Advertisement

Union Budget 2024: ಜಿಲ್ಲೆಗೆ ಹೆಚ್ಚುವುದೇ ರೈಲ್ವೆ ಸೌಲಭ್ಯ- ವಿಸ್ತರಣೆಯಾಗುವವೇ ರೈಲು?

02:45 PM Jan 30, 2024 | Team Udayavani |

ಉದಯವಾಣಿ ಸಮಾಚಾರ
ಚಾಮರಾಜನಗರ:ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಜಿಲ್ಲೆಗಳಿಗೇ ಎಂದು ಪ್ರತ್ಯೇಕವಾಗಿ ಲಭ್ಯವಾಗುವುದು ಪ್ರಮುಖವಾಗಿ ರೈಲ್ವೆ ಯೋಜನೆಗಳು. ಕಳೆದ ಐದು ವರ್ಷದ ಕೇಂದ್ರ ಬಜೆಟ್‌ನಲ್ಲಿ ಜಿಲ್ಲೆಗೆ ಯಾವುದೇ ಯೋಜನೆಯಾಗಲೀ, ಹೊಸ ರೈಲಾಗಲೀ ದೊರೆತಿಲ್ಲ.

Advertisement

ಚಾಮರಾಜನಗರ ಕರ್ನಾಟಕದ ದಕ್ಷಿಣ ತುತ್ತ ತುದಿಯ ಕೊನೆಯ ರೈಲ್ವೆ ನಿಲ್ದಾಣ. ಇಲ್ಲಿಂದ ತ.ನಾಡಿನ ಮೇಟುಪಾಳ್ಯಂಗೆ ರೈಲ್ವೆ ಸಂಪರ್ಕ ಕಲ್ಪಿಸಬೇಕೆಂಬ ಐದು ದಶಕಗಳ ಕನಸಿನ ಯೋಜನೆ, ದಿಂಬಂ ಅರಣ್ಯ ಪ್ರದೇಶದಲ್ಲಿ ರೈಲು ಹಳಿ ಹಾಕಲು ಕೇಂದ್ರ ಅರಣ್ಯ ಪರಿಸರ ಇಲಾಖೆ ಒಪ್ಪಿಗೆ ನೀಡದ ಕಾರಣ ಬಹಳ ಹಿಂದೆಯೇ ಮೂಲೆ ಸೇರಿತು.

ರೈಲು ಮಾರ್ಗ ಬೆಂಗಳೂರಿಗೆ ವಿಸ್ತರಿಸ ಲಿದೆ: ಇದಾದ ಬಳಿಕ ಬೆಂಗಳೂರಿನ ಹೆಜ್ಜಾಲದಿಂದ, ಕನಕಪುರ, ಮಳವಳ್ಳಿ, ಕೊಳ್ಳೇಗಾಲ ಮೂಲಕ ಚಾಮರಾಜನಗರ ತಲುಪುವ 129 ಕಿ.ಮೀ. ಉದ್ದದ, 1330 ಕೋಟಿ ರೂ. ವೆಚ್ಚದ ನೂತನ ರೈಲ್ವೆ ಮಾರ್ಗವನ್ನುಯುಪಿಎ ಸರ್ಕಾರದ ಅವಧಿಯಲ್ಲಿ, ಅಂದಿನ ರೈಲ್ವೆ ಸಚಿವ ಮಲ್ಲಿಕಾರ್ಜುನ ‌ಖರ್ಗೆ ತಮ್ಮ ಬಜೆಟ್‌ನಲ್ಲಿ
ಘೋಷಿಸಿದ್ದರು. ಅದಕ್ಕಾಗಿ ಪ್ರಥಮ ಹಂತವಾಗಿ 10 ಕೋಟಿ ರೂ.ಗಳನ್ನೂ ನೀಡಿದ್ದರು. ಈ ಯೋಜನೆ ಅನುಷ್ಠಾನಕ್ಕೆ ಬಂದರೆ, ಮೈಸೂರಿನಿಂದ ಚಾಮರಾಜನಗರಕ್ಕೇ ಬಂದು ವಾಪಸ್‌ ಹೋಗುವ ರೈಲು ಮಾರ್ಗ ಬೆಂಗಳೂರಿಗೆ ವಿಸ್ತರಿಸಲಿದೆ.

ಆದರೆ, ಯುಪಿಎ ಸರ್ಕಾರದ ಬಳಿಕ ಬಂದ ಎನ್‌ ಡಿಎ ನೇತೃತ್ವದ ಕೇಂದ್ರ ಸರ್ಕಾರ ಇಲ್ಲಿಯವರೆಗೆ ಈ ಯೋಜನೆಗೆ ಯಾವುದೇ ಅನುದಾನ ನೀಡಲಿಲ್ಲ. ಎರಡನೇ ಅವಧಿಯಲ್ಲಾದರೂ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಂದ ಒಂದಷ್ಟು ಅನುದಾನ ನಿರೀಕ್ಷಿಸಲಾಗಿತ್ತು. ಆದರೆ ಅದು ಸಹ ಈಡೇರಲಿಲ್ಲ.

