Advertisement

ಕೇಂದ್ರ, ರಾಜ್ಯ ಸರಕಾರಗಳ ಆದೇಶ; ಅನುಷ್ಠಾನಕ್ಕಿಲ್ಲ ಆಸಕ್ತಿ

10:24 PM Jun 12, 2019 | Sriram |

ಮಳೆ ಕೊಯ್ಲು “ಸುದಿನ ಅಭಿ ಯಾನ’ ದಲ್ಲಿ ಇಂದು ವಿವಿಧ ರಾಜ್ಯಗಳಲ್ಲಿ ಮತ್ತು ಪ್ರಮುಖ ನಗರಗಳಲ್ಲಿ ಮಳೆ ಕೊಯ್ಲು ವ್ಯವಸ್ಥೆ ಅಳವಡಿಸುವ ವಿಚಾರಲ್ಲಿ ಹೊರಡಿಸಿರುವ ಸರಕಾರಿ ಆದೇಶದ ಬಗೆಗಿನ ಮಾಹಿತಿ, ಅಲ್ಲದೆ ಸಾಧಕರ ಯಶೋಗಾಥೆಗಳನ್ನು ವಿವರಿಸಲಾಗಿದೆ.

Advertisement

ಮಹಾನಗರ: ಅಂತರ್ಜಲ ವೃದ್ಧಿಗೆ ಮಳೆ ಕೊಯ್ಲು ವ್ಯವಸ್ಥೆಯನ್ನು ಅನುಸರಿಸುವಂತೆ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಕಾಲ ಕಾಲಕ್ಕೆ ಆದೇಶಗಳನ್ನು ಮತ್ತು ಮಾರ್ಗ ಸೂಚಿಗಳನ್ನು ನೀಡುತ್ತಾ ಬಂದಿವೆ. ಆದರೆ ಅವುಗಳು ಎಷ್ಟರ ಮಟ್ಟಿಗೆ ಅನುಷ್ಠಾನಗೊಂಡಿವೆ ಎನ್ನುವುದು ಉತ್ತರವಿಲ್ಲದ ಪ್ರಶ್ನೆಯಾಗಿದೆ.

ಏಕೆಂದರೆ ಕೊಳವೆ ಬಾವಿಗಳನ್ನು ನಿರ್ಮಾಣ ಮಾಡಲು ಅನುಮತಿ ನೀಡುವ ವಿಚಾರದಲ್ಲಿ ಸರಕಾರದ ಇಲಾಖೆಗಳು ಮತ್ತು ಅಧಿಕಾರಿಗಳು ತೋರುವ ಆತುರ ಮತ್ತು ಕಾಳಜಿಯನ್ನು ಅಂತರ್ಜಲ ವೃದ್ಧಿ, ಸಂರಕ್ಷಣೆಗೆ ಸಂಬಂಧಿಸಿದ ಆದೇಶಗಳ ಅನುಷ್ಠಾನದ ವಿಚಾರದಲ್ಲಿ ತೋರಿಸುತ್ತಿಲ್ಲ ; ಇದು ಕಳವಳಕಾರಿಯಾದ ಸಂಗತಿ ಮತ್ತು ನೀರಿನ ಸಮಸ್ಯೆಗೆ ಮುಖ್ಯ ಕಾರಣವೂ ಆಗಿದೆ.

ಕೇಂದ್ರ ಜಲ ಸಂಪನ್ಮೂಲ ಇಲಾಖೆಯಡಿ ಸ್ಥಾಪನೆಯಾದ ಕೇಂದ್ರ ಅಂತರ್ಜಲ ಮಂಡಳಿ ಮತ್ತು ಕೇಂದ್ರ ವಿಜ್ಞಾನ ಮತ್ತು ಪರಿಸರ ಇಲಾಖೆಯ ಅಧೀನ ಸಂಸ್ಥೆ ಕೇಂದ್ರ ಅಂತರ್ಜಲ ಪ್ರಾಧಿಕಾರವು ಅಂತರ್ಜಲ ಸಂರಕ್ಷಣೆ ಬಗ್ಗೆ ಆಗಿಂದಾಗ್ಗೆ ಆದೇಶಗಳನ್ನು ಹೊರಡಿಸುತ್ತಾ ಬಂದಿವೆ.

