ಬೆಂಗಳೂರು: ಸ್ವಂತ ತೆರಿಗೆ ಮೂಲದ ಆದಾಯ ಖೋತಾದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರಕ್ಕೆ 5,495 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆಗೆ ಕೇಂದ್ರ ಸರ್ಕಾರ ಒಪ್ಪಿದಂತಿದೆ! 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ವಿಶೇಷ ಅನುದಾನ ನೀಡಲು ನಿರಾಕರಿಸಿದ್ದ ಕೇಂದ್ರ ಸರ್ಕಾರ ಕೊನೆಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನವಿಗೆ ಸ್ಪಂದಿಸಿ 5495 ಕೋಟಿ ರೂ. ನೀಡಲು ಬಹುತೇಕ ಒಪ್ಪಿಗೆ ನೀಡಿದಂತಿದೆ. ಆದಷ್ಟು ಶೀಘ್ರವಾಗಿ ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ಸಿಎಂ
ಸಚಿವಾಲಯದ ಉನ್ನತ ಮೂಲಗಳು ಹೇಳಿವೆ.
ಈ ಮಧ್ಯೆ, 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಮೊದಲ ಕಂತಿನ ರೂಪದಲ್ಲಿ 1678.57 ಕೋಟಿ ರೂ. ರಾಜ್ಯಕ್ಕೆ ಬಿಡುಗಡೆಯಾಗಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ರಾಜ್ಯ ಸರ್ಕಾರಕ್ಕೆ ತುಸು ನಿರಾಳತೆ ಮೂಡಿಸಿದೆ. 14ನೇ ಹಣಕಾಸು ಆಯೋಗದ ಶಿಫಾರಸಿನಡಿ ರಾಜ್ಯಕ್ಕೆ 36,675 ಕೋಟಿ ರೂ. ಹಂಚಿಕೆಯಾಗಿತ್ತು. ಆದರೆ ನಾನಾ ಮಾನದಂಡ ಆಧರಿಸಿ 2020-21ನೇ ಸಾಲಿನ ಒಂದು ವರ್ಷಕ್ಕೆ 15ನೇ ಹಣಕಾಸು ಆಯೋಗದ ಶಿಫಾರಸಿನಡಿ ರಾಜ್ಯ ಕ್ಕೆ 31,180 ಕೋಟಿ ರೂ. ನಿಗದಿಪಡಿಸಲಾಗಿತ್ತು. ಇದರಿಂದ ರಾಜ್ಯಕ್ಕೆ ಅನ್ಯಾಯವಾಗಿರುವುದನ್ನು ಮನಗಂಡ ಆಯೋಗವು ಕಡಿತವಾಗಿರುವ 5495 ಕೋಟಿ ರೂ.ಗಳನ್ನು ವಿಶೇಷ ಅನುದಾನ ರೂಪದಲ್ಲಿ ನೀಡಲು ಶಿಫಾರಸು ಮಾಡಿತ್ತು. ಇದನ್ನು ಒಪ್ಪದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪುನರ್ ಪರಿಶೀಲಿಸುವಂತೆ ಆಯೋಗಕ್ಕೆ ಸೂಚಿಸಿದ್ದರು.
5,495 ಕೋಟಿ ರೂ. ನೀಡಲು ಒಪ್ಪಿಗೆ?: ಇತ್ತೀಚೆಗೆ ಯಡಿಯೂರಪ್ಪ ಅವರು ಮತ್ತೂಮ್ಮೆ ಕೇಂದ್ರ ಹಣಕಾಸು ಸಚಿವರೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾದಂತಿದೆ. 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ 2020-21ನೇ ಸಾಲಿಗೆ 31,180 ಕೋಟಿ ರೂ. ಹಂಚಿಕೆಯಾಗಿದೆ. ಅದರಲ್ಲಿ ಮೊದಲ ಕಂತಿನ ಮೊತ್ತವಾಗಿ 1678.57 ಕೋಟಿ ರೂ. ಸೋಮವಾರ ಬಿಡುಗಡೆಯಾಗಿದೆ.
ಈವರೆಗೆ 3609 ಕೋಟಿ ರೂ. ಬಿಡುಗಡೆ: ಏಪ್ರಿಲ್ 1ರಿಂದೀಚೆಗೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಈವರೆಗೆ 3609 ಕೋಟಿ ರೂ. ಬಿಡುಗಡೆಯಾದಂತಾಗಿದೆ. ರಾಜ್ಯ ವಿಪತ್ತು ಪರಿಹಾರ ನಿಧಿ (ಎಸ್‌ಡಿಆರ್‌ಎಫ್) ಅಡಿ 395 ಕೋಟಿ ರೂ., 2019-20ನೇ ಸಾಲಿನ ಜಿಎಸ್‌ಟಿ ಪರಿಹಾರದಲ್ಲಿ 1536 ಕೋಟಿ ರೂ. ಇತ್ತೀ ಚೆಗೆ ಬಿಡುಗಡೆಯಾಗಿತ್ತು. ಇದೀಗ 15ನೇ ಹಣಕಾಸು ಆಯೋಗದ ಶಿಫಾರಸಿನಡಿ 1678 ಕೋಟಿ ರೂ. ಬಿಡುಗಡೆಯಾಗಿದೆ.
ಬಾಕಿ ಅನುದಾನಕ್ಕಾಗಿ ಪತ್ರ: ಕೇಂದ್ರ ಸರ್ಕಾರವು 2019-20ನೇ ಸಾಲಿನ ಜಿಎಸ್‌ಟಿ ಪರಿಹಾರ ಸೇರಿ ಇತರೆ ಅನುದಾನ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ವೇತನ, ಪಿಂಚಣಿ ಭರಿಸಲು ಸಹಕಾರಿ? ಸ್ವಂತ ತೆರಿಗೆ ಆದಾಯ ಬಹುಪಾಲು ಖೋತಾ ಹಾಗೂ ಕೇಂದ್ರದಿಂದ ಅನುದಾನ ಬಿಡುಗಡೆ ಯಾಗದ ಕಾರಣ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ವೇತನ, ಪಿಂಚಣಿ ಪಾವತಿ ಹೇಗೆ ಎಂಬ ಲೆಕ್ಕಾಚಾರದಲ್ಲಿ ಮುಳುಗಿದೆ. ಒಂದೊಮ್ಮೆ ಕೇಂದ್ರದಿಂದ 5495 ಕೋಟಿ ರೂ. ವಿಶೇಷ ಅನುದಾನ ಮಾಸಾಂತ್ಯ ದೊಳಗೆ ಬಿಡುಗಡೆ ಯಾದರೆ ಸರ್ಕಾರಿ ನೌಕರರ ವೇತನ, ಪಿಂಚಣಿ ಪಾವತಿ ಅಬಾಧಿತವಾಗಲಿದೆ.
●ಎಂ. ಕೀರ್ತಿಪ್ರಸಾದ್