Advertisement

Tax; ಕೇಂದ್ರ Vs ರಾಜ್ಯ ಮತ್ತೆ ತೆರಿಗೆ ತಿಕ್ಕಾಟ! ಬೇಡಿಕೆ ತಿರಸ್ಕರಿಸಿದ 16ನೇ ಹಣಕಾಸು ಆಯೋಗ

01:10 AM Aug 30, 2024 | Team Udayavani |

ಬೆಂಗಳೂರು: ತೆರಿಗೆ ಪಾಲು, ಅನುದಾನ ಹಂಚಿಕೆಗೆ ಸಂಬಂಧಿಸಿ ಕೇಂದ್ರದ ವಿರುದ್ಧ ಸಮರ ಸಾರಿ ರುವ ರಾಜ್ಯ ಸರಕಾರಕ್ಕೆ ಮತ್ತೂಂದು ಹಿನ್ನಡೆಯಾಗಿದ್ದು, ಈ ಹೋರಾಟ ಮತ್ತೊಂದು ಹಂತಕ್ಕೆ ಹೋಗುವ ಲಕ್ಷಣ ಗೋಚ ರಿಸುತ್ತಿದೆ.

Advertisement

ರಾಜ್ಯಕ್ಕೆ 5 ವರ್ಷಗಳಿಂದ ವಿಶೇಷ ಅನುದಾನ ಹಾಗೂ ತೆರಿಗೆ ಹಂಚಿಕೆಯಲ್ಲಿ 80 ಸಾವಿರ ಕೋಟಿ ರೂ. ಅನುದಾನ ನಷ್ಟವನ್ನು ಪರಿಹರಿಸಬೇಕೆಂದು 16ನೇ ಹಣಕಾಸು ಆಯೋಗದ ಮುಂದೆ ರಾಜ್ಯ ಸರಕಾರ ಪ್ರತಿಪಾದಿಸಿದರೆ, “ಹಿಂದಿನ ಹಣಕಾಸು ಆಯೋಗದ ಕ್ರಮದಿಂದ ರಾಜ್ಯಗಳಿಗೆ ಆದ ನಷ್ಟವನ್ನು ಮುಂದೆ ಬರುವ ಆಯೋಗ ಪರಿಹರಿಸುವ ಪದ್ಧತಿ ಇಲ್ಲ’ ಎಂದು 16ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ| ಅರವಿಂದ ಪನಗಾರಿಯಾ ಹೇಳಿದ್ದಾರೆ.

ರಾಜ್ಯಕ್ಕೆ ಆಗಮಿಸಿರುವ ಡಾ| ಪನ ಗಾರಿಯಾ ಅಧ್ಯಕ್ಷತೆಯ 16ನೇ ಹಣಕಾಸು ಆಯೋಗದ ನಿಯೋಗದ ಜತೆಗೆ ಸುದೀರ್ಘ‌ ಚರ್ಚೆ ನಡೆಸಿದ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ನಿಯೋಗ 15ನೇ ಹಣಕಾಸು ಆಯೋಗದಿಂದ ಕರ್ನಾಟಕಕ್ಕೆ ಆಗಿರುವ ನಷ್ಟದ ಜತೆಗೆ 16ನೇ ಆಯೋಗ ರಾಜ್ಯಕ್ಕೆ ಅನುದಾನ ಹಂಚಿಕೆ ಮಾಡುವಾಗ ಈಗ ಪಾಲಿಸುತ್ತಿರುವ ಮಾನದಂಡಗಳಲ್ಲಿ ಪರಿಷ್ಕರಣೆ ಮಾಡಲೇ ಬೇಕೆಂದು ಆಗ್ರಹಿಸಿತು.

ಅಲ್ಲದೆ 16ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಶೇ. 50ರಷ್ಟು ತೆರಿಗೆ ಪಾಲು ನೀಡಬೇಕೆಂಬ ಮಹತ್ವದ ಹಕ್ಕೊತ್ತಾಯ ಮಂಡಿಸಿರುವ ರಾಜ್ಯ ಸರಕಾರವು ಸೆಸ್‌ ಹಾಗೂ ಸರ್ಚಾರ್ಜ್‌ ಮೂಲಕ ಕೇಂದ್ರ ಸರಕಾರ ಸಂಗ್ರಹಿಸುವ ಸಂಪನ್ಮೂಲವೂ ರಾಜ್ಯಕ್ಕೆ ಹಂಚಿಕೆಯಾಗಬೇಕೆಂದು ಆಗ್ರಹಿಸಿದೆ. ರಾಜ್ಯಕ್ಕೆ ಕಳೆದ 5 ವರ್ಷಗಳಿಂದ ವಿಶೇಷ ಅನುದಾನ ಹಾಗೂ ತೆರಿಗೆ ಹಂಚಿಕೆಯಲ್ಲಿ 80 ಸಾವಿರ ಕೋಟಿ ರೂ. ಅನುದಾನ ನಷ್ಟವನ್ನು ಪರಿಹರಿಸಬೇಕೆಂದು ಪ್ರತಿಪಾದಿಸಿತು.

ನಷ್ಟದ ಪಟ್ಟಿ
-ರಾಜ್ಯ ನೀಡುವ ಪ್ರತೀ ಒಂದು ರೂಪಾಯಿಗೆ ಕೇವಲ 15 ಪೈಸೆ ಮಾತ್ರ ವಾಪಸ್‌ ಬರುತ್ತಿದೆ.
-15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ನೀಡುವ ಪಾಲು ಶೇ. 4.713ರಿಂದ ಶೇ.3.647ಗೆ ಇಳಿಕೆಯಾಗಿದೆ. ಇದರಿಂದ 5 ವರ್ಷದಲ್ಲಿ 68,275 ಕೋ.ರೂ. ನಷ್ಟ ಉಂಟಾಗಿದೆ.
-15ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕಕ್ಕೆ ಒಟ್ಟು 80,000 ಕೋಟಿ ರೂ. ನಷ್ಟ ಉಂಟಾಗಿದೆ.
-ಪಾಲಿನ ಪರಿಗಣನೆಯಲ್ಲಿ ಅಸಮತೋಲನದಿಂದಾಗಿ ಆರ್ಥಿಕವಾಗಿ ಹಾಗೂ ಜನಸಂಖ್ಯೆ ನಿಯಂತ್ರಣ ಕಾರ್ಯದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಕರ್ನಾಟಕ ಹಾಗೂ ಈ ರೀತಿಯ ರಾಜ್ಯಗಳು ದಂಡ ಎದುರಿಸುವಂತಾಗಿದೆ.

Advertisement

ರಾಜ್ಯದ ಬೇಡಿಕೆಗಳೇನು?
-5 ವರ್ಷಗಳ ವಿಶೇಷ ಅನುದಾನ, ತೆರಿಗೆ ಹಂಚಿಕೆಗಳ ಬಗ್ಗೆ ವಿವರಣೆ
-ಈಗ ಪಾಲಿಸುತ್ತಿರುವ ಮಾನದಂಡಗಳಲ್ಲಿ ಪರಿಷ್ಕರಣೆಗೆ ರಾಜ್ಯ ಆಗ್ರಹ
-ಬೆಂಗಳೂರಿನ ಅಭಿವೃದ್ಧಿಗೆ 27 ಸಾವಿರ ಕೋಟಿ ರೂ. ಬೇಕು: ಬೇಡಿಕೆ
-ಕಲ್ಯಾಣ ಕರ್ನಾಟಕ ಭಾಗಕ್ಕೆ 25 ಸಾವಿರ ಕೋಟಿ ರೂ. ಹಣ ಕೊಡಿ
-ಪಶ್ಚಿಮಘಟ್ಟ ವಲಯ ನಿರ್ವಹಣೆಗೆ 10 ಸಾವಿರ ಕೋಟಿ ರೂ. ಬೇಕು

ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೋದಿಯವರು ತೆರಿಗೆ ಹಂಚಿಕೆಯಲ್ಲಿ ಶೇ. 50ರಷ್ಟು ಪಾಲಿಗೆ ಬೇಡಿಕೆಯಿಟ್ಟಿದ್ದರು. ಅನೇಕ ರಾಜ್ಯಗಳು ಈ ರೀತಿ ಬೇಡಿಕೆ ಸಲ್ಲಿಸಿರುವುದರಿಂದ ಕರ್ನಾಟಕದ ಬೇಡಿಕೆಯನ್ನು ಈಡೇರಿಸಬಹುದೆಂಬ ವಿಶ್ವಾಸವಿದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.