ಕೇಂದ್ರ ಅಂತರ್ಜಲ ಪ್ರಾಧಿಕಾರವು 2010ರಲ್ಲಿಯೇ ರಾಜಧಾನಿ ದಿಲ್ಲಿಗೆ ಸಂಬಂಧಿಸಿ ಆದೇಶವೊಂದನ್ನು ಹೊರಡಿಸಿ ಯಾವುದೇ ಸಂಸ್ಥೆಗಳು, ಶಾಲೆ, ಹೊಟೇಲ್‌, ಕೈಗಾರಿಕಾ ಘಟಕಗಳು ಅಥವಾ ಫಾರ್ಮ್ ಹೌಸ್‌ಗಳು ಕಟ್ಟಡಗಳನ್ನು ಕಟ್ಟಿಸುವ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟವು 10 ಮೀಟರ್‌ಗಿಂದ ಕೆಳಗಡೆ ಇದ್ದರೆ ಸಂಬಂಧಪಟ್ಟ ಸಂಸ್ಥೆಗಳು ಛಾವಣಿಯ ನೀರನ್ನು ಕಟ್ಟಡದ ಆವರಣದಲ್ಲಿ ಇಂಗಿಸಲು ವ್ಯವಸ್ಥೆ ಮಾಡ ಬೇಕೆಂದು ಸೂಚಿಸಿತ್ತು.

Advertisement

ಕಡ್ಡಾಯ ಆದೇಶ
ಕೇಂದ್ರ ನಗರಾಭಿವೃದ್ಧಿ ಮತ್ತು ಬಡತನ ನಿರ್ಮೂಲನ ಸಚಿವಾಲಯವು ಕಟ್ಟಡ ನಿರ್ಮಾಣ ಸಂಬಂಧಿತ ಕಾನೂನುಗಳ ಬೈಲಾಗಳಿಗೆ ತಿದ್ದುಪಡಿ ತಂದು 100 ಚದರ ಮೀಟರ್‌ಗಿಂತ ಹೆಚ್ಚು ವಿಸ್ತೀರ್ಣದ ಹೊಸ ಕಟ್ಟಡಗಳಿಗೆ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಕಡ್ಡಾಯಗೊಳಿಸಿದೆ. ಈ ವ್ಯವಸ್ಥೆಯನ್ನು ಅಳವಡಿಸದಿದ್ದರೆ ಕಟ್ಟಡ ಯೋಜನ ಪರವಾನಿಗೆ ಮಂಜೂರು ಮಾಡಬಾರದು. ಹಾಗೆಯೇ ಮನೆ/ ಕಟ್ಟಡಕ್ಕೆ ಕಂಪ್ಲೀಶನ್‌ ಸರ್ಟಿಫಿಕೆಟ್‌ ಕೊಡುವಾಗ ಸಂಬಂಧ ಪಟ್ಟ ಪ್ರಾಧಿಕಾರಗಳು ಈ ಬಗ್ಗೆ ತಪಾಸಣೆಯನ್ನು ನಡೆಸಬೇಕು ಎಂದು ಸೂಚಿಸಿದೆ. 200 ಚದರ ಮೀಟರ್‌ ಅಥವಾ ಅದಕ್ಕಿಂತ ಅಧಿಕ ವಿಸ್ತೀರ್ಣದ ನಿವೇಶನಗಳಲ್ಲಿ ಕೊಳವೆ ಬಾವಿಗಳ ಮೂಲಕ ಮಳೆ ನೀರು ಇಂಗಿಸಲು ವ್ಯವಸ್ಥೆ ಮಾಡುವಂತೆ ಸಲಹೆ ಮಾಡಿದೆ. ಅದಕ್ಕೆ ತಗಲುವ ವೆಚ್ಚದ ಶೇ. 50ರಷ್ಟು ಅಥವಾ 1 ಲಕ್ಷ ರೂ. ನೆರವು ಒದಗಿಸಲಾಗುವುದು ಎಂದೂ ಕೇಂದ್ರ ನಗರಾಭಿವೃದ್ಧಿ ಮತ್ತು ಬಡತನ ನಿರ್ಮೂಲನ ಸಚಿವಾಲಯದ ಆದೇಶ ವಿವರಿಸುತ್ತದೆ.

