Advertisement
ಇಷ್ಟೇ ಅಲ್ಲದೇ, ಹಂಗಾಮಿ ಮುಖ್ಯಸ್ಥರಾಗಿ ಒಡಿಶಾ ಕೇಡರ್‌ನ ಎಂ. ನಾಗೇಶ್ವರ ರಾವ್ ಅವರನ್ನು ನೇಮಕ ಮಾಡಲಾಗಿದೆ. ಮಧ್ಯರಾತ್ರಿಯೇ ಇಬ್ಬರೂ ಮುಖ್ಯಸ್ಥರ ಕಚೇರಿಗಳಿಗೆ ಬೀಗ ಜಡಿಯಲಾಗಿದ್ದು, ಅವರ ಬೆಂಗಾವಲನ್ನೂ ಹಿಂಪಡೆಯಲಾಗಿದೆ. ಇಬ್ಬರ ವಿರುದ್ಧ ಇರುವ ಆರೋಪಗಳ ತನಿಖೆ ನಡೆಸುವ ಜವಾಬ್ದಾರಿಯನ್ನು ನಾಗೇಶ್ವರ ರಾವ್‌ಗೆ ವಹಿಸಲಾಗಿದೆ. ಮಂಗಳವಾರ ತಡರಾತ್ರಿ ಸಿವಿಸಿ ಶಿಫಾರಸಿನ ಅನ್ವಯ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ನೇಮಕ ಸಮಿತಿ ಈ ನಿರ್ಧಾರ ತೆಗೆದುಕೊಂಡಿದೆ. ಆಲೋಕ್ ಮತ್ತು ರಾಕೇಶ್ ಅವರ ಎಲ್ಲ ಅಧಿಕಾರಿಗಳನ್ನೂ ವಾಪಸ್ ಪಡೆಯಲಾಗಿದೆ. ಇದರ ಬೆನ್ನಲ್ಲೇ ತಮ್ಮನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದ ಕೇಂದ್ರ ಸರಕಾರದ ನಿರ್ಧಾರ ಪ್ರಶ್ನಿಸಿ ಆಲೋಕ್ ವರ್ಮಾ, ಸುಪ್ರೀಂ ಕೋರ್ಟ್ ಬಾಗಿಲು ಬಡಿದಿದ್ದಾರೆ. ಈ ಅರ್ಜಿ ವಿಚಾರಣೆ ಶುಕ್ರವಾರ ನಡೆಯಲಿದೆ.
ಆದೇಶ ಜಾರಿಯಾದ ಕೆಲವೇ ನಿಮಿಷಗಳಲ್ಲಿ ದಿಲ್ಲಿಯ ಲೋಧಿ ರಸ್ತೆಯಲ್ಲಿರುವ ಸಿಬಿಐ ಕಚೇರಿಗೆ ಆಗಮಿಸಿದ ನಾಗೇಶ್ವರ ರಾವ್ ಅಧಿಕಾರ ವಹಿಸಿಕೊಂಡು, ರಾಕೇಶ್ ಹಾಗೂ ಆಲೋಕ್‌ರ ಕಚೇರಿಗೆ ಬೀಗ ಜಡಿದಿದ್ದಾರೆ. ಅಷ್ಟೇ ಅಲ್ಲ, ಇಬ್ಬರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಗಳೂ ಈಗ ಅತಂತ್ರರಾಗಿದ್ದಾರೆ. ಮೂಲಗಳ ಪ್ರಕಾರ ಆಲೋಕ್ ವರ್ಮಾ ತಂಡದಲ್ಲಿದ್ದ ಅಧಿಕಾರಿ ಗಳನ್ನು ವರ್ಗಾವಣೆ ಮಾಡಲಾಗಿದೆ. ರಾಕೇಶ್ ವಿರುದ್ಧದ ಆರೋಪಗಳ ತನಿಖೆ ಮಾಡುತ್ತಿದ್ದ ಅಧಿಕಾರಿಯನ್ನು ಪೋರ್ಟ್‌ಬ್ಲೇರ್‌ಗೆ ವರ್ಗಾವಣೆ ಮಾಡಲಾಗಿದೆ. ಸಿಬಿಐ ಮೇಲೆ ನಿಯಂತ್ರಣಾಧಿಕಾರ ಹೊಂದಿರುವ ಮುಖ್ಯ ವಿಚಕ್ಷಣಾ ಕಮಿಷನರ್ ಕೆ.ವಿ ಚೌಧರಿ ಮಂಗಳವಾರವೇ ಆಲೋಕ್ ಹಾಗೂ ರಾಕೇಶ್‌ರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿ ಎಂದು ಪ್ರಧಾನಿ ಮೋದಿಗೆ ಶಿಪಾರಸು ಮಾಡಿದ್ದರು. ಇದಕ್ಕೂ ಮೊದಲು, ಅಂದರೆ ಸೋಮವಾರ ಈ ವಿಚಾರದ ಬಗ್ಗೆ ವರದಿ ನೀಡುವಂತೆ ಪ್ರಧಾನಿ ಕಚೇರಿ ಸಿವಿಸಿಯನ್ನು ಕೇಳಿತ್ತು.
