ಹೊಸದಿಲ್ಲಿ: ಕೇಂದ್ರ ಸರಕಾರದಿಂದ ಸಾಲ, ಅನುದಾನ ಅಥವಾ ಮತ್ಯಾವುದೇ ಆರ್ಥಿಕ ನೆರವು ಪಡೆಯಲು ಕೇಂದ್ರಕ್ಕೆ ಸುಳ್ಳು ವರದಿಗಳನ್ನು ಸಲ್ಲಿಸುವ ರಾಜ್ಯ ಸರಕಾರಗಳ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಹಣಕಾಸು ಇಲಾಖೆ ಎಲ್ಲ ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ.
ಎಲ್ಲ ರಾಜ್ಯಗಳ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಕೇಂದ್ರ ಹಣಕಾಸು ಇಲಾಖೆ, “”ಕೆಲವೊಮ್ಮೆ ಉದ್ದೇಶಪೂರ್ವಕವಾಗಿ, ಇನ್ನು ಕೆಲವೊಮ್ಮೆ ಬೇಜವಾಬ್ದಾರಿಯಿಂದ ಸುಳ್ಳು ಲೆಕ್ಕ ನೀಡುತ್ತವೆ. ಇಂತಹ ಪ್ರಕರಣಗಳು ಬಯಲಿಗೆ ಬಂದಿವೆ. ಇನ್ನು ಮುಂದೆ ಹೀಗಾದರೆ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಹೇಳಿದೆ.
ಇದನ್ನೂ ಓದಿ:ಲತಾ ಮಂಗೇಶ್ಕರ್ ಸ್ಮರಣಾರ್ಥ ಮೊದಲ ಪ್ರಶಸ್ತಿ ಪ್ರಧಾನಿ ಮೋದಿಗೆ
ವಿವಿಧ ರಾಜ್ಯಗಳಿಗೆ ಸೇವಾ ನಿಮಿತ್ತ ಕೇಂದ್ರದಿಂದ ನಿಯೋಜನೆಗೊಂಡಿ ರುವ ಐಎಎಸ್, ಐಪಿಎಸ್ ಅಧಿಕಾರಿಗಳೂ ಇಂಥ ಸುಳ್ಳು ವರದಿಗಳನ್ನು ರಚಿಸುವಲ್ಲಿ ಸಹಕಾರ ನೀಡುತ್ತಿರುವ ವಿಚಾರವೂ ಕೇಂದ್ರದ ಗಮನಕ್ಕೆ ಬಂದಿದ್ದು, ಪ್ರಕರಣಗಳ ತನಿಖೆ ವೇಳೆ ಅವರ ಪಾತ್ರವಿರುವುದು ಸಾಬೀತಾದರೆ ಆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.
ಈ ಆರೋಪ ಹೊತ್ತಿರುವ ಅಧಿಕಾರಿಗಳ ಬಡ್ತಿ, ವರ್ಗಾವಣೆ, ಇತರ ಹುದ್ದೆಗಳಿಗೆ ನಿಯೋಜನೆಗೊಳ್ಳುವಂಥ ಸಂದರ್ಭಗಳಲ್ಲಿ ಈ ಪ್ರಕರಣಗಳನ್ನು ಪರಿಗಣಿಸಿ, ಶಿಕ್ಷೆಯ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ವಿತ್ತ ಸಚಿವಾಲಯ ಹೇಳಿದೆ.