ಕೇಂದ್ರ ಸರಕಾರದ ಈ ಆದೇಶವನ್ನು ಅನುಸರಿಸಿ ಕೆಲವು ರಾಜ್ಯ ಸರಕಾರಗಳು ತಂತಮ್ಮ ರಾಜ್ಯಗಳಲ್ಲಿ ಹೊಸ ಕಟ್ಟಡ ಕಟ್ಟಿಸುವಾಗ ಮಳೆ ಕೊಯ್ಲು ವ್ಯವಸ್ಥೆ ಅಳವಡಿಸುಸುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿವೆ.

ದಕ್ಷಿಣ ಕನ್ನಡ/ ಮಂಗಳೂರು
ದಕ್ಷಿಣ ಕನ್ನಡದ ಯಾವುದೇ ಗ್ರಾಮದಲ್ಲಿ ಹೊಸ ಮನೆ/ ಕಟ್ಟಡ ಕಟ್ಟಿಸುವವರು ಮಳೆ ಕೊಯ್ಲು ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಬೇಕು ಇಲ್ಲದಿದ್ದರೆ ಗ್ರಾ.ಪಂ. ವತಿಯಿಂದ ಡೋರ್‌ ನಂಬರ್‌ ಕೊಡಲಾಗುವುದಿಲ್ಲ ಎಂದು ಜಿ.ಪಂ. ಕೆಲವು ವರ್ಷಗಳ ಹಿಂದೆಯೇ ಆದೇಶ ಹೊರಡಿಸಿದೆ. ಹಾಗೆಯೇ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊಸತಾಗಿ ಕಟxಡ/ ಮನೆ ಕಟ್ಟಿಸುವಾಗ ಮಳೆ ಕೊಯ್ಲು ವ್ಯವಸ್ಥೆ ಕಡ್ಡಾಯ ಮಾಡಲಾಗಿದೆ. ಈ ವ್ಯವಸ್ಥೆ ಮಾಡದಿದ್ದರೆ ಕಂಪ್ಲೀಶನ್‌ ಸರ್ಟಿಫಿಕೆಟ್‌ ನೀಡಲಾಗುವುದಿಲ್ಲ ಎಂದು ಪಾಲಿಕೆಯ ನಗರ ಯೋಜನ ವಿಭಾಗ ಹೇಳುತ್ತದೆ.

ಬೆಂಗಳೂರು
ರಾಜಧಾನಿ ಬೆಂಗಳೂರಿನಲ್ಲಿ 2400 ಚದರಡಿ ವಿಸ್ತೀರ್ಣದಲ್ಲಿ 1200 ಚದರಡಿ ಅಥವಾ ಅದಕ್ಕಿಂತ ಹೆಚ್ಚು ವಿಸ್ತೀರ್ಣದ ಕಟ್ಟಡ ಕಟ್ಟಿಸುವುದಾದರೆ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ.

ಕೇರಳ
ನೆರೆಯ ಕೇರಳದಲ್ಲಿ ನಗರ/ ಗ್ರಾಮಾಂತರ ಎಂಬ ಭೇದಲ್ಲದೆ ಎಲ್ಲ ಕಡೆ 1000 ಚದರಡಿ ಅಥವಾ ಅದಕ್ಕಿಂತ ಮೇಲ್ಪಟ್ಟ ವಿಸ್ತೀರ್ಣದ ಹೊಸ ಮನೆ/ ಕಟ್ಟಡ ನಿರ್ಮಾಣ ಮಾಡುವಾಗ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಕಡ್ಡಾಯವಾಗಿ ಅನುಸರಿಸಬೇಕೆಂದು ಅಲ್ಲಿನ ಸರಕಾರ ಆದೇಶ ಹೊರಡಿಸಿದೆ. ಈ ವ್ಯವಸ್ಥೆ ಮಾಡದಿದ್ದರೆ ವಿದ್ಯುತ್‌ ಸಂಪರ್ಕ, ಡೋರ್‌ ನಂಬರ್‌ ಕೊಡಲಾಗುತ್ತಿಲ್ಲ.

ತಮಿಳುನಾಡು
ತಮಿಳುನಾಡಿನಲ್ಲಿ ಎಲ್ಲ ಸರಕಾರಿ ಮತ್ತು ಖಾಸಗಿ ಕಟ್ಟಡಗಳಿಗೆ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಕಡ್ಡಾಯ ಮಾಡಲಾಗಿದೆ. ಚೆನ್ನೈ ಮಹಾನಗರ ಮತ್ತು ಇತರ ನಗರಗಳಲ್ಲಿ ಕಟ್ಟಡ ನಿರ್ಮಾಣ ಯೋಜನೆ ಮಂಜೂರು ಮಾಡಬೇಕಾದರೆ ಮಳೆ ನೀರು ಕೊಯ್ಲು ವ್ಯವಸ್ಥೆ ಕಡ್ಡಾಯ. ಇದನ್ನು ಮಾಡದ್ದಿದ್ದರೆ ನೀರಿನ ಸಂಪರ್ಕ ಮತ್ತು ಒಳ ಚರಂಡಿ ವ್ಯವಸ್ಥೆಯ ಜೋಡಣೆ ಮಾಡಲಾಗುತ್ತಿಲ್ಲ. ಮೂರು ಮಾಳಿಗೆಯ ಕಟ್ಟಡವಾಗಿದ್ದರೆ ಛಾವಣಿಯ ವಿಸ್ತೀರ್ಣದ ಮಾನದಂಡವಿಲ್ಲದೆ ಎಲ್ಲ ಕಟ್ಟಡಗಳಿಗೂ ಮಳೆ ನೀರು ಕೊಯ್ಲು ವ್ಯವಸ್ಥೆ ಕಡ್ಡಾಯ.

ಮುಂಬಯಿ
ಮುಂಬಯಿ ಬೃಹತ್‌ ನಗರ ಮತ್ತು ಮಹಾರಾಷ್ಟ್ರದ ಇತರ ನಗರಗಳಲ್ಲಿ 1,000 ಚದರ ಮೀಟರ್‌ಗಿಂತ ಹೆಚ್ಚಿನ ವಿಸ್ತೀರ್ಣ ಇರುವ ನಿವೇಶನಗಳಲ್ಲಿ ಮಳೆ ಕೊಯ್ಲು ವ್ಯವಸ್ಥೆ ಕಡ್ಡಾಯಗೊಳಿಸಲಾಗಿದೆ.

ನಾಗಪುರ ಮುನಿಸಿಪಲ್‌ ಕಾರ್ಪೊರೇಶನ್‌ 300 ಚದರ ಮೀಟರ್‌ ಅಥವಾ ಅದಕ್ಕಿಂತ ಜಾಸ್ತಿ ವಿಸ್ತೀರ್ಣದ ಹೊಸ ಕಟ್ಟಡಕ್ಕೆ ಮಳೆ ಕೊಯ್ಲು ವ್ಯವಸ್ಥೆ ಕಡ್ಡಾಯ ಮಾಡಿದೆ.

