ಹೊಸದಿಲ್ಲಿ: ಎಲ್ಲರಿಗೂ ಬಜೆಟ್‌ನಲ್ಲಿ ಏನಾದರೂ ಒಂದು ಕೊಟ್ಟೇ ಕೊಡುತ್ತಾರೆ, ಆದರೆ ನಮ್ಮನ್ನು ಮಾತ್ರ ಮರೆತುಬಿಡುತ್ತಾರೆ ಎಂಬ ದೇಶದ ಮಧ್ಯಮ ವರ್ಗದ ಮುನಿಸಿಗೆ ಕರಗಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಅವರ ಬಹುದಿನಗಳ ಬೇಡಿಕೆಯಾದ ಆದಾಯ ತೆರಿಗೆ ಸ್ಲಾéಬ್ ಮಿತಿ ಹೆಚ್ಚಳ ಮಾಡಿ ಕೋಪ ತಣಿಸಲು ಮುಂದಾಗಿದ್ದಾರೆ. ಹಾಗೆಯೇ ಉಳಿತಾಯ ಯೋಜನೆಗಳ ಮೂಲಕ ಮಹಿಳೆಯರ ಮನವೊಲಿಕೆಗೂ ಹೆಜ್ಜೆ ಇರಿಸಿದ್ದಾರೆ.
ಲೋಕಸಭೆಯಲ್ಲಿ ಬುಧವಾರ ತಮ್ಮ ಐದನೇ ಬಜೆಟ್ ಮಂಡಿಸಿದ ನಿರ್ಮಲಾ, ಯಾರಿಗೂ ಹೆಚ್ಚು ಹೊರೆ ನೀಡದೆ ಎಲ್ಲರನ್ನೂ ತೃಪ್ತಗೊಳಿಸುವ ಪ್ರಯತ್ನ ಮಾಡಿದ್ದಾರೆ. ರಕ್ಷಣೆ, ಆರೋಗ್ಯ, ಕೃಷಿ, ಗ್ರಾಮೀಣಾಭಿವೃದ್ಧಿ, ಮೂಲಸೌಕರ್ಯ, ರೈಲ್ವೇ, ಸಾರ್ವಜನಿಕ ವಿತರಣೆ -ಹೀಗೆ ಸಾಲು ಸಾಲು ಇಲಾಖೆಗಳಿಗೆ ಲಕ್ಷ ಲಕ್ಷ ಕೋಟಿ ರೂ. ಅನುದಾನ ನೀಡಿದ್ದಾರೆ.
ಬಜೆಟ್‌ನಲ್ಲಿ ಏಳು ಆದ್ಯತಾ ವಲಯಗಳನ್ನು ಗುರುತಿಸಲಾಗಿದ್ದು, ಇದನ್ನು “ಸಪ್ತರ್ಷಿ’ ಎಂದು ನಿರ್ಮಲಾ ಕರೆದಿದ್ದಾರೆ. ಹಾಗೆಯೇ “ಅಮೃತಕಾಲದಿಂದ ಶತಮಾನೋತ್ಸವದತ್ತ ಭಾರತ’ ಎಂಬ ಪರಿಕಲ್ಪನೆಯಡಿ ನಾಲ್ಕು ಅವಕಾಶಗಳನ್ನು ಗುರುತಿಸಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಮುನ್ನ ಮಂಡನೆಯಾಗಿರುವ ಪೂರ್ಣ ಪ್ರಮಾಣದ ಬಜೆಟ್ ಇದು ಎಂಬುದು ವಿಶೇಷ.
ಹೊಸ ತೆರಿಗೆ ಪದ್ಧತಿ
ಇದುವರೆಗೆ 5 ಲಕ್ಷ ರೂ.ಗಳ ವರೆಗೆ ಆದಾಯ ತೆರಿಗೆ ಇರಲಿಲ್ಲ. ಹೊಸ ತೆರಿಗೆ ಪದ್ಧತಿಯಂತೆ ಇದನ್ನು 7 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಹಾಗೆಯೇ ಹಳೇ ಪದ್ಧತಿಯಲ್ಲಿನ ಆದಾಯ ತೆರಿಗೆ ಸ್ಲಾéಬ್‌ಗಳ ಮಿತಿ ಏರಿಕೆ ಮಾಡಲಾಗಿದೆ.
ಸಪ್ತರ್ಷಿಗಳು
- ಸರ್ವ ಜನರ ತೋಟ (ಸರ್ವರ ಅಭಿವೃದ್ಧಿ)
- ಸರ್ವರಿಗೂ ವಿಕಾಸದ ಬೆಳಕು (ಕೊನೇ ವ್ಯಕ್ತಿಯವರೆಗೆ)
- ಹಣಕಾಸು ಸಮ್ಮಾನ (ಹಣಕಾಸು ವಿಭಾಗ)
- ಯುವಶಕ್ತಿ ಮೇವ ಜಯತೇ (ಯುವಶಕ್ತಿ)
- ಹಸಿರ ಹಾದಿಯಲ್ಲಿ (ಹಸುರು ಪ್ರಗತಿ)
- ಹೂಡಿಕೆ ಬೇಡಿಕೆ (ಮೂಲಸೌಕರ್ಯ, ಹೂಡಿಕೆ)
- ಬದುಕಿಗೆ ಡಿಜಿಟಲ್ ಸ್ಪರ್ಶ (ಸಾಮರ್ಥ್ಯಗಳ ಅನಾವರಣ)
ಇದು ಅಮೃತಕಾಲದ ಮೊದಲ ಬಜೆಟ್. ಸಮಾಜದ ಶ್ರೀಸಾಮಾನ್ಯನಿಗೆ ನಾವು ಆಯ್ಕೆಗಳನ್ನು ನೀಡಿದ್ದೇವೆ. ಎರಡು ರೀತಿಯ ತೆರಿಗೆ ಪದ್ಧತಿ ನೀಡಲಾಗಿದ್ದು, ಜನ ಅವರಿಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳ ಬಹುದು. ಇದರಿಂದ ತೆರಿಗೆದಾರರಿಗೆ ಅನುಕೂಲವಾಗಲಿದೆ.
-ನಿರ್ಮಲಾ ಸೀತಾರಾಮನ್, ವಿತ್ತ ಸಚಿವೆ