Advertisement

ಜಲ ಸಂರಕ್ಷಣಾ ಕಾಮಗಾರಿ ಪರಿಶೀಲಿಸಿದ ಕೇಂದ್ರ ತಂಡ

04:29 PM Aug 09, 2019 | Suhan S |

ತುಮಕೂರು: ಬೆಟ್ಟ-ಗುಡ್ಡ ಪ್ರದೇಶಗಳಲ್ಲಿ ನೀರು ಉಕ್ಕುವ ತಲಪುರಗಿ ನೀರಿನ ಬಾವಿ ಕಾಮಗಾರಿಗೆ ಆದ್ಯತೆ ನೀಡಬೇಕೆಂದು ಜಲಶಕ್ತಿ ಅಭಿಯಾನ ಕೇಂದ್ರ ತಂಡದ ಜಿಲ್ಲಾ ನೋಡಲ್ ಅಧಿಕಾರಿ ಆರ್‌.ಕೆ. ಚಂಡೋಲಿಯಾ ಸಲಹೆ ನೀಡಿದರು.

Advertisement

ಮಧುಗಿರಿ ತಾಲೂಕು ಚಿನಕವಜ್ರ ಗ್ರಾಮಕ್ಕೆ ಭೇಟಿ ನೀಡಿ ಜಲ ಸಂರಕ್ಷಣಾ ಕಾಮಗಾರಿ ಪರಿಶೀಲಿಸಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉತ್ತಮ್‌ರಿಂದ ಮಾಹಿತಿ ಪಡೆದು ಮಾತನಾಡಿದರು. ಬೇಸಿಗೆ ಕಾಲದಲ್ಲಿಯೂ ನೀರು ಇಂಗದಿರುವ ನೀರು ಸಂರಕ್ಷಣಾ ಕಾಮಗಾರಿ ಕೈಗೊಂಡಲ್ಲಿ ನೀರಿನ ಬವಣೆ ತಲೆದೋರದು ಎಂದು ತಿಳಿಸಿದರು.

ಕೃಷಿ ಚಟುವಟಿಕೆಗೆ ನೀರು ಬಳಕೆ: ಮಳೆಗಾಲದಲ್ಲಿ ತಲಪುರಗಿಯ ಸುತ್ತಲೂ ಇರುವ ಬೆಟ್ಟಗಳ ಬುಡದಲ್ಲಿ ಮಳೆ ನೀರು ಇಂಗಿ ಭೂಮಿ ಮೂಲಕ ಬಸಿದು ಈ ತಲಪುರಗಿಯಲ್ಲಿ ಉಕ್ಕುತ್ತದೆ. ಹತ್ತಾರು ಅಡಿಗಳ ಆಳದಲ್ಲಿಯೇ ನೀರು ದೊರೆಯುವ ಈ ತಲಪುರಗಿ ನೀರನ್ನು ಸದ್ಯ ಸುತ್ತಮುತ್ತಲಿನ ರೈತರು ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಮಳೆಗಾಲದಲ್ಲಿ ಈ ತಲಪುರಗಿ ತುಂಬಿ ಚೋಳೆನಹಳ್ಳಿ ಕೆರೆ-ಮಧುಗಿರಿ ಕೆರೆ-ಬಿಜವರ ಕೆರೆಗೆ ನೀರು ಹರಿದು ಹೋಗುತ್ತದೆ ಎಂದು ಉತ್ತಮ್‌ ಹೇಳಿದರು.

ಮುಂದಿನ ದಿನಗಳಲ್ಲಿ ತಲಪುರಗಿ ನೀರನ್ನು ಓವರ್‌ ಹೆಡ್‌ಟ್ಯಾಂಕ್‌ಗೆ ತುಂಬಿಸಿ ಚಿನಕವಜ್ರ ಗ್ರಾಮಕ್ಕೆ ಸರಬರಾಜು ಮಾಡುವ ಉದ್ದೇಶವಿದ್ದು, ನೀರಿನ ಸರಬರಾಜಿಗೆ ಅಗತ್ಯವಿರುವ ಕೊಳವೆ ಮಾರ್ಗ ಈಗಾಗಲೇ ಅಳವಡಿಸಲಾಗಿದೆ. ತಲಪುರಗಿ ಕಾಮಗಾರಿ ನರೇಗಾ ಯೋಜನೆಯಡಿ 8.85 ಲಕ್ಷ ರೂ. ವೆಚ್ಚದಲ್ಲಿ ಕೈಗೊಂಡು 2016-17ರಲ್ಲಿ ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.