ಈ ವ್ಯವಸ್ಥೆ ಪಾಲಿಸದಿದ್ದರೆ 100 ಚದರ ಮೀಟರ್‌ ವಿಸ್ತೀರ್ಣಕ್ಕೆ ವಾರ್ಷಿಕ 1,000 ರೂ.ದಂಡ ವಿಧಿಸಲಾಗುತ್ತಿದೆ.

ಹೈದರಾಬಾದ್‌
ಆಂಧ್ರ ಪ್ರದೇಶದ ಹೈದರಾಬಾದ್‌ನಲ್ಲಿ 300 ಚದರ ಮೀಟರ್‌ ಅಥವಾ ಅದಕ್ಕಿಂತ ಮೇಲ್ಪಟ್ಟ ವಿಸ್ತೀರ್ಣದ ಹೊಸ ಕಟ್ಟಡಗಳಿಗೆ ಮೇಲ್ಛಾವಣಿಯ ವಿಸ್ತೀರ್ಣದ ಮಾನದಂಡವಿಲ್ಲದೆ ಎಲ್ಲಾ ಗುಂಪು ಮನೆ, ವಾಣಿಜ್ಯ ಕಟ್ಟಡಗಳಿಗೆ ಮಳೆ ಕೊಯ್ಲು ಯೋಜನೆ ಕಡ್ಡಾಯ ಮಾಡಲಾಗಿದೆ.

ಇದಲ್ಲದೆ ಗೋವಾ, ಗುಜರಾತ್‌, ಸೂರತ್‌, ಒಡಿಶಾ, ಇಂಧೋರ್‌, ರಾಜಸ್ಥಾನ, ಹರ್ಯಾಣಾ, ಚಂಡೀಗಢ, ಹಿಮಾಚಲ ಪ್ರದೇಶ, ದಿಯು- ದಾಮನ್‌, ಲಕ್ಷದ್ವೀಪ್‌, ಮೇಘಾಲಯ, ನಾಗಲ್ಯಾಂಡ್‌, ಪಾಂಡಿಚೇರಿ, ಪಶ್ಚಿಮ ಬಂಗಾಲ, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು ಮತ್ತಿತರ ರಾಜ್ಯಗಳಲ್ಲಿ ಕೂಡ ಮಳೆ ಕೊಯ್ಲು ವ್ಯವಸ್ಥೆ ಕಡ್ಡಾಯ ಮಾಡಿ ಅಲ್ಲಿನ ಸರಕಾರಗಳು ಆದೇಶ ಹೊರಡಿಸಿವೆ.

ಇಚ್ಛಾಶಕ್ತಿ ಅಗತ್ಯ
ಸರಕಾರಗಳು ಆದೇಶವನ್ನೇನೋ ಹೊರಡಿಸುತ್ತವೆ. ಆದರೆ ಅವುಗಳು ಕಾರ್ಯಾನುಷ್ಠಾನಕ್ಕೆ ಬರುವುದು ಅಷ್ಟಕ್ಕಷ್ಟೇ. ಅಧಿಕಾರಿಗಳು ಈ ವಿಷಯದಲ್ಲಿ ಕಟ್ಟು ನಿಟ್ಟಾಗಿ ಜಾರಿಗೊಳಿಸುವ ಇಚ್ಛಾ ಶಕ್ತಿಯನ್ನು ವ್ಯಕ್ತಪಡಿಸುವುದು ಅಗತ್ಯ. ಹಾಗೆಯೇ ಜನರು ಕೂಡಾ ಸರಕಾರಿ ಆದೇಶವನ್ನು ಪಾಲಿಸುವ ಔದಾರ್ಯವನ್ನು ಪ್ರದರ್ಶಿಸಿ ಜಲ ಮತ್ತು ಪರಿಸರ ಸಂರಕ್ಷಣೆಯ ಕರ್ತವ್ಯ ನಿರ್ವಹಿಸಬೇಕು.

ನೀವು ಮಳೆಕೊಯ್ಲು ಮಾಡಿದ್ದರೆ ನಮಗೆ ತಿಳಿಸಿ
ನಗರವಾಸಿಗಳಲ್ಲಿ ಅನೇಕರು ಈಗಾಗಲೇ ಇಂಥ ರಚನಾತ್ಮಕ ಪ್ರಯತ್ನವನ್ನು ಕೈಗೊಂಡಿರಬಹುದು. ತಮ್ಮ ಮನೆ-ಬಾವಿ, ಬೋರ್‌ವೆಲ್‌ ಅಥವಾ ಸೀಮಿತ ಜಾಗ ಹೊಂದಿರುವವರೂ ಕಡಿಮೆ ಖರ್ಚಿನಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿರಬಹುದು. ಆ ಮೂಲಕ, ಮಹಾನಗರ ಪಾಲಿಕೆಯ ನೀರನ್ನೇ ನಂಬಿ ಕುಳಿತುಕೊಳ್ಳುವ ಕಠಿನ ಪರಿಸ್ಥಿತಿಯಿಂದ ಹೊರಬಂದಿರಬಹುದು. ಹೀಗೆ ಶಾಶ್ವತ ಪರಿಹಾರ ಕಂಡುಕೊಂಡವರು ಉಳಿದವರಿಗೂ ಪ್ರೇರಣೆಯಾಗುವಂಥ ತಮ್ಮ ಯಶೋಗಾಥೆಗಳನ್ನು 9900567000 ನಂಬರ್‌ಗೆವಾಟ್ಸಪ್‌ ಮಾಡಬಹುದು. ಆಯ್ದವುಗಳನ್ನು ಪ್ರಕಟಿಸಲಾಗುವುದು.

ಮಳೆ ಕೊಯ್ಲು ಯಶೋಗಾಥೆ
ಐದು ವರ್ಷಗಳಿಂದ ನೀರಿನ ಅಭಾವ ಬಂದಿಲ್ಲ
ಎಪ್ರಿಲ್‌, ಮೇ ತಿಂಗಳಲ್ಲಿ ನೀರಿನ ಅಭಾವ ಅತಿಯಾಗಿ ಕಾಡುತ್ತಿತ್ತು. ಆ ಸಮಸ್ಯೆ ಪರಿಹಾರಕ್ಕಾಗಿ ಮಳೆಕೊಯ್ಲು ವ್ಯವಸ್ಥೆ ಅಳವಡಿಸಿದೆವು. ಆ ಬಳಿಕ ನಮಗೆ ನೀರಿನ ಅಭಾವ ಬಂದಿಲ್ಲ ಎಂದು ಹೇಳುತ್ತಾರೆ ಮಳೆಕೊಯ್ಲು ಅಳವಡಿಸಿದ ದೇರೆಬೈಲ್‌ ಕೊಂಚಾಡಿ ಗುತ್ತಿಗೆ ಕಾಂಪೌಂಡ್‌ನ‌ ನಿವಾಸಿ ದಿನೇಶ್‌.

ನಮ್ಮ ಮನೆ ನಿವೇಶನ 5 ಸೆಂಟ್ಸ್‌ ಜಾಗದಲ್ಲಿದ್ದು, ಅದರಲ್ಲಿ ಹೆಂಚಿನ ಮನೆ ಇದೆ. ಮನೆಯ ಮುಂಭಾಗಕ್ಕೆ ಶೀಟ್‌ ಹಾಕಿ ಅದರ ಬದಿಗೆ ಪ್ಲಾಸ್ಟಿಕ್‌ ದಂಬೆ ಕಟ್ಟಿದ್ದೇನೆ. ಮಳೆ ನೀರು ದಂಬೆ ಮೂಲಕ ಬಂದು ಕೆಳಗಿನ ಬದಿಯಲ್ಲಿ ಇಟ್ಟಿರುವ ಬ್ಯಾರೆಲ್‌ಗೆ ಬೀಳುತ್ತದೆ. ಬ್ಯಾರೆಲ್‌ನ ತಳಹದಿಯಲ್ಲಿ ಇದ್ದಿಲು, ಜಲ್ಲಿ, ಹೊಗೆ ಬಳಿಕ ಹೆಂಚಿನ ತುಂಡಿದೆ. ಬಾವಿಯ ಸಮೀಪವೇ ಈ ಡ್ರಮ್‌ ಇಟ್ಟಿದ್ದು, ಡ್ರಮ್‌ನಿಂದ ನೀರು ಸೀದಾ ಬಾವಿಗೆ ಹೋಗುತ್ತದೆ. ಮೇಲ್ಭಾಗಕ್ಕೆ ಚಿಕ್ಕ ನೆಟ್‌ ಹಾಕಿದ್ದು, ದೊಡ್ಡ ಕಸ ಡ್ರಮ್‌ಗೆ ಬೀಳುವುದಿಲ್ಲ.

ಐದು ವರ್ಷಗಳಿಂದ ನಾನು ಮಳೆ ನೀರು ಸಂಗ್ರಹ ಮಾಡುತ್ತಿದ್ದೇನೆ. ಅದಕ್ಕೂ ಮುನ್ನ ಬೇಸಯಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿತ್ತು. ಬಳಿಕ ಆ ಸಮಸ್ಯೆಯಿಲ್ಲ. ಮನೆಯ ಬಳಕೆ ಸಹಿತ ಅಕ್ಕಪಕ್ಕದ ಮನೆಯವರಿಗೆ ನೀರು ಕೊಡುತ್ತಿದ್ದೇವೆ. ಈ ಬಗ್ಗೆ ಆಸಕ್ತಿ ಇರುವವರಿಗೆ ಮಾರ್ಗದರ್ಶನ ನೀಡುತ್ತೇನೆ ಎನ್ನುತ್ತಾರೆ ದಿನೇಶ್‌.

35 ಮನೆಗಳಿಗೆ ಮಳೆಕೊಯ್ಲು ನೀರು!
ಕಂಕನಾಡಿ ಹಳೆ ಪೊಲೀಸ್‌ ಠಾಣೆ ರಸ್ತೆಯಲ್ಲಿರುವ ಕೃತಿ ರೆಸಿಡೆನ್ಸಿಯ ಹದಿನೈದು ಮನೆಗಳಿಗೆ ಬೇಸಗೆಯ ನೀರಿನ ಮೂಲ ಮಳೆಕೊಯ್ಲು!

ಏಳು ವರ್ಷಗಳ ಹಿಂದೆ ಅಳವಡಿಸಿದ ಮಳೆಕೊಯ್ಲು ಪದ್ಧತಿ ಈ ರೆಸಿಡೆನ್ಸಿಗೆ ಈಗ ಜೀವಜಲ ಪೂರೈಸುತ್ತಿದೆ. ರೆಸಿಡೆನ್ಸಿ ಕಟ್ಟಡ ಆರಂಭವಾದ ವೇಳೆ ಇಲ್ಲೊಂದು ಬಾವಿ ಕೊರೆಯಲಾಗಿತ್ತು. ಆದರೆ, ಕ್ರಮೇಣ ಬಾವಿಯಲ್ಲಿ ನೀರು ಬತ್ತಿ ಹೋಗಿ ಟ್ಯಾಂಕರ್‌ ನೀರನ್ನೇ ಅವಲಂಬಿಸಬೇಕಾಗಿ ಬಂತು. ಅಪಾರ್ಟ್‌ಮೆಂಟ್‌ನ ಅಧ್ಯಕ್ಷ ವಿಲ್ಫೆ†ಡ್‌ ಪಿರೇರಾ ಅವರು ಮಳೆಕೊಯ್ಲು ಯೋಜನೆ ಬಗ್ಗೆ ಯೋಚಿಸಿದರು. ಬಾವಿಯ ಕೆಳಭಾಗದಲ್ಲಿ ಕಾಂಕ್ರೀಟ್‌ ರಿಂಗ್‌ಗಳನ್ನು ಅಳವಡಿಸಿ, ಅಪಾರ್ಟ್‌ ಮೆಂಟ್‌ನ ಮಹಡಿ ಯಿಂದ ಅಂಗಳದ ಒಳಭಾಗದಿಂದ ಮಳೆ ನೀರನ್ನು ಪೈಪ್‌ ಮುಖಾಂತರ ಸಾಗಿಸಿ ಬಾವಿಗೆ ಬೀಳುವಂತೆ ಮಾಡಿದರು. ಮೊದಲ ಎರಡು ವರ್ಷ ನೀರಿಗೆ ಸ್ವಲ್ಪ ಸಮಸ್ಯೆಯಾದರೂ ಬಳಿಕ ಟ್ಯಾಂಕರ್‌ ನೀರಿಗಾಗಿ ಎದುರು ನೋಡಿದ್ದೇ ಇಲ್ಲ. ರೆಸಿಡೆನ್ಸಿಯ 35 ಮನೆಗಳಿಗೆ ಸಾಕಾಗು ವಷ್ಟು ನೀರು ಸಿಗುತ್ತಿದೆ ಎನ್ನುತ್ತಾರೆ ಅವರು. ಅಂದ ಹಾಗೆ, ಇದಕ್ಕೆ ಖರ್ಚಾಗಿರುವುದು ಕೇವಲ 2 ಸಾವಿರ ರೂ.!

ಮಳೆಕೊಯ್ಲು: ಗಾರ್ಡನ್‌ನಲ್ಲಿ ಹಸುರಿನ ನಗು
ಮಲ್ಲಿಕಟ್ಟೆ ಜಾರ್ಜ್‌ ಮಾರ್ಟಿಸ್‌ ರಸ್ತೆ ಬಳಿಯಿರುವ ಕ್ಯಾಲ್ವಿನ್‌ ರೊಡ್ರಿಗಸ್‌ ಅವರ ಮನೆಯಲ್ಲಿ ಮಳೆಗಾಲದಲ್ಲಿ ನೀರು ವ್ಯರ್ಥವಾಗುವ ಬದಲು ಅಂತರ್ಜಲ ಹೆಚ್ಚಿಸುವುದರೊಂದಿಗೆ ಮನೆಯಂಗಳದ ಗಾರ್ಡನ್‌ನಲ್ಲಿ ಹಸುರಿನ ನಗುವಿಗೂ ಕಾರಣವಾಗುತ್ತಿದೆ. ಏಕೆಂದರೆ ವ್ಯರ್ಥವಾಗಿ ಹೋಗುವ ನೀರನ್ನು ಮಳೆಕೊಯ್ಲು ಮೂಲಕ ಹಿಡಿದಿಟ್ಟಿರುವುದು. ಬಾವಿ ಸನಿಹದಲ್ಲಿ ಛಾವಣಿಗೆ ಪೈಪ್‌ ಅಳವಡಿಸಿ ಬಾವಿಗೆ ಸಂಪರ್ಕ ಕಲ್ಪಿಸಿ ದ್ದಾರೆ. ಎರಡು ವರ್ಷಗಳಿಂದ ಹೀಗೆ ಮಾಡುತ್ತಿರುವುದರಿಂದ ಬೇಸಗೆಯಲ್ಲಿ ಇದೇ ನೀರು ಗಾರ್ಡನ್‌ಗೆ ಸಾಕಾಗುತ್ತದೆ.

-ಹಿಲರಿ ಕ್ರಾಸ್ತಾ

Advertisement

Udayavani is now on Telegram. Click here to join our channel and stay updated with the latest news.

Next