Advertisement

ಕೇಂದ್ರದ ಮಾರ್ಗಸೂಚಿ; ಹಿರಿಯ ಸಚಿವರ ಜತೆ ಮುಖ್ಯಮಂತ್ರಿ ಸಭೆ

12:42 AM Apr 16, 2020 | Sriram |

ಬೆಂಗಳೂರು: ಕೋವಿಡ್ 19 ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಮೇ 3ರ ವರೆಗೆ ವಿಸ್ತರಿಸಿದ್ದ ಕೇಂದ್ರ ಸರಕಾರ, ಜಾರಿ ಸಂಬಂಧ ಮಾರ್ಗಸೂಚಿ ಹೊರಡಿಸಿದ ಬೆನ್ನಲ್ಲೇ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ಬುಧವಾರ ಹಿರಿಯ ಸಚಿವರು ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸಿದರು.
ಕೇಂದ್ರದ ಮಾರ್ಗಸೂಚಿ ಅನ್ವಯ ರಾಜ್ಯ ಸರಕಾರ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.

Advertisement

ಕೇಂದ್ರ ಸರಕಾರ ಕೆಲವೊಂದು ವಲಯಕ್ಕೆ ವಿನಾಯಿತಿ ನೀಡಿರುವುದರಿಂದ ಅದಕ್ಕೆ ಸಂಬಂಧಪಟ್ಟ ನೌಕರರ ಓಡಾಟಕ್ಕೆ ಪಾಸ್‌ ವ್ಯವಸ್ಥೆ ಕಲ್ಪಿಸುವ ಬಗ್ಗೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಜತೆ ಚರ್ಚಿಸಿ ಎಂದು ಸೂಚಿಸಿದರು. ವಿನಾಯಿತಿ ವಲಯಕ್ಕೆ ಸಂಬಂಧಿಸಿದಂತೆ ಇಲಾಖೆಗಳು ರೂಪಿಸಬೇಕಾದ ನಿಯಮಾವಳಿ ಬಗ್ಗೆಯೂ ಸಮಾಲೋಚನೆ ನಡೆಸಲಾಯಿತು.

ಮದ್ಯ ಮಾರಾಟ: ಎ. 20ರ ಅನಂತರ ತೀರ್ಮಾನ
ಎಂಎಸ್‌ಐಎಲ್‌ ಹಾಗೂ ಎಂಆರ್‌ಪಿ ಮಳಿಗೆಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಸಂಬಂಧವೂ ಪ್ರಸ್ತಾವವಾಗಿ, ಕೆಲವೊಂದು ತೀರ್ಮಾನಗಳನ್ನು ರಾಜ್ಯ ಸರಕಾರಗಳು ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ತೆಗೆದುಕೊಳ್ಳಬಹುದು ಎಂದು ಕೇಂದ್ರ ಸರಕಾರ ತಿಳಿಸಿರುವುದರಿಂದ ಎ. 20ರ ಅನಂತರ. ಆ ಬಗ್ಗೆ ತೀರ್ಮಾನ ಕೈಗೊಳ್ಳೋಣ ಎಂದು ಅಭಿಪ್ರಾಯ ವ್ಯಕ್ತವಾಯಿತು ಎಂದು ತಿಳಿದು ಬಂದಿದೆ.
ಆರೋಗ್ಯ, ವೈದ್ಯಕೀಯ ಶಿಕ್ಷಣ, ಕೃಷಿ, ಮಾರುಕಟ್ಟೆ, ತೋಟಗಾರಿಕೆ, ಸಹಕಾರ, ಕಂದಾಯ ಸಚಿವರು ಹೆಚ್ಚು ಶ್ರಮ ವಹಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗಳಲ್ಲೇ ಇದ್ದು, ಪರಿಸ್ಥಿತಿ ನಿರ್ವಹಣೆ ಮಾಡಬೇಕು. ಲಾಕ್‌ಡೌನ್‌ ಕಟ್ಟು ನಿಟ್ಟಾಗಿ ಜಾರಿ, ಅಗತ್ಯ ವಸ್ತುಗಳ ಪೂರೈಕೆಗೆ ಕಾಳಜಿ ವಹಿಸಬೇಕು ಎಂದು ಮುಖ್ಯಮಂತ್ರಿಯವರು ಸೂಚಿಸಿದರು.

ಇಂದಿನಿಂದ ಪ್ರಮುಖ ಇಲಾಖೆ ನೌಕರರು ಕರ್ತವ್ಯಕ್ಕೆ
ಬೆಂಗಳೂರು: ಗುರುವಾರದಿಂದ ಪ್ರಮುಖ ಇಲಾಖೆಗಳ ನೌಕರರು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ.
ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್‌ ಈ ಕುರಿತು ಆದೇಶ ಹೊರಡಿಸಿದ್ದು, ಅಗತ್ಯ ಸೇವೆಗಳಿಗೆ ಸಂಬಂಧಿಸಿದ 14 ಇಲಾಖೆಗಳ ಎಲ್ಲ ವೃಂದದ ಅಧಿಕಾರಿ ಸಿಬಂದಿ ಕೆಲಸಕ್ಕೆ ಹಾಜರಾಗಬೇಕು ಎಂದು ತಿಳಿಸಲಾಗಿದೆ.ಆರೋಗ್ಯ, ವೈದ್ಯಕೀಯ, ಒಳಾಡಳಿತ, ಕಂದಾಯ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಆಹಾರ ಮತ್ತು ನಾಗರಿಕ ಪೂರೈಕೆ, ವಾರ್ತಾ, ಸಾರಿಗೆ, ಇಂಧನ ಇಲಾಖೆ, ಡಿಪಿಎಆರ್‌, ಖಜಾನೆ, ಪಶು ಸಂಗೋಪನೆ, ಮೀನುಗಾರಿಕೆ, ಅರಣ್ಯ ಇಲಾಖೆಗಳ ಎಲ್ಲ ವರ್ಗಗಳ‌ ಅಧಿಕಾರಿ, ಸಿಬಂದಿ ಕೆಲಸಕ್ಕೆ ಹಾಜರಾಗಬೇಕು. ಉಳಿದಂತೆ ನಿಗಮ, ಮಂಡಳಿ, ಪ್ರಾಧಿಕಾರಗಳ ಗ್ರೂಪ್‌ ಎ ವೃಂದದ ಎ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಬೇಕು. ದೈಹಿಕ ಅಂಗವಿಕಲ, ದೃಷ್ಟಿಹೀನ ಅಧಿ ಕಾರಿ, ಸಿಬಂದಿಗೆ ವಿನಾಯಿತಿ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next