕೊಳ್ಳಲು ಕೇಂದ್ರ ಸರಕಾರ ಮುಂದಾಗಿದೆ. ಈ ಸಂಬಂಧ “ಸೈಬರ್‌ ಕ್ರೈಮ್‌ ಸ್ವಯಂ ಸೇವಕರಾಗಿ ಬನ್ನಿ’ ಎಂದು ಜನರಿಗೆ ಕರೆ ನೀಡಿದೆ. ಇದರಲ್ಲಿ ಸ್ವಯಂ ಸೇವಕರಾಗುವವರು ಮಹಿಳೆಯರು, ಮಕ್ಕಳ ವಿರುದ್ಧದ ಕೆಟ್ಟ ರೀತಿಯ ಪೋಸ್ಟ್‌ಗಳು ಹಾಗೂ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತೆ ಪೋಸ್ಟ್ಗಳ ಬಗ್ಗೆ ಸರಕಾರಕ್ಕೆ ವರದಿ ಮಾಡಬಹುದಾಗಿದೆ. ಕಳೆದ ವಾರವಷ್ಟೇ ಇಂಥದ್ದೊಂದು ಯೋಜನೆಯನ್ನು ಜಮ್ಮು ಕಾಶ್ಮೀರದಲ್ಲಿ ಅನುಷ್ಠಾನಗೊಳಿಸಲಾಗಿತ್ತು. ಇದೀಗ ಇದೇ ರೀತಿಯ ಯೋಜನೆಯನ್ನು ದೇಶಾದ್ಯಂತ ಜಾರಿಗೊಳಿಸಲು ಕೇಂದ್ರ ಸರಕಾರವೇ ಮುಂದಾಗಿದೆ. ಈ ಯೋಜನೆಗೆ ಸೈಬರ್‌ ಕ್ರೈಮ್‌ ಕೋಆರ್ಡಿನೇಶನ್‌ ಸೆಂಟರ್‌ ಎಂದು ಕರೆಯಲಾಗಿದೆ.

Advertisement

ಕೂ ಬಳಕೆಗೆ ಪಿಯೂಷ್‌ ಸಲಹೆ
ದೇಶ ವಿರೋಧಿ ಟ್ವಿಟರ್‌ ಖಾತೆಗಳನ್ನು ಸ್ಥಗಿತ ಮಾಡುವ ವಿಚಾರದಲ್ಲಿ ಕೇಂದ್ರ ಸರಕಾರ ಮತ್ತು ಟ್ವಿಟರ್‌ ಸಂಸ್ಥೆ ನಡುವೆ ಹಗ್ಗ ಜಗ್ಗಾಟ ನಡೆದಿದ್ದು, ಇದರ ನಡುವೆಯೇ ಟ್ವಿಟರ್‌ನಂತೆಯೇ ಇರುವ ದೇಸಿ ಆ್ಯಪ್‌ “ಕೂ’ ಬಳಕೆಗೆ ಸ್ವತಃ ಕೇಂದ್ರ ಸಚಿವರೇ ಸಲಹೆ ನೀಡಿದ್ದಾರೆ. ಈ ಸಂಬಂಧ ಟ್ವೀಟ್‌ ಮಾಡಿರುವ ರೈಲ್ವೆ ಸಚಿವ ಪಿಯೂಶ್‌ ಗೋಯಲ್‌, ಕೂ ಆ್ಯಪ್‌ ಬಳಕೆ ಮಾಡುತ್ತಿರುವುದಕ್ಕೆ ಸಂತಸವಾಗುತ್ತಿದೆ. ಉತ್ತಮ ಅಪ್‌ಡೇಟ್ಗಳೂ ಸಿಗುತ್ತಿವೆ. ಈ ಮೈಕ್ರೋ ಬ್ಲಾಗಿಂಗ್‌ ಸೈಟ್‌ ಮೂಲಕ ನನ್ನನ್ನು ಸಂಪರ್ಕಿಸಿ ಎಂದಿದ್ದಾರೆ. ವಿಶೇಷವೆಂದರೆ, ಕೇಂದ್ರ ಸರಕಾರ 2020ರ ಆಗಸ್ಟ್‌ನಲ್ಲಿ ನಡೆಸಿದ ಸ್ವದೇಶಿ ಆ್ಯಪ್‌ಗಳ ಸ್ಪರ್ಧೆಯಲ್ಲಿ ಕೂ ಬಹುಮಾನ ಗಳಿಸಿತ್ತು. ಬೆಂಗಳೂರು ಮೂಲದ ನವೋದ್ಯಮವೊಂದು ಇದನ್ನು ರೂಪಿಸಿದ್ದು, ಸ್ಥಳೀಯ ಭಾಷೆಗಳಲ್ಲೂ ಸೇವೆ ನೀಡುತ್ತಿದೆ. ಅಲ್ಲದೆ, ತನ್ನ ಪೇಜ್‌ನಲ್ಲಿಯೇ ಭಾರತೀಯರಿಗಾಗಿ ಈ ಆ್ಯಪ್‌ ಅನ್ನು ಸೃಷ್ಟಿಸಲಾಗಿದ್ದು, ಜನರು ಅವರವರ ಮಾತೃ ಭಾಷೆಯಲ್ಲೇ ತಮ್ಮ ಭಾವನೆ ವ್ಯಕ್ತಪಡಿಸಬಹುದಾಗಿದೆ ಎಂದು ಬರೆದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next