ಘೋಷಣೆ, ಅನುದಾನ ನೀಡಿಲ್ಲ:
ಕೇಂದ್ರ ಬಜೆಟ್‌ ಮಂಡನೆಯಾದಾಗಲೆಲ್ಲ ಚಾಮರಾಜನಗರ ಜಿಲ್ಲೆಯ ರೈಲ್ವೆ ಅಭಿವೃದ್ಧಿಗೆ ಗುಟುಕು ಹನಿ ಸಿಗಬಹುದೆಂಬ ದೂರದ ನಿರೀಕ್ಷೆ ಜನರಲ್ಲಿರುತ್ತದೆ. ಇಳೆದ ಐದೂ ವರ್ಷ ಗಳ ರೈಲ್ವೆ ಬಜೆಟ್‌ನಲ್ಲಿ ಚಾಮರಾಜ ನಗರ ಜಿಲ್ಲೆಯ ರೈಲ್ವೆಗೆಂದೇ ಯಾವುದೇ ರೀತಿಯ ಘೋಷಣೆಯನ್ನಾಗಲೀ, ಅನುದಾನವನ್ನಾಗಲೀ ನೀಡಿಲ್ಲ.

Advertisement

ಪ್ರತಿ ಬಾರಿ ಕೇಂದ್ರ ಬಜೆಟ್‌ನಲ್ಲಿ ರೈಲ್ವೆ ಖಾತೆಯಿಂದ ಚಾಮರಾಜನಗರಕ್ಕೆ ಯಾವುದಾದರೂ ಹೊಸ ರೈಲು ಅಥವಾ ರೈಲ್ವೆ ಸ್ವಚ್ಛ ತಾ ಕಾರ್ಯಾ ಗಾರ ದೊರೆಯಬಹು ದೆಂಬ ನಿರೀಕ್ಷೆ ಜಿಲ್ಲೆಯ ಜನರಲ್ಲಿರುತ್ತದೆ. ಆ ನಿರೀಕ್ಷೆ ಕಳೆದ ಐದು ವರ್ಷಗಳಲ್ಲೂ ಈಡೇರಲಿಲ್ಲ.

ಚಾಮರಾಜನಗರವು ರಾಜ್ಯದ ಕೊನೆಯ ರೈಲ್ವೆ ನಿಲ್ದಾಣವಾಗಿದ್ದು, ಮೈಸೂರಿಗೆ ಬರುವ ಅನೇಕ ರೈಲುಗಳನ್ನು ಚಾಮರಾಜನಗರಕ್ಕೆ ವಿಸ್ತರಿಸಿದರೆ ಪ್ರಯಾಣಿಕರಿಗೆ ಬಹಳ ಅನುಕೂಲವಾಗುತ್ತಿತ್ತು. ಮುಖ್ಯವಾಗಿ ಹುಬ್ಬಳ್ಳಿ-ಧಾರವಾಡದಿಂದ ಮೈಸೂರಿಗೆ ಬರುವ, ಹಾಗೂ ಶಿವಮೊಗ್ಗದಿಂದ ಮೈಸೂರಿಗೆ ಬರುವ ರೈಲನ್ನು ಚಾಮರಾಜನಗರಕ್ಕೆ ವಿಸ್ತರಿಸಬೇಕೆಂಬುದು ಪ್ರಯಾಣಿಕರ ಒತ್ತಾಯವಾಗಿತ್ತು. ಈ ಬಗ್ಗೆ ಮೈಸೂರಿನ ಸಂಸದ ಪ್ರತಾಪ್‌ ಸಿಂಹ ಸಹ ಮನವಿ ಸಲ್ಲಿಸಿದ್ದರು. ಆದರೆ ಇದು ಜಾರಿಗೆ ಬರಲಿಲ್ಲ.

ಚಾಮರಾಜನಗರದಿಂದ ನಂಜನಗೂಡಿಗೆ 35 ಕಿ.ಮೀ. ಅಂತರವಿದ್ದು, ಈ ಮಾರ್ಗದಲ್ಲಿ ಯಾವುದೇ ಕ್ರಾಸಿಂಗ್‌ ಪಾಯಿಂಟ್‌ ಇಲ್ಲ. ಹೀಗಾಗಿ ರೈಲು ತಡವಾಗಿ ಹೊರಟಾಗ, ರೈಲ್ವೆ ವ್ಯಾಗನ್‌ಗಳು ಸಂಚರಿಸಿದಾಗ ರೈಲುಗಳು ನಂಜನಗೂಡು ಅಥವಾ ನಗರದಲ್ಲೇ ತಡವಾಗಿ ಹೊರಡಬೇಕಾಗಿದೆ. ಕವಲಂದೆ ನಿಲ್ದಾಣ ಮೇಲ್ದರ್ಜೆಗೇರಿಸಿ, ರೈಲ್ವೆ ಕ್ರಾಸಿಂಗ್‌ ಪಾಯಿಂಂಟ್‌ ಮಾಡಿದರೆ ಬಹಳ ಅನುಕೂಲವಾಗಲಿದೆ ಎಂದು ಹಿಂದಿನ ಸಂಸದ ದಿ. ಧ್ರುವನಾರಾಯಣ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು. ಅದು ಸಹ ಈಡೇರಲಿಲ್ಲ.

