ಬೆಂಗಳೂರು: ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ಸೌಲಭ್ಯ ಒದಗಿಸಲು ನಬಾರ್ಡ್ ಬ್ಯಾಂಕ್‌ನಿಂದ ನೀಡುವ ಆರ್ಥಿಕ ಸಹಾಯದ ಪ್ರಮಾಣವನ್ನು ಶೇ.40ರಿಂದ ಶೇ.60ಕ್ಕೆ ಹೆಚ್ಚಿಸಲು ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಸಮ್ಮತಿಸಿದ್ದಾರೆ.
ದೆಹಲಿಯಲ್ಲಿ ಬುಧವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ ವೇಳೆ ಕೇಂದ್ರ ಸಚಿವರು ಈ ಭರವಸೆ ನೀಡಿದ್ದಾರೆ. ಇದಲ್ಲದೆ, ಸಹಜ ಕೃಷಿ ಪದ್ಧತಿಯನ್ನು ಪ್ರೋತ್ಸಾಹಿಸಲು ಅಗತ್ಯ ಹಣಕಾಸು ನೆರವು ನೀಡುವುದಾಗಿಯೂ ಭರವಸೆ ನೀಡಿದ್ದಾರೆ.
ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕುಮಾರಸ್ವಾಮಿ, ರಾಜ್ಯದ ವಿವಿಧ ಬ್ಯಾಂಕುಗಳಿಂದ ಸುಮಾರು 48 ಲಕ್ಷ ರೈತರು ಒಟ್ಟಾರೆ 53 ಸಾವಿರ ಕೋಟಿ ರೂ.ಸಾಲ ಪಡೆದಿದ್ದಾರೆ. ಈ ಪೈಕಿ ಶೇ. 48ರಷ್ಟು ಅಂದರೆ 23 ಲಕ್ಷ ರೈತರು ಸಹಕಾರಿ ಬ್ಯಾಂಕುಗಳಿಂದ 12,000 ಕೋಟಿ ರೂ. ಸಾಲ ತೆಗೆದುಕೊಂಡಿದ್ದು, ಇದು ಒಟ್ಟಾರೆ ಸಾಲದ ಪ್ರಮಾಣದ 20.75ರಷ್ಟಾಗುತ್ತದೆ. ಆದರೆ, ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಲ್ಲಿ ಸಂಪನ್ಮೂಲ ಕೊರತೆಯಿಂದ ರೈತರಿಗೆ ಹೆಚ್ಚಿನ ಸಾಲ ವಿತರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಬಾರ್ಡ್ ಬ್ಯಾಂಕ್‌ನಿಂದ ಇವುಗಳಿಗೆ ನೀಡುವ ಆರ್ಥಿಕ ನೆರವಿನ ಪ್ರಮಾಣವನ್ನು ಶೇ. 40ರಿಂದ ಶೇ. 75ಕ್ಕೆ ಏರಿಸಬೇಕು ಎಂಬ ತಮ್ಮ ಮನವಿಗೆ ಸ್ಪಂದಿಸಿರುವ ಕೇಂದ್ರ ಸಚಿವರು, ನಬಾರ್ಡ್ ಆರ್ಥಿಕ ನೆರವಿನ ಪ್ರಮಾಣವನ್ನು ಶೇ. 60ಕ್ಕೆ ಏರಿಕೆ
ಮಾಡಿಕೊಡುವುದಾಗಿ ತಿಳಿಸಿದ್ದಾರೆ ಎಂದರು.
ಮುಖ್ಯಮಂತ್ರಿಗಳೊಂದಿಗೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಕೃಷಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ, ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಅವರೂ ಇದ್ದರು.