Advertisement

ನೆರೆ ಅಧ್ಯಯನಕ್ಕೆ ಶೀಘ್ರ ಕೇಂದ್ರ ತಂಡ: ಸಚಿವ ಆರ್‌. ಅಶೋಕ್‌

12:33 AM Aug 28, 2020 | mahesh |

ಬೀದರ್‌: ರಾಜ್ಯದಲ್ಲಿ ಪ್ರವಾಹದಿಂದ ಉಂಟಾಗಿರುವ ಹಾನಿ ಪರಿಶೀಲನೆಗಾಗಿ ಕೇಂದ್ರದ ಅಧ್ಯಯನ ತಂಡ ಇನ್ನೆರಡು ದಿನಗಳಲ್ಲಿ ಭೇಟಿ ನೀಡಲಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದರು. ರಾಜ್ಯ ಸರಕಾರದ ಮನವಿ ಮೇರೆಗೆ ಕೇಂದ್ರ ಗೃಹ ಸಚಿವಾಲಯದ ಜಂಟಿ ನಿರ್ದೇಶಕ ಕೆ.ಬಿ. ಪ್ರತಾಪ್‌ ನೇತೃತ್ವದ 6 ಜನ ಅಧಿಕಾರಿಗಳ ತಂಡ ರಾಜ್ಯಕ್ಕೆ ಆಗಮಿಸಲಿದೆ. ಈ ತಂಡ ಮೂರ್‍ನಾಲ್ಕು ದಿನ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಹಾನಿಯ ಕುರಿತು ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲಿದೆ. ತಂಡದ ಜತೆ ಚರ್ಚೆ ನಡೆಸಿ ಮಳೆಯಿಂದಾಗಿರುವ ಹಾನಿ ಮತ್ತು ಅನಾಹುತದ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಅವರು ಗುರುವಾರ ಪತ್ರಿಕಾ ಗೋಷ್ಠಿ ಯಲ್ಲಿ ಹೇಳಿದರು. ಸರಕಾರವು ಬೆಳೆ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಪರ ನಿಲ್ಲಲಿದೆ.

Advertisement

ಯಾವುದೇ ಆರ್ಥಿಕ ಸಮಸ್ಯೆ ಎದುರಾದರೂ ಸರಕಾರ ಬೆಳೆ ಕಳೆದು ಕೊಂಡಿರುವ ರೈತರಿಗೆ ಪರಿಹಾರ ಕೊಡಲು ಹಿಂದೇಟು ಹಾಕುವುದಿಲ್ಲ. ನೆರೆ ಪರಿಸ್ಥಿತಿ ನಿರ್ವಹಣೆಗೆ ಹಣದ ಕೊರತೆ ಇಲ್ಲ, ಕಾಮಗಾರಿಗಳಿಗಾಗಿ ಈಗಾಗಲೇ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಖಾತೆಗೆ 947 ಕೋ.ರೂ. ಜಮೆ ಮಾಡಲಾಗಿದೆ. ಎನ್‌ಡಿಆರ್‌ಎಫ್‌ನಡಿ ರಾಜ್ಯಕ್ಕೆ 2ನೇ ಕಂತಿನಡಿ 395 ಕೋ. ರೂ.ಗಳಿಗೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ. ಹೊಸದಾಗಿ 5 ತಂಡ ಸೇರಿ ರಾಜ್ಯದಲ್ಲಿ ಒಟ್ಟು 9 ಎನ್‌ಡಿಆರ್‌ಎಫ್‌ ತಂಡಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.

ಖಾತೆಗೆ ವೃದ್ಧಾಪ್ಯ ವೇತನ
ವೃದ್ಧಾಪ್ಯ ವೇತನಕ್ಕಾಗಿ ಆಧಾರ್‌ ಕಾರ್ಡ್‌ನಲ್ಲಿ 60 ವರ್ಷ ತುಂಬಿದ ಅರ್ಹರನ್ನು ಸರಕಾರವೇ ಫಲಾನುಭವಿಗಳೆಂದು ಗುರುತಿಸಿ, ಯಾವುದೇ ದಾಖಲೆ, ದೃಢೀಕರಣ ಇಲ್ಲದೇ ಕೇವಲ ಭಾವಚಿತ್ರ ಪಡೆದು ಅವರ ಹೆಸರಿನಲ್ಲಿ ಬ್ಯಾಂಕ್‌ ಖಾತೆ ತೆರೆದು ವೇತನ ಪಾವತಿಸಲಿದೆ ಎಂದು ಅವರು ಹೇಳಿದರು.

24 ತಾಸುಗಳಲ್ಲೇ ಪರಿಹಾರ
ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಇನ್ನು ಮುಂದೆ ಕೃಷಿ ಇಲಾಖೆ ಬದಲು ಕಂದಾಯ ಇಲಾಖೆ ಯಿಂದಲೇ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ನಿಧಿ ಸ್ಥಾಪಿಸಿ ಆತ್ಮಹತ್ಯೆ ಮಾಡಿಕೊಂಡ 24 ತಾಸುಗಳಲ್ಲೇ ರೈತ ಕುಟುಂಬಕ್ಕೆ ಪರಿಹಾರ ಸಿಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಆರ್‌. ಅಶೋಕ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next