ಇತ್ತೀಚೆಗೆ ಸಂಸತ್‌ನಲ್ಲಿ ಅಂಗೀಕರಿಸಲ್ಪಟ್ಟು ಶೀಘ್ರದಲ್ಲಿಯೇ ದೇಶಾದ್ಯಂತ ಜಾರಿಗೆ ಬರಲಿರುವ ಭಾರತೀಯ ನ್ಯಾಯ ಸಂಹಿತಾ ಕಾಯಿದೆಯಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಚಾಲಕರಿಗೆ 10 ವರ್ಷಗಳ ವರೆಗೆ ಜೈಲು ಮತ್ತು 7 ಲಕ್ಷ ರೂ.ಗಳವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಇದನ್ನು ವಿರೋಧಿಸಿ ಟ್ರಕ್, ಕ್ಯಾಬ್ ಮತ್ತು ಇತರ ವಾಣಿಜ್ಯ ವಾಹನಗಳ ಚಾಲಕರು ಕಳೆ ದೆರಡು ದಿನಗಳಿಂದ ತೀವ್ರ ತೆರನಾದ ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಕೇಂದ್ರ ಗೃಹ ಸಚಿವಾಲಯ, ಮಂಗಳವಾರ ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್‌ಪೊರ್ಟ್ ಕಾಂಗ್ರೆಸ್‌ನ ಪದಾಧಿ ಕಾರಿಗಳೊಂದಿಗೆ ಸಭೆ ನಡೆಸಿ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದೆ. ಕೇಂದ್ರ ಗೃಹ ಕಾರ್ಯದರ್ಶಿ ಅವರು ಮಾತುಕತೆ ವೇಳೆ ಹೊಸ ಕಾಯಿದೆಯಲ್ಲಿ ಪ್ರಸ್ತಾವಿಸಲಾಗಿರುವ ಈ ಅಂಶಗಳನ್ನು ಮುಂದಿನ ಮಾತುಕತೆವರೆಗೆ ತಡೆ ಹಿಡಿಯಲು ಸಮ್ಮತಿ ಸೂಚಿಸಿರುವ ಹಿನ್ನೆಲೆಯಲ್ಲಿ ಲಾರಿ ಮತ್ತು ಟ್ರಕ್ ಚಾಲಕರು ಮುಷ್ಕರವನ್ನು ಹಿಂದೆಗೆದುಕೊಂಡಿದ್ದು ಇದರಿಂದ ಜನಸಾಮಾನ್ಯರು ನಿಟ್ಟುಸಿರು ಬಿಡುವಂತಾಗಿದೆ. ಪ್ರಸ್ತುತ ಜಾರಿಯಲ್ಲಿರುವ ಐಪಿಸಿಯಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಸೆಕ್ಷನ್ 304 ಎ ಅಡಿಯಲ್ಲಿ 2 ವರ್ಷಗಳ ವರೆಗೆ ಜೈಲು ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.
ಆದರೆ ಪರಿಷ್ಕೃತ ಕಾಯಿದೆಯಲ್ಲಿ ಕಾನೂನನ್ನು ಮತ್ತಷ್ಟು ಬಿಗಿಗೊಳಿಸಿ, ಅಪರಾಧಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷೆ ಮತ್ತು ದಂಡವನ್ನು ವಿಧಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಶಿಕ್ಷೆ ಮತ್ತು ದಂಡದ ಪ್ರಮಾಣ ತೀರಾ ಅತಿಯಾಗಿದೆ ಎಂಬುದು ಟ್ರಕ್ ಚಾಲಕರ ಆಕ್ರೋಶ. ಇಷ್ಟೊಂದು ದೊಡ್ಡ ಪ್ರಮಾಣದ ದಂಡವನ್ನು ಬಡ ಚಾಲಕರು ಭರಿಸುವುದಾದರೂ ಎಲ್ಲಿಂದ ಎಂಬುದು ಟ್ರಕ್, ಟ್ಯಾಂಕರ್ ಸಹಿತ ವಾಣಿಜ್ಯ ವಾಹನಗಳ ಬಡ ಚಾಲಕರ ಪ್ರಶ್ನೆ. ತತ್‌ಕ್ಷಣವೇ ಕಾಯಿದೆಗೆ ತಿದ್ದುಪಡಿ ತಂದು ಶಿಕ್ಷೆ ಮತ್ತು ದಂಡದ ಮೊತ್ತವನ್ನು ಕಡಿಮೆಗೊಳಿಸಬೇಕು ಎಂದು ದೇಶದ ಟ್ರಕ್ ಚಾಲಕರ ಸಂಘಟನೆಗಳು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದವು. ಮುಷ್ಕರದ ಎರಡನೇ ದಿನವಾದ ಮಂಗಳವಾರ ದಂದು ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಟ್ರಕ್ ಮತ್ತು ಟ್ಯಾಂಕರ್ ಚಾಲಕರು ಸಂಚಾರವನ್ನು ಸ್ಥಗಿತಗೊಳಿಸಿ ಭಾರೀ ಪ್ರತಿಭಟನೆ ನಡೆಸಿದ್ದರು.
ಇವೆಲ್ಲದರ ನಡುವೆ ಟ್ರಕ್, ಟ್ಯಾಂಕರ್ ಚಾಲಕರ ಮುಷ್ಕರದ ಪರಿಣಾಮ ನೇರ ಮಾರುಕಟ್ಟೆಯ ಮೇಲೆ ಬೀಳಲಾರಂಭಿಸಿತ್ತಲ್ಲದೆ ಇದರ ಬಿಸಿ ಗ್ರಾಹಕರಿಗೂ ತಟ್ಟತೊಡಗಿತ್ತು. ಪೆಟ್ರೋಲ್ ಪಂಪ್‌ಗ್ಳಲ್ಲಿ ತೈಲ ದಾಸ್ತಾನು ಮುಗಿದು, ಪಂಪ್‌ಗ್ಳು ತೈಲ ದಾಸ್ತಾನಿಲ್ಲದೆ ಬಾಗಿಲು ಮುಚ್ಚುವ ಅನಿವಾರ್ಯಕ್ಕೆ ಸಿಲುಕಿದ್ದವು. ಇನ್ನು ಟ್ರಕ್‌ಗಳ ಮುಷ್ಕರದ ಪರಿಣಾಮ ಆಹಾರ, ತರಕಾರಿ ಸಹಿತ ವಿವಿಧ ಅಗತ್ಯ ವಸ್ತುಗಳ ಸಾಗಣೆಗೂ ಅಡಚಣೆ ಉಂಟಾಗಿತ್ತು. ಇವೆಲ್ಲದರ ಪರಿಣಾಮ ಜನಸಾಮಾನ್ಯರು ಸಂಕಷ್ಟಕ್ಕೀಡಾಗುವಂತಾಗಿತ್ತು.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಕೇಂದ್ರ ಗೃಹ ಸಚಿವಾಲಯ, ತತಕ್ಷಣ ಮಧ್ಯಪ್ರವೇಶಿಸಿ, ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್‌ಪೊರ್ಟ್ ಕಾಂಗ್ರೆಸ್‌ನ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವಲ್ಲಿ ಯಶಸ್ವಿಯಾಗಿದೆ. ಚಾಲಕರ ಆಕ್ರೋಶಕ್ಕೆ ತುತ್ತಾಗಿರುವ ಪ್ರಸ್ತಾವನೆಗಳನ್ನು ತಾತ್ಕಾಲಿಕವಾಗಿ ತಡೆಹಿಡಿದು ಮುಂದಿನ ದಿನಗಳಲ್ಲಿ ಈ ಸಂಬಂಧ ಟ್ರಾನ್ಸ್‌ಪೊರ್ಟ್ ಕಾಂಗ್ರೆಸ್‌ನ ಪದಾಧಿಕಾರಿಗಳೊಂದಿಗೆ ವಿಸ್ತೃತ ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲು ಕೇಂದ್ರ ಸರಕಾರ ನಿರ್ಧರಿಸಿದೆ. ಇದಕ್ಕೆ ಟ್ರಾನ್ಸ್ ಪೋರ್ಟ್ ಸಂಘಟನೆಗಳು ಕೂಡ ಸಮ್ಮತಿ ಸೂಚಿಸುವುದರೊಂದಿಗೆ ವಿವಾದ ಶಾಂತಿಯುತವಾಗಿ ಪರಿಹಾರಗೊಂಡಂತಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಬೆಲೆ ಏರಿಕೆಯ ಭೀತಿ ಯಲ್ಲಿದ್ದ ಜನಸಾಮಾನ್ಯರು ಈ ಬೆಳವಣಿಗೆಯಿಂದ ನಿಟ್ಟುಸಿರು ಬಿಡುವಂತಾಗಿದೆ.