ಚಾಮರಾಜನಗರದಿಂದ ಮೈಸೂರಿಗೆ ಪ್ರತಿ ನಿತ್ಯ ಬೆಳಗ್ಗೆ 10.30ರ ನಂತರ ಮಧ್ಯಾಹ್ನ 3 ಗಂಟೆಯವರೆಗೆ ರೈಲು ಸಂಚಾರ ಇಲ್ಲ. ಈ
ಅವಧಿಯಲ್ಲಿ ಇನ್ನೊಂದು ಹೆಚ್ಚುವರಿ ರೈಲನ್ನು ಓಡಿಸಬೇಕೆಂಬ ಬೇಡಿಕೆಗೂ ಕಿಮ್ಮತ್ತು ಸಿಕ್ಕಿಲ್ಲ.

ಚಾಮರಾಜನಗರದಲ್ಲಿ ಸ್ವಚ್ಛತಾ ಘಟಕ ಸಹ ಇಲ್ಲ
ಮೈಸೂರಿನಲ್ಲಿರುವ ಸ್ವಚ್ಛತಾ ಘಟಕದಲ್ಲಿ ಈಗ ಹೆಚ್ಚು ಒತ್ತಡವಿದ್ದು, ಅನೇಕ ರೈಲುಗಳು ಅಲ್ಲೇ ನಿಲ್ಲಬೇಕಾ ಗಿದೆ. ಅದಕ್ಕೆ ಸ್ಥಳಾವಕಾಶವೂ ಇಲ್ಲದಂತಾಗಿದೆ. ಚಾ.ನಗರದಲ್ಲಿ ಸ್ವಚ್ಛತಾ ಘಟಕ ಸ್ಥಾಪಿಸಿದರೆ ಮೈಸೂರಿನಲ್ಲಿ ನಿಲ್ಲುವ ರೈಲುಗಳು ಚಾ.ನಗರಕ್ಕೆ ಬರುತ್ತವೆ. ಪ್ರಯಾಣಿಕರಿಗೂ ಇದರಿಂದ ಬಹಳ ಅನುಕೂಲವಾಗುತ್ತದೆ.

ಅಲ್ಲದೇ ಇಲ್ಲಿನ ನಿಲ್ದಾಣದಲ್ಲಿ ರೈಲುಗಳೂ ತಂಗಲು ಅವಕಾಶವಾಗುತ್ತದೆ ಎಂಬ ಕಾರಣದಿಂದ ಚಾಮರಾಜ ನಗರದಲ್ಲಿ
ರೈಲುಗಳ ಸ್ವಚ್ಛತಾ ಘಟಕ ಸ್ಥಾಪಿಸಬೇಕೆಂಬ ಬೇಡಿಕೆ ಇತ್ತು. ಅದು ಸಹ ಈಡೇರಿಲ್ಲ. ಚಾಮರಾಜ ನಗರದಿಂದ ಬೆಂಗಳೂರಿಗೆ ಸೀಮಿತವಾಗಿ ಎಕ್ಸ್‌ಪ್ರೆಸ್‌ ರೈಲೊಂದನ್ನು ಮಂಜೂರು ಮಾಡಬೇಕೆಂಬುದು ಪ್ರಯಾಣಿಕರ ಒತ್ತಾಯವಾಗಿತ್ತು. ಕಳೆದ ಐದು ವರ್ಷಗಳ ಬಜೆಟ್‌ನಲ್ಲಿ ರೈಲ್ವೆಯ ಈ ಬೇಡಿಕೆಗಳಲ್ಲಿ ಕೆಲವಾದರೂ ಜಾರಿಗೊಳ್ಳಬಹುದೆಂದು ಜಿಲ್ಲೆಯ ಸಾರ್ವಜನಿಕರು ಆಶಾಭಾವನೆ ಹೊಂದಿದ್ದರು. ಅದಾವುದೂ ಈಡೇರಿಲ್ಲ.