Related Articles
ಆಲೋಕ್ ವರ್ಮಾ ವಿರುದ್ಧದ ದೂರುಗಳಿಗೆ ಸಂಬಂಧಿಸಿದಂತೆ ದಾಖಲೆ ನೀಡುವಂತೆ ಹಲವು ಬಾರಿ ಸೂಚನೆ ನೀಡಲಾಗಿತ್ತು. ಆದರೆ ಉದ್ದೇಶಪೂರ್ವಕವಾಗಿ ಸಿವಿಸಿಗೆ ಆಲೋಕ್ ವರ್ಮಾ ದಾಖಲೆ ನೀಡಿಲ್ಲ. ಈ ವಿಚಾರದಲ್ಲಿ ಸಿಬಿಐ ಸಹಕಾರ ನೀಡುತ್ತಿರಲಿಲ್ಲ ಎಂದು ಮಾಹಿತಿ ಮತ್ತು ವಾರ್ತಾ ಪ್ರಸಾರ ಸಚಿವಾಲಯ ಹೊರಡಿಸಿದ ಹೇಳಿಕೆಯಲ್ಲಿ ವಿವರಿಸಲಾಗಿದೆ.
Advertisement
ವಿಪಕ್ಷಗಳ ಆಕ್ಷೇಪಕೇಂದ್ರ ಸರಕಾರದ ಈ ನಿರ್ಧಾರವನ್ನು ಕಾಂಗ್ರೆಸ್ ಆದಿಯಾಗಿ ವಿಪಕ್ಷಗಳು ಪ್ರಶ್ನಿಸಿವೆ. ಪ್ರಧಾನಿ, ವಿಪಕ್ಷ ನಾಯಕ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಂದ ಆಯ್ಕೆಯಾಗಿರುವ ಸಿಬಿಐ ನಿರ್ದೇಶಕರನ್ನು ಸಿವಿಸಿ ಶಿಫಾರಸಿನ ಅನ್ವಯ ರಜೆ ಮೇಲೆ ಕಳುಹಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಪ್ರತಿಪಾದಿಸಿದ್ದಾರೆ. ಆದರೆ ಸಿಬಿಐ ಸಂಸ್ಥೆಯ ಸಮಗ್ರತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ರಜೆ ಮೇಲೆ ಕಳುಹಿಸಲಾಗಿದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಸ್ಪಷ್ಟನೆ ನೀಡಿದ್ದಾರೆ. ಕೋರ್ಟ್ ಮೊರೆ ಹೋದ ಆಲೋಕ್
ತನ್ನನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದ್ದನ್ನು ಪ್ರಶ್ನಿಸಿ ಸಿಬಿಐ ನಿರ್ದೇಶಕ ಆಲೋಕ್ ವರ್ಮಾ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಮುಖ್ಯ ನ್ಯಾ| ರಂಜನ್ ಗೊಗೋಯ್ ನೇತೃತ್ವದ ನ್ಯಾಯಪೀಠದಲ್ಲಿ ಇದು ಶುಕ್ರವಾರ ವಿಚಾರಣೆಗೆ ಬರಲಿದೆ. ವರ್ಮಾ ನಿವೃತ್ತಿಗೆ ಎರಡು ತಿಂಗಳು ಇರುವಾಗ ಅವರನ್ನು ಹುದ್ದೆಯಿಂದ ವಜಾಗೊಳಿಸಲು ಸಾಧ್ಯವಿಲ್ಲ ಎಂದು ವರ್ಮಾ ಪರ ವಕೀಲರು ವಾದಿಸಿದ್ದಾರೆ. ಯಾರು ನಾಗೇಶ್ವರ ರಾವ್?
ಸಿಬಿಐಯ ಸಂಕಷ್ಟದ ದಿನಗಳಲ್ಲಿ ಸಂಸ್ಥೆಯ ನೇತೃತ್ವ ವಹಿಸಿರುವ ನಾಗೇಶ್ವರ ರಾವ್, 1986ರ ಒಡಿಶಾ ಕೇಡರ್ ಐಪಿಎಸ್ ಅಧಿಕಾರಿ. ಸಿಬಿಐ ಚೆನ್ನೈಯಲ್ಲಿರುವ ದಕ್ಷಿಣ ವಲಯಕ್ಕೆ ಜಂಟಿ ನಿರ್ದೇಶಕರಾಗಿದ್ದರು. ಹೈದರಾಬಾದ್ ಉಸ್ಮಾನಿಯಾ ವಿವಿಯಲ್ಲಿ ರಸಾಯನ ಶಾಸ್ತ್ರದಲ್ಲಿ ಪದವಿ ಪಡೆದಿರುವ ರಾವ್, ದಕ್ಷ ಅಧಿಕಾರಿ ಎಂದೇ ಹೆಸರಾಗಿದ್ದಾರೆ. ಪಶ್ಚಿಮ ಬಂಗಾಲದ ಶಾರದಾ ಚಿಟ್ ಫಂಡ್ ಹಗರಣ ಸಹಿತ ಹಲವು ಪ್ರಮುಖ ಪ್ರಕರಣಗಳ ತನಿಖೆ ನಡೆಸಿದ್ದರು.