ನಂತರ ದಬ್ಬೆಘಟ್ಟ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕಾ ಯೋಜನೆಯಡಿ 75 ಸಾವಿರ ರೂ. ಸಹಾಯಧನ ಒಳಗೊಂಡಂತೆ ಒಟ್ಟು 1.50 ಲಕ್ಷ ರೂ. ವೆಚ್ಚದಲ್ಲಿ ಕೃಷಿಕ ಶಿವಣ್ಣ ಅವರ ಜಮೀನಿನಲ್ಲಿ ನಿರ್ಮಿಸಲಾದವೈಯಕ್ತಿಕ ಕೃಷಿ ಹೊಂಡ ವೀಕ್ಷಿಸಿದ ತಂಡ ಮಧುಗಿರಿ ಹಿರಿಯ ಸಹಾಯಕ ಕೃಷಿ ನಿರ್ದೇಶಕ ವಿಶ್ವನಾಥಗೌಡರಿಂದ ಮಾಹಿತಿ ಪಡೆಯಿತು.

Advertisement

ನಾಲಾ ಬದು ಕಾಮಗಾರಿ ವೀಕ್ಷಣೆ: 13ಲಕ್ಷ ಲೀ. ಸಂಗ್ರಹ ಸಾಮರ್ಥ್ಯವಿರುವ ಈ ಕೃಷಿ ಹೊಂಡದ ನೀರನ್ನು ತೋಟಗಾರಿಕೆ ಬೆಳೆಗೆ ಬಳಸಲಾಗುತ್ತಿದೆ ಎಂದು ವಿಶ್ವನಾಥಗೌಡ ತಿಳಿಸಿದರು. ನರೇಗಾ ಯೋಜನೆಯಡಿ 3 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ 30 ಮೀ. ಉದ್ದದ ನಾಲಾ ಬದು ಕಾಮಗಾರಿ ವೀಕ್ಷಿಸಿತು. ಕೋಟೆಕಲ್ಲಪ್ಪನ ಬೆಟ್ಟದಲ್ಲಿ ಅರಣ್ಯ ಇಲಾಖೆಯಿಂದ 2017-18 ಹಾಗೂ 2018-19ನೇ ಸಾಲಿನಲ್ಲಿ 1.73 ಲಕ್ಷ ರೂ. ವೆಚ್ಚದಲ್ಲಿ ರಸ್ತೆಬದಿ ನಿರ್ಮಿಸಲಾಗಿರುವ ನೆಡುತೋಪು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿತು.

ಮಧುಗಿರಿ ವಲಯ ಅರಣ್ಯಾಧಿಕಾರಿ ತಾರಕೇಶ್ವರಿ ಮಾತನಾಡಿ, 10 ಮೀ. ಅಂತರದಲ್ಲಿ ಒಂದು ಸಸಿಯಂತೆ 3 ಕಿ.ಮೀ. ದೂರ ಸುಮಾರು 1500 ಬೇವು, ಆಲ, ಹತ್ತಿ, ಹಿಪ್ಪೆ, ಅರಳಿ, ನೇರಳೆ, ಜಂಬುನೇರಳೆ ಸಸಿ ನೆಡಲಾಗಿದೆ ಎಂದು ಹೇಳಿದರು. ಬಳಿಕ ತಂಡವು ಮಧುಗಿರಿ ಪುರಸಭೆಯಿಂದ 14ನೇ ಹಣಕಾಸು ಯೋಜನೆಯಡಿ ಸಿದ್ದಾಪುರ ಪ್ರದೇಶದಲ್ಲಿ 90ಸಾವಿರ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದ ಕೊಳವೆಬಾವಿ ಮರುಪೂರಣ ಕಾಮಗಾರಿ ವೀಕ್ಷಿಸಿ ಗುತ್ತಿಗೆದಾರರಿಂದ ಮಾಹಿತಿ ಪಡೆಯಿತು.

ತಂಡದ ಬಲರಾಮ್‌ ಪ್ರಸಾದ ಭಿಮಲ್, ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ದೊಡ್ಡಸಿದ್ದಯ್ಯ, ಕೃಷಿ ಉಪನಿರ್ದೇಶಕ ಉಮೇಶ್‌, ಕೃಷಿ ಸಹಾಯಕ ನಿರ್ದೇಶಕ ಡಿ. ಹನುಮಂತರಾಯಪ್ಪ, ಜಿಲ್ಲಾ ಪಂಚಾಯಿತಿ ಸಾಮಾಜಿಕ ಪರಿಶೋಧಕ ಚಂದ್ರಶೇಖರ್‌, ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next