Advertisement

ಮೆಟ್ರೋ ವಿಸ್ತರಣೆ ಅಧ್ಯಯನಕ್ಕೆ ಕೇಂದ್ರ ಅಸ್ತು

10:44 AM Feb 27, 2023 | Team Udayavani |

ಬೆಂಗಳೂರು: ವಿರೋಧದ ನಡುವೆಯೇ “ನಮ್ಮ ಮೆಟ್ರೋ’ ನೆರೆಯ ರಾಜ್ಯಕ್ಕೆ ವಿಸ್ತರಣೆಯಾಗಲು ಸರ್ಕಾರ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಬೊಮ್ಮಸಂದ್ರ- ಹೊಸೂರು ನಡುವಿನ ಕಾರ್ಯಸಾಧ್ಯತಾ ಅಧ್ಯಯನಕ್ಕೆ ಕೇಂದ್ರದ ತಾತ್ವಿಕ ಒಪ್ಪಿಗೆ ದೊರಕಿದೆ.

Advertisement

ಮೆಟ್ರೋ ಎರಡನೇ ಹಂತ ಆರ್‌.ವಿ. ರಸ್ತೆ- ಬೊಮ್ಮಸಂದ್ರ (ಹಳದಿ ಮಾರ್ಗ) ನಡುವೆ ಈಗಾಗಲೇ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಇದನ್ನು 20.5 ಕಿ.ಮೀ. ವಿಸ್ತರಣೆ ಮಾಡುವ ಮೂಲಕ ಬೊಮ್ಮಸಂದ್ರದಿಂದ ಹೊಸೂರು ಮಧ್ಯೆ ಸಂಪರ್ಕ ಕಲ್ಪಿಸುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಈ ಹಿಂದೆ ರಾಜ್ಯಕ್ಕೆ ಸಲ್ಲಿಸಿತ್ತು. 2022ರ ಜೂನ್‌ನಲ್ಲೇ ಈ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅಸ್ತು ಎಂದಿತ್ತು. ಈಗ ಕೇಂದ್ರ ಸರ್ಕಾರ ಕೂಡ ಚೆನ್ನೈ ಮೆಟ್ರೋ ರೈಲು ನಿಗಮದ ಮೂಲಕ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಗೆ ತಾತ್ವಿಕ ಒಪ್ಪಿಗೆ ನೀಡಿದೆ. ಈ ಸಂಬಂಧದ ಕಾರ್ಯಸಾಧ್ಯತಾ ಅಧ್ಯಯನ ನಡೆಸುವಂತೆ ಸೂಚಿಸಿದ್ದು, ಇದಕ್ಕಾಗಿ 75 ಲಕ್ಷ ರೂ. ಅನುದಾನವನ್ನೂ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಇದರೊಂದಿಗೆ ತಮಿಳುನಾಡು ಸರ್ಕಾರವು “ನಮ್ಮ ಮೆಟ್ರೋ’ ತಮ್ಮ ಹೊಸೂರುವರೆಗೆ ಕೊಂಡೊ ಯ್ಯಲು ಅಧ್ಯಯನ ಆರಂಭಿಸಲಿದೆ! ಈ ಬಗ್ಗೆ ಪ್ರತಿಕ್ರಿಯಿಸಿರುವ ತಮಿಳುನಾಡಿನ ಕೃಷ್ಣಗಿರಿ ಸಂಸದ ಚೆಲ್ಲಕುಮಾರ್‌, “ಬೊಮ್ಮ ಸಂದ್ರದಿಂದ ಹೊಸೂರುವರೆಗೆ ಮೆಟ್ರೋ ವಿಸ್ತರಣೆಗೆ ಸಂಬಂಧಿಸಿ ದಂತೆ ಕಾರ್ಯಸಾಧ್ಯತಾ ಅಧ್ಯಯನಕ್ಕೆ ಫೆ. 21ರಂದು ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ಸೂಚಿಸಿದೆ. ಉದ್ದೇಶಿತ ಯೋಜನೆಗೆ ತಗಲುವ ವೆಚ್ಚವನ್ನು ಎರಡೂ ಸರ್ಕಾರಗಳು ಹಂಚಿಕೆ ಮಾಡಿಕೊಳ್ಳಬೇಕಾಗುತ್ತದೆ. ಕಾರ್ಯಾಚರಣೆ ಸಂದರ್ಭದಲ್ಲೂ ಸಮನ್ವಯದ ಅಗತ್ಯವಿದೆ’ ಎಂದು ಹೇಳಿದರು.

ಅಂದಹಾಗೆ, ಬೊಮ್ಮಸಂದ್ರದಿಂದ ಹೊಸೂರಿಗೆ 20.5 ಕಿ.ಮೀ. ಮೆಟ್ರೋ ರೈಲು ಮಾರ್ಗ ನಿರ್ಮಾಣ ಆಗಬೇಕಿದೆ. ಈ ಪೈಕಿ ಕರ್ನಾಟಕದ ವ್ಯಾಪ್ತಿಯಲ್ಲಿ 11.7 ಕಿ.ಮೀ. ಇದೆ. ಉಳಿದ 8.8 ಕಿ.ಮೀ. ಮಾರ್ಗ ರಾಜ್ಯದ ಗಡಿ ದಾಟಿ ನಿರ್ಮಾಣ ಆಗಬೇಕಿದೆ. ಈ ಯೋಜನೆ ಕಾರ್ಯಸಾಧುವಾದರೆ ದಕ್ಷಿಣ ಭಾರತದ ಮೊದಲನೇ ಅಂತರರಾಜ್ಯ ಮೆಟ್ರೋ ರೈಲು ಮಾರ್ಗ ಇದಾಗಲಿದೆ. ಈ ಮಧ್ಯೆ ಹೀಗೆ ಹೊರರಾಜ್ಯಕ್ಕೆ ವಿಸ್ತರಣೆ ಆಗುತ್ತಿರುವುದಕ್ಕೆ ಸ್ಥಳೀಯವಾಗಿ ವಿರೋಧವೂ ವ್ಯಕ್ತವಾಗಿದೆ. ಯೋಜನೆಯಿಂದ ನೆರೆ ರಾಜ್ಯಕ್ಕೇ ಹೆಚ್ಚು ಲಾಭ ಆಗಲಿದೆ.

ನಮ್ಮ ಮೂಲಸೌಕರ್ಯ; ಅವರಿಗೆ (ತಮಿಳುನಾಡಿಗೆ) ಲಾಭ ಎಂದರೆ ಹೇಗೆ? ಈಗಾಗಲೇ ಕೈಗಾರಿಕೆಗಳು ನೆರೆ ರಾಜ್ಯಕ್ಕೆ ಹೋಗುತ್ತಿವೆ ಎಂದು ಕನ್ನಡಪರ ಸಂಘಟನೆಗಳು ಸೇರಿದಂತೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು.

Advertisement

3ನೇ ಹಂತದಲ್ಲಿ ಮತ್ತೂಂದು ಡಬಲ್‌ ಡೆಕರ್‌ : ಆರ್‌.ವಿ. ರಸ್ತೆ- ಎಲೆಕ್ಟ್ರಾನಿಕ್‌ ಸಿಟಿ- ಬೊಮ್ಮಸಂದ್ರದ ನಡುವೆ ಡಬಲ್‌ ಡೆಕರ್‌ ಆಗುತ್ತಿದೆ. ಮೂರನೇ ಹಂತದಲ್ಲಿ ಮತ್ತೂಂದು ಡಬಲ್‌ ಡೆಕರ್‌ ಬರಲಿದೆ. ಜೆ.ಪಿ. ನಗರ 4ನೇ ಹಂತದಿಂದ ಹೆಬ್ಬಾಳ ಸಂಪರ್ಕಿಸುವ 31 ಕಿ.ಮೀ ಮಾರ್ಗ ಬಹುತೇಕ ಹೊರ ವರ್ತುಲ ರಸ್ತೆಯಲ್ಲಿ ಸಾಗಲಿದೆ. ಇಲ್ಲಿಯೂ ಕೆಲವೆಡೆ ಡಬಲ್‌ ಡೆಕ್ಕರ್ ಮಾರ್ಗ ನಿರ್ಮಿಸುವ ಉದ್ದೇಶ ಇದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌)ದ ಅಧಿಕಾರಿಗಳು ತಿಳಿಸಿದ್ದಾರೆ. ಡಾಲ್ಮೀಯಾ ವೃತ್ತದಲ್ಲಿರುವ ರಸ್ತೆ ಮೇಲ್ಸೇತುವೆ ನೆಲಸಮಗೊಳಿಸಲಾಗುತ್ತಿದೆ ಎಂಬ ಸುದ್ದಿ ವದಂತಿ ಅಷ್ಟೇ. ಈ ಯೋಜನೆ ಇನ್ನೂ ಪ್ರಸ್ತಾವನೆ ಹಂತದಲ್ಲಿದ್ದು, ಕೇಂದ್ರ ಸರ್ಕಾರ ಒಪ್ಪಿಗೆ ದೊರಕಿದ ಬಳಿಕವೇ ಎಲ್ಲವೂ ಅಂತಿಮವಾಗಲಿದೆ ಎಂದೂ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next