ನೈಪರ್‌ ಬರಲೇ ಇಲ್ಲ
ಚಾಮರಾಜನಗರದಲ್ಲಿ ರಾಷ್ಟ್ರೀಯ ಔಷಧ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯನ್ನು (ನೈಪರ್‌) ಬಜೆಟ್‌ನಲ್ಲಿ ಮಂಜೂರು ಮಾಡಿಕೊಡುವಂತೆ ಹಿಂದಿನ ಸಂಸದ ದಿ.ಆರ್‌. ಧ್ರುವನಾರಾಯಣ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು. ಈ ಸಂಸ್ಥೆ ದೇಶದ 7 ರಾಜ್ಯಗಳಲ್ಲಿ ಸ್ಥಾಪಿತವಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಮಾತ್ರ ಇಲ್ಲ. ಈ ಸಂಸ್ಥೆ ಸಹ ಜಿಲ್ಲೆಗೆ ಬರಲಿಲ್ಲ.

ಈ ಬಾರಿಯ ಬಜೆಟ್‌ನಲ್ಲಿ ಜಿಲ್ಲೆಯ ನಿರೀಕ್ಷೆಗಳು
*ಬೆಂಗಳೂರಿನ ಹೆಜ್ಜಾಲದಿಂದ ಕನಕಪುರ, ಮಳವಳ್ಳಿ, ಕೊಳ್ಳೇಗಾಲ ಚಾಮರಾಜನಗರಕ್ಕೆ ಮಂಜೂರಾಗಿರುವ ರೈಲ್ವೆ ಮಾರ್ಗಕ್ಕೆ ಅನುದಾನ ನೀಡಿ ಕಾಮಗಾರಿ ಆರಂಭಿಸುವುದು.
*ಮೈಸೂರಿಗೆ ಬರುವ ಅನೇಕ ರೈಲುಗಳನ್ನು ಚಾಮರಾಜನಗರಕ್ಕೆ ವಿಸ್ತರಿಸುವುದು. ಮುಖ್ಯವಾಗಿ ಹುಬ್ಬಳ್ಳಿ-ಧಾರ ವಾಡದಿಂದ ಮೈಸೂರಿಗೆ ಬರುವ, ಹಾಗೂ ಶಿವಮೊಗ್ಗದಿಂದ ಮೈಸೂರಿಗೆ ಬರುವ ರೈಲನ್ನು ಚಾಮರಾಜನಗರಕ್ಕೆ ವಿಸ್ತರಿಸಬೇಕು.
*ಚಾಮರಾಜನಗರದಿಂದ ಬೆಂಗಳೂರಿಗೆ ಸೀಮಿತವಾಗಿ ಎಕ್ಸ್‌ಪ್ರೆಸ್‌ ರೈಲೊಂದನ್ನು ಮಂಜೂರು ಮಾಡಬೇಕು.
*ಚಾಮರಾಜನಗರದಲ್ಲಿ ರೈಲು ಸ್ವಚ್ಛಗೊಳಿಸುವ ಕಾರ್ಯಾಗಾರ ಸ್ಥಾಪನೆ. *ಕವಲಂದೆಯಲ್ಲಿ ರೈಲ್ವೆ ಕ್ರಾಸಿಂಗ್‌ ಪಾಯಿಂಟ್‌ ನಿರ್ಮಾಣ.
*ಚಾಮರಾಜನಗರದಲ್ಲಿ ರಾಷ್ಟ್ರೀಯ ಔಷಧ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ನೈಪರ್‌) ಸ್ಥಾಪನೆ.

ಚಾಮರಾಜನಗರಕ್ಕೆ ರೈಲ್ವೆ ಮಾರ್ಗವಿದೆ. ಮೈಸೂರಿಗೆ ಮೂರ್ನಾಲ್ಕು ರೈಲುಗಳು ಸಂಚರಿಸುತ್ತವೆ ಎನ್ನುವುದನ್ನು ಬಿಟ್ಟರೆ ಪ್ರಯಾಣಿಕರಿಗೆ ಇವುಗಳಿಂದ ಹೆಚ್ಚಿನ ಅನುಕೂಲವಾಗುತ್ತಿಲ್ಲ. ಶಾಲೆ, ಕಚೇರಿ ಸಮಯಕ್ಕೆ ರೈಲುಗಳಿಲ್ಲ. ಹೆಚ್ಚಿನ ಜನರು ಬಸ್‌ಗಳನ್ನೇ ಅವಲಂಭಿಸಬೇಕಾಗಿದೆ. ಕೇಂದ್ರ ಸರ್ಕಾರ ಚಾಮರಾಜನಗರಕ್ಕೆ ಹೆಚ್ಚಿನ ರೈಲುಗಳ ಸೇವೆ ವಿಸ್ತರಿಸಬೇಕು.
●ಸಿ.ಎಂ.ನರಸಿಂಹಮೂರ್ತಿ,
ಕಲಾವಿದ, ಚಾ.ನಗರ

ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next