Advertisement

ಮತ್ತಷ್ಟು ಏರುತ್ತಲೇ ಇದೆ ಈರುಳ್ಳಿ ದರ ; ಸಂಸತ್ತಿನಲ್ಲಿ ಬಿರುಸಿನ ಚರ್ಚೆ

09:52 AM Dec 06, 2019 | Team Udayavani |

ಹೊಸದಿಲ್ಲಿ: ಇಡೀ ದೇಶದ ಜನಸಾಮಾನ್ಯರ ಜೇಬು ಸುಡುತ್ತಿರುವ ಈರುಳ್ಳಿ ದರದ ಬಿಸಿ ಪ್ರಭಾವ ಕೇಂದ್ರ ಹಣಕಾಸು ಸಚಿವೆಗೇ ತಟ್ಟುತ್ತಿಲ್ಲವೇ? ಹೌದು, ಇಂಥದ್ದೊಂದು ಪ್ರಶ್ನೆ ಹುಟ್ಟುಹಾಕಿರುವುದು ಸಂಸತ್‌ನಲ್ಲಿ ಸ್ವತಃ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರೇ ನೀಡಿರುವ ಉತ್ತರ.

Advertisement

ಮುಗಿಲೆತ್ತರಕ್ಕೆ ಸಾಗುತ್ತಲೇ ಇರುವ ಈರುಳ್ಳಿ ದರ ಮತ್ತು ಈಜಿಪ್ಟ್ ನಿಂದ ಈರುಳ್ಳಿ ತರಿಸಿಕೊಳ್ಳುತ್ತಿರುವ ಬಗ್ಗೆ ಪ್ರಸ್ತಾಪಿಸಿದ್ದ ಎನ್‌ಸಿಪಿಯ ಸುಪ್ರಿಯಾ ಸುಳೆ ಅವರು ಬುಧವಾರ ಲೋಕಸಭೆಯಲ್ಲಿ ಎತ್ತಿದ ಪ್ರಶ್ನೆಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್‌, ತಮ್ಮ ಮನೆಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಬಳಸುವುದೇ ಇಲ್ಲ ಎಂದು ಹೇಳಿದ್ದರು. ತಮ್ಮ ಮನೆಯ ಸಂಪ್ರದಾಯ ಇರುವುದೇ ಹಾಗೆ, ಇದರಲ್ಲೇ ಬೆಳೆದು ಬಂದಿರುವುದರಿಂದ ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನುವ ಬಗ್ಗೆ ಅಷ್ಟಾಗಿ ಗೊತ್ತಿಲ್ಲ ಎಂದರು.

ಇದರ ಜತೆಗೆ, ಈರುಳ್ಳಿ ದರ ನಿಯಂತ್ರಣಕ್ಕಾಗಿ ಈಗಾಗಲೇ ಎಲ್ಲಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಅಕ್ರಮವಾಗಿ ಸಂಗ್ರಹಿಸಿಟ್ಟುಕೊಳ್ಳುವವರನ್ನು ಹಿಡಿಯಲಾಗುತ್ತಿದೆ. ಜತೆಗೆ ಈರುಳ್ಳಿಯನ್ನು ರಫ್ತು ