Advertisement

ಸಾಲ ಮರುಪಾವತಿ ಅವಧಿ ವಿಸ್ತರಿಸಿದ ಕೇಂದ್ರ ; ರಾಜ್ಯ ಸರಕಾರದ ಮೌನ; ರೈತರು ಅತಂತ್ರ

02:07 PM Jun 08, 2020 | mahesh |

ಮುಂಡಾಜೆ: ಕೋವಿಡ್ ಲಾಕ್‌ಡೌನ್‌ ಕಾರಣದಿಂದ ಜನ ಸಾಮಾನ್ಯರ ಆದಾಯಕ್ಕೆ ಪೆಟ್ಟು ಬಿದ್ದಿರುವ ಕಾರಣ ಕೇಂದ್ರ ಸರಕಾರ ಮತ್ತು ಆರ್‌ಬಿಐ ಹೊರಡಿಸಿದ ಸಾಲ ಮರುಪಾವತಿ ವಿಸ್ತರಣೆ ಹೊಸ ಆದೇಶದಲ್ಲಿ ಬ್ಯಾಂಕ್‌ಗಳ ಸುಸ್ತಿ ಹಾಗೂ ಚಾಲ್ತಿ ಸಾಲಗಳನ್ನು ಮರು ಪಾವತಿ ಸಲು ಆಗಸ್ಟ್‌ ಕೊನೆಯವರೆಗೆ ಸಮಯವಿದೆ ಎಂದು ತಿಳಿಸಲಾಗಿದೆ. ಆದರೆ ರಾಜ್ಯ ಸರಕಾರ ಈ ಬಗ್ಗೆ ಯಾವುದೇ ಆದೇಶ ಹೊರಡಿಸದೆ ಮೌನಕ್ಕೆ ಶರಣಾಗಿರುವುದರಿಂದ ಸಾಲ ಕಟ್ಟಬೇಕಾದ ರೈತರು ಅತಂತ್ರ ಸ್ಥಿತಿ ಎದುರಿಸುವಂತಾಗಿದೆ. ರಾಜ್ಯ ಸರಕಾರದ ಅಧೀನದಲ್ಲಿರುವ ಸಹಕಾರ ಸಂಘಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಸಾಲಗಾರ ರೈತರಿಗೆ ಜೂ. 30ರೊಳಗೆ ಅಥವಾ ಅದರೊಳಗಿನ ಅವಧಿಯ ದಿನಾಂಕಕ್ಕೆ ಮರುಪಾವತಿಸುವಂತೆ ನೋಟಿಸ್‌ ಬರಲಾರಂಭಿಸಿದೆ. ಕೃಷಿ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ಹಾಗೂ ಬೆಲೆ ಸ್ಥಿರತೆ ನಿಗದಿಗೊಂಡಿಲ್ಲ. ಮಳೆಗಾಲದ ಕೃಷಿ ಕೆಲಸ, ಔಷಧ ಸಿಂಪಡಣೆ, ಗೊಬ್ಬರ ಹಾಕುವ ಕೆಲಸಗಳಿಗೆ ಹಣ ಇಲ್ಲದೇ
ರೈತರು ಪರದಾಡುವಂತಾಗಿದೆ. ಅತ್ತದರಿ, ಇತ್ತಪುಲಿ ಸಹಕಾರ ಸಂಘಗಳ ಸಿಬಂದಿ ಸಾಲ ಮರುಪಾವತಿ ಕುರಿತು ಬಾಕಿದಾರರಿಗೆ ನೋಟಿಸ್‌ ಜಾರಿ ಮಾಡತೊಡಗಿದ್ದಾರೆ. ಈ ಬಗ್ಗೆ ಸಾಲಗಾರರು ಸಹಕಾರ ಸಂಘಗಳಿಗೆ ಬಂದು ಸಿಬಂದಿಯನ್ನು ತರಾ ಟೆಗೆ ತೆಗೆದುಕೊಳ್ಳುತ್ತಿದ್ದಾರೆ. ರಾಜ್ಯ ಸರಕಾರದ ಆದೇಶ ಬದಲಾಗದ ಕಾರಣ ಸಿಬಂದಿ ಕೂಡ ಏನನ್ನೂ ಹೇಳಲಾರದ ಸ್ಥಿತಿಯಲ್ಲಿದ್ದಾರೆ.

Advertisement

ಎಂಕೆಸಿಸಿ ಸಾಲ
ಓರ್ವ ಕೃಷಿಕನಿಗೆ ಗರಿಷ್ಠ 3 ಲಕ್ಷ ರೂ. ತನಕ ನೀಡುತ್ತಿರುವ ಎಂಕೆಸಿಸಿ ಹೆಸರಿನ ಒಂದು ವರ್ಷ ಅವಧಿಯ ನವೀಕರಿಸಬಹುದಾದ ಕೃಷಿ ಸಾಲದ ಮೊತ್ತವನ್ನು ರಾಜ್ಯ ಸರಕಾರ ಕೇಂದ್ರ ಸರಕಾರದಿಂದ ಶೇ. 7.4 ಬಡ್ಡಿ ದರ ದಲ್ಲಿ ಪಡೆದು ಶೂನ್ಯ ಬಡ್ಡಿ ದರದಲ್ಲಿ ನೀಡುತ್ತಿದೆ. ರೈತರು ಇದಕ್ಕೆ ಯಾವುದೇ ಬಡ್ಡಿ ಪಾವತಿಸಬೇಕಾದ ಅಗತ್ಯ ಇಲ್ಲದ ಕಾರಣ ಈ ಸಾಲಗಳ ಅವಧಿ ವಿಸ್ತರಣೆ ಮಾಡಿದರೆ ಸರಕಾರಕ್ಕೆ ಹಾಗೂ ಸಹಕಾರ ಸಂಘಗಳಿಗೆ ಯಾವುದೇ ನಷ್ಟವಾಗದು. ಆದರೆ ಸಾಲದ ಅಸಲು ಮೊತ್ತವನ್ನು ರೈತರು ನಿಗದಿತ ದಿನಗಳ ಅವಧಿಗೆ ಪಾವತಿ ಸಲೇ ಬೇಕು. ಆದರೆ ಸಂಕಷ್ಟದ ಈ ದಿನಗಳಲ್ಲಿ ಮೊತ್ತ ಹೊಂದಾಣಿಕೆ ಮಾಡಿಕೊಳ್ಳಲಾಗದೇ ಸಾಲಗಾರರು ಬವಣೆ ಪಡುವಂತಾಗಿದೆ.

ನೋಟಿಸ್‌ ಬಂದಿದೆ
ಕೇಂದ್ರ ಸರಕಾರ ಸಾಲ ಮರುಪಾವತಿಗೆ ಆಗಸ್ಟ್‌ ಕೊನೆಯವರೆಗೆ ಸಮಯವಿದೆ ಎಂದು ಘೋಷಣೆ ಮಾಡಿದ್ದರೂ ಜೂನ್‌ನಲ್ಲೇ ಸಾಲ ಮರುಪಾವತಿಸುವಂತೆ
ಸಹಕಾರ ಸಂಘದಿಂದ ನೋಟಿಸ್‌ ಬಂದಿದೆ.
– ವಿಶ್ವನಾಥ, ಎಂಕೆಸಿಸಿ ಸಾಲಗಾರ, ಮುಂಡಾಜೆ

ಆದೇಶ ಬಂದಿಲ್ಲ
ಸಾಲ ಮರು ಪಾವತಿ ದಿನಾಂಕ ವಿಸ್ತರಣೆ ಕುರಿತು ರಾಜ್ಯ ಸರಕಾರದಿಂದ ಯಾವುದೇ ಆದೇಶ ಬಂದಿಲ್ಲ. ಈ ಕಾರಣದಿಂದ ಸಹಕಾರ ಸಂಘದವರು ಸಾಲ ಮರುಪಾವತಿಗೆ ನೋಟಿಸ್‌ ನೀಡುತ್ತಿದ್ದಾರೆ.
– ಪ್ರವೀಣ್‌ ನಾಯಕ್‌, ಉಪನಿಬಂಧಕರು, ಸಹಕಾರ ಇಲಾಖೆ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next