Advertisement

ಕೇಂದ್ರ, ರಾಜ್ಯ ಸರಕಾರಗಳು ದಲಿತ ವಿರೋಧಿ

06:00 AM Apr 08, 2018 | |

ಕಾಸರಗೋಡು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಯನ್ನು ಪರಾಭವಗೊಳಿಸಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ಅದರ ಸ್ಪಷ್ಟ ಉದಾಹರಣೆ ಇತ್ತೀಚೆಗೆ ನಡೆದ ಗುಜರಾತ್‌ ವಿಧಾನಸಭಾ ಚುನಾವಣೆ ಮತ್ತು ಉತ್ತರ ಪ್ರದೇಶ ಉಪಚುನಾವಣೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಕೋಮುವಾದ ಮತ್ತು ಫ್ಯಾಸಿಸಂ ನೀತಿಯನ್ನು ಅನುಸರಿಸುತ್ತಿದ್ದರೆ, ಕೇರಳ ರಾಜ್ಯ ಸರಕಾರ ಹಿಂಸಾ ರಾಜಕೀಯದಲ್ಲಿ ನಿರತವಾಗಿದೆ. ಈ ಎರಡೂ ಸರಕಾರಗಳು ದಲಿತ ವಿರೋಧಿ ನೀತಿ ಹೊಂದಿವೆ ಎಂದು ಕಾಂಗ್ರೆಸ್‌ನ ಕೇಂದ್ರ ಕಾರ್ಯ ಕಾರಿಣಿ ಸಮಿತಿ ಸದಸ್ಯ ಎ.ಕೆ. ಆ್ಯಂಟನಿ ಹೇಳಿದರು.

Advertisement

ಕೋಮುವಾದ, ಫ್ಯಾಸಿಸಂ ನೀತಿ ಮತ್ತು ಹಿಂಸಾ ರಾಜಕೀಯ ನಿಲುವು ಪ್ರತಿಭಟಿಸಿ ಕಾಂಗ್ರೆಸ್‌ ರಾಜ್ಯ ಘಟಕ ಅಧ್ಯಕ್ಷ ಎಂ.ಎಂ. ಹಸನ್‌ ನೇತೃತ್ವ ದಲ್ಲಿ ಚೆರ್ಕಳದಿಂದ ಆರಂಭಗೊಂಡ ಜನ ಮೋಚನಾ ಯಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು. ವಿಪಕ್ಷ ನಾಯಕ ರಮೇಶ್‌ ಚೆನ್ನಿತ್ತಲ, ವಿ.ಎಂ. ಸುಧೀರನ್‌, ಕೆ. ಶಂಕರನಾರಾಯಣನ್‌, ಮುಲ್ಲಪಳ್ಳಿ ರಾಮಚಂದ್ರನ್‌, ಕೆ.ಸಿ. ಜೋಸೆಫ್‌, ಶಾನಿ ಮೋಲ್‌ ಉಸ್ಮಾನ್‌, ಡೀನ್‌ ಕುರ್ಯಾಕೋಸ್‌, ವಿದ್ಯಾಧರನ್‌, ಎನ್‌.ಎ. ನೆಲ್ಲಿಕುನ್ನು, ಪಿ.ಬಿ. ಅಬ್ದುಲ್‌ ರಝಾಕ್‌, ಎಜಿಸಿ ಬಶೀರ್‌, ಎ. ಅಬ್ದುಲ್‌ ರಹಿಮಾನ್‌, ಹಕೀಂ ಕುನ್ನಿಲ್‌, ನೀಲಕಂಠನ್‌, ಸಿ.ಕೆ. ಶ್ರೀಧರನ್‌ ಸೇರಿದಂತೆ ಹಲವು ನೇತಾರರು ಉಪಸ್ಥಿತರಿದ್ದರು.

ಯಾತ್ರೆಯು ಕೇರಳ ರಾಜ್ಯದ 140 ವಿಧಾನಸಭಾ ಕ್ಷೇತ್ರಗಳಲ್ಲಿ ಪರ್ಯಟನೆ ನಡೆಸಿ ಎ. 25ರಂದು ತಿರುವನಂತಪುರದಲ್ಲಿ ಸಮಾಪನಗೊಳ್ಳಲಿದೆ. ಸಮಾರೋಪ ಸಮಾರಂಭವನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಉದ್ಘಾಟಿಸುವರು.
ರಾಜ್ಯ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಗಳಾದ ತಂಬಾನೂರು ರವಿ, ಡಾ| ರಾಜಶೇಖರನ್‌ ಯಾತ್ರೆಯನ್ನು ಸಮನ್ವಯಗೊಳಿಸುವರು. ಪಿ.ಎ. ಸಲೀಂ ಮತ್ತು ಐ.ಕೆ. ರಾಜು ಯಾತ್ರೆಯ ಮ್ಯಾನೇಜರ್‌ಗಳಾಗಿ ನಿಯಂತ್ರಿಸುವರು. ಯಾತ್ರೆ ಜತೆ ತಾಯಂದಿರ ಬೆರಳಚ್ಚು ಸಂಗ್ರಹಿಸಿ “ಅಮ್ಮ ಮನಸ್ಸು’ ಎಂಬ ಡಿಜಿಟಲ್‌ ಪ್ರಚಾರ ನಡೆಸಲಾಗುವುದು. ಇದರ ಹೊಣೆಗಾರಿಕೆಯನ್ನು ಸಜಿವ್‌ ಜೋಸೆಫ್‌ ಮತ್ತು ಕೆ. ಪ್ರವೀಣ್‌ ಕುಮಾರ್‌ ಅವರಿಗೆ ವಹಿಸಿಕೊಡಲಾಗಿದೆ. ಯಾತ್ರೆ ಜತೆ “ಸಂಸ್ಕಾರ ಸಾಹಿತಿ’ಯಿಂದ ನಾಟಕಗಳೂ ಪ್ರದರ್ಶನಗೊಳ್ಳಲಿವೆ.

Advertisement

Udayavani is now on Telegram. Click here to join our channel and stay updated with the latest news.

Next