ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮಳೆ ಹಾನಿ ಕುರಿತು ಅಧ್ಯಯನ ಮಾಡಲು ಇಂದು ಜಿಲ್ಲೆಗೆ ಆಗಮಿಸಿರುವ ಕೇಂದ್ರ ವಿಪತ್ತು ಅಧ್ಯಯನ ತಂಡದ ಮುಖ್ಯಸ್ಥರಾದ ಸುಶಿಲ್ ಪಾಲ್ (ಮುಖ್ಯ ನಿಯಂತ್ರಕರು,ಲೆಕ್ಕಪತ್ರ) ಮತ್ತು ಕೇಂದ್ರ ವಿಪತ್ತು ಅಧ್ಯಯನ ತಂಡದ ಸದಸ್ಯ ಸುಭಾಷ್ ಚಂದ್ರ (ನಿರ್ದೇಶಕರು,ಕೃಷಿ ಇಲಾಖೆ) ಅವರನ್ನು ಒಳಗೊಂಡ ತಂಡ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಅವರಿಂದ ಮಾಹಿತಿ ಪಡೆದು ಮೊದಲಿಗೆ ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗ್ರಾಮಕ್ಕೆ ಭೇಟಿ ನೀಡಿತು.
ನಂತರ ಆ ಗ್ರಾಮ ವ್ಯಾಪ್ತಿಯಲ್ಲಿ ರೈತರ ಹೊಲದಲ್ಲಿ ಮಳೆ ಹಾನಿ ಆಗಿರುವ ರಾಗಿ, ಜೋಳ, ತೊಗರಿ ಬೆಳೆಗಳ ಹಾನಿ ಬಗ್ಗೆ ಅಧಿಕಾರಿಗಳು ಹಾಗೂ ಸ್ಥಳೀಯ ರೈತರಿಂದ ಮಾಹಿತಿ ಪಡೆದರು.
ಅಜ್ಜವಾರ ಗ್ರಾಮದ ರೈತರೋರ್ವರ ಹೊಲದಲ್ಲಿ ಜಿಲ್ಲಾಡಳಿತ ನಿರ್ಮಿಸಿದ್ದ ಪೋಟೊ ಗ್ಯಾಲರಿ ಹಾಗೂ ಪ್ರಾತ್ಯಕ್ಷೀಕೆ ಮೂಲಕ ಮಳೆ ಹಾನಿ ಬಗ್ಗೆ ವಿವರಿಸಿ ಜಿಲ್ಲಾಧಿಕಾರಿ ಆರ್. ಲತಾ ಅವರು ತಂಡದ ಗಮನ ಸೆಳೆದರು.
ಶಿಡ್ಲಘಟ್ಟ ನಗರದ ಕುರುಬರ ಪೇಟೆಯಲ್ಲಿ ಮಳೆಯಿಂದ ಮನೆಗಳು ಕುಸಿದು ಬಿದ್ದಿರುವುದನ್ನು ಕೇಂದ್ರದ ತಂಡ ಪರಿಶೀಲಿಸಿತು ನಗರಸಭೆಯ ಪೌರಾಯುಕ್ತ ಆರ್ ಶ್ರೀಕಾಂತ್ ಅವರು ತಂಡಕ್ಕೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್. ಲತಾ,ಚಿಕ್ಕಬಳ್ಳಾಪುರ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್, ಆಯುಕ್ತ ಡಾ||ಮನೋಜ್ ರಾಜನ್, ಅಪರ ಕೃಷಿ ನಿರ್ದೇಶಕ ಬಿ.ಬಸವರಾಜು, ಅಪರ ತೋಟಗಾರಿಕಾ ನಿರ್ದೇಶಕ ಬಿ.ಕೆ. ದುಂಡಿ, ಉಪ ವಿಭಾಗಾಧಿಕಾರಿ ಎ.ಎನ್ ರಘು ನಂದನ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ರೂಪಾ, ಶಿಡ್ಲಘಟ್ಟ ತಹಸೀಲ್ದಾರ್ ಬಿಎಸ್ ರಾಜೀವ್, ತಾಪಂ ಇಒ ಚಂದ್ರಕಾಂತ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.