Advertisement

Drought Relief; ಮತ್ತೆ ಕೇಂದ್ರ Vs ರಾಜ್ಯ ಬರ ಪರಿಹಾರ ಜಟಾಪಟಿ

12:58 AM Apr 07, 2024 | Team Udayavani |

ಬೆಂಗಳೂರು: ರಾಜ್ಯ ಬರ ಪರಿಹಾರಕ್ಕೆ ಸಂಬಂಧಿಸಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡುವೆ ಮತ್ತೆ ವಾಗ್ಯುದ್ಧ ಆರಂಭವಾಗಿದೆ.

Advertisement

ಶನಿವಾರ ಬೆಂಗಳೂರಿನಲ್ಲಿ ತುರುಸಿನ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ರಾಜ್ಯ ಸರಕಾರ ವಾದಿಸುತ್ತಿರುವ ವಿಶೇಷ ಅನುದಾನ, ಮಧ್ಯಾಂತರ ಪರಿಹಾರಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನೊಂದೆಡೆ, ಈ ಬಗ್ಗೆ ಚರ್ಚಿಸಲು ಬಹಿರಂಗ ಸವಾಲು ಹಾಕಿದ್ದ ಸಚಿವ ಕೃಷ್ಣ ಬೈರೇಗೌಡ, ಅನ್ಯಾಯ ಸರಿಪಡಿಸಿ ಎಂದು ಕೇಳಿದರೆ ಕೇಂದ್ರ ಸರಕಾರ ಅವಮಾನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ನಿರ್ಮಲಾ ಹೇಳಿದ್ದೇನು?
1. ರಾಜ್ಯಕ್ಕೆ ಬರಪರಿಹಾರ ಬಿಡುಗಡೆ ಮಾಡುವುದಕ್ಕೆ ಕೇಂದ್ರ ಸರಕಾರ ಉದ್ದೇಶಪೂರ್ವಕ ವಿಳಂಬ ಮಾಡಿಲ್ಲ.

2.ಎನ್‌ಡಿಆರ್‌ಎಫ್ ಕಾಯ್ದೆಯ ಪ್ರಕಾರ ಬರ ವಿಷಯದಲ್ಲಿ ಮಧ್ಯಾಂತರ ಪರಿಹಾರ ಅಥವಾ ವಿಶೇಷ ಅನುದಾನ ನೀಡುವುದಕ್ಕೆ ಅವಕಾಶವಿಲ್ಲ

Advertisement

3.”ನನ್ನ ತೆರಿಗೆ, ನನ್ನ ಹಕ್ಕು’ ಎಂದು ಬೆಂಗಳೂರಿಗರು ತಮ್ಮ ತೆರಿಗೆ ಪಾಲನ್ನು ಬೆಂಗಳೂರಿಗೆ ಮಾತ್ರ ಕೇಳಲಾರಂಭಿಸಿದರೆ ಕಲ್ಯಾಣ ಕರ್ನಾಟಕದ ಪರಿಸ್ಥಿತಿ ಏನಾದೀತು?

4.ರಾಜ್ಯಕ್ಕೆ 5 ಸಾವಿರ ಕೋಟಿ ರೂ. ಪರಿಹಾರ ನೀಡುವಂತೆ 15ನೇ ಹಣಕಾಸು ಆಯೋಗದ ಮಧ್ಯಾಂತರ ವರದಿಯಲ್ಲಿ ಹೇಳಲಾಗಿತ್ತು ಎಂಬ ರಾಜ್ಯ ಸರಕಾರದ ವಾದ ಅರ್ಧ ಸತ್ಯ. ಏಕೆಂದರೆ ಕೇಂದ್ರ ಸರಕಾರವು ಮಧ್ಯಾಂತರ ವರದಿಯನ್ನು ಒಪ್ಪಿಕೊಂಡೇ ಇಲ್ಲ.

5.ಬಂಡವಾಳ ವೆಚ್ಚಕ್ಕೆ ಹಣಕಾಸು ಆಯೋಗ ಎಂದಿಗೂ ಅನುದಾನ ನೀಡಿದ ಉದಾಹರಣೆ ಇಲ್ಲ. ಅದಾಗಿಯೂ ರಾಜ್ಯಕ್ಕೆ 50 ವರ್ಷಗಳಿಗೆ ಅನ್ವಯವಾಗುವಂತೆ 8,035 ಕೋ.ರೂ.ಗಳಷ್ಟು ಬಡ್ಡಿರಹಿತ ಅನುದಾನ ನೀಡಲಾಗಿದೆ.

6.ನಾವು ದೇಶದ ಹಿತದಲ್ಲಿ ತೆರಿಗೆ ಕಟ್ಟುತ್ತೇವೆ ಎಂಬುದನ್ನು ನೆನಪಿಡಬೇಕು. “ನನ್ನ ತೆರಿಗೆ, ನನ್ನ ಹಕ್ಕು’ ಎಂದು ಅನರ್ಥ ಕಾರಿಯಾಗಿ ಮಾತನಾಡಿದರೆ ಅದು ದೇಶದ ಹಿತವಲ್ಲ.

ಕೃಷ್ಣ ಬೈರೇಗೌಡ ವಾದವೇನು?
1. ನಾವು ನಮಗಾಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಎಂದು ಕೇಳಿದರೆ ಕೇಂದ್ರ ಸರಕಾರ ಅವಮಾನ ಮಾಡುತ್ತಿದೆ.

2.ರಾಜ್ಯಗಳಿಗೆ ವ್ಯಾಟ್‌ ವಿಧಿಸುವ ಅಧಿಕಾರವಿದ್ದಾಗ ಕರ್ನಾ ಟಕವು ತೆರಿಗೆ ಸಂಗ್ರಹದಲ್ಲಿ ವಾರ್ಷಿಕವಾಗಿ ಸರಾಸರಿ
ಶೇ. 15ರಷ್ಟು ಪ್ರಗತಿ ದಾಖಲಿಸಿತ್ತು. ಆದರೆ ಜಿಎಸ್‌ಟಿ ಬಂದ ಬಳಿಕ ರಾಜ್ಯಕ್ಕೆ ಸುಮಾರು 60 ಸಾವಿರ ಕೋಟಿ ರೂ. ವಾರ್ಷಿಕ ನಷ್ಟವಾಗಿದೆ.

3.ಕೇಂದ್ರ ಸರಕಾರದ ನೀತಿಗಳಿಂದಾಗಿ ರಾಜ್ಯಕ್ಕೆ ಕಳೆದ ಐದು ವರ್ಷಗಳಲ್ಲಿ 1.85 ಲಕ್ಷ ಕೋಟಿ ರೂ. ಕೈತಪ್ಪಿದೆ. ಪ್ರತೀ ವರ್ಷ ಸುಮಾರು 52 ಸಾವಿರ ಕೋಟಿ ರೂ. ನಷ್ಟ ಅನುಭವಿಸುವಂತಾಗಿದೆ.

4.15ನೇ ಹಣಕಾಸು ಆಯೋಗವು ಶೇ. 41 ತೆರಿಗೆ ಪಾಲನ್ನು ನೀಡಿದ್ದರೂ ವಾಸ್ತವದಲ್ಲಿ ಶೇ. 30ರಷ್ಟು ಮಾತ್ರ ತೆರಿಗೆ ಪಾಲನ್ನು ಕೇಂದ್ರ ಸರಕಾರ ನೀಡಿದೆ.

5.ಕೇಂದ್ರ ಸರಕಾರ ಪುರಸ್ಕೃತ ಯೋಜನೆಗಳಿಗೆ ಹಣ ನೀಡುತ್ತಿದ್ದೇವೆ ಎಂದು ವಾದಿಸಲಾಗುತ್ತಿದೆ. ಆದರೆ ಕೇಂದ್ರ ಸರಕಾರದ ಯೋಜನೆಗಳಿಗೆ ಶೇ. 50ಕ್ಕಿಂತ ಹೆಚ್ಚು ಅನುದಾನವನ್ನು ರಾಜ್ಯ ಸರಕಾರವೇ ಭರಿಸುತ್ತಿದೆ.

6.ನನಗೆ ರಾಜ್ಯದ ಹಿತದೃಷ್ಟಿಯೇ ಮುಖ್ಯ. ಇದರಲ್ಲಿ ರಾಜ ಕೀಯ ಇಲ್ಲ. ಸಚಿವೆ ನಿರ್ಮಲಾ ಮತ್ತು ನನ್ನ ಮಧ್ಯೆ ಉತ್ತಮ ವಿಶ್ವಾಸವಿದೆ. ಇಲ್ಲಿ ವೈಯಕ್ತಿಕ ವಾದ- ವ್ಯಾಜ್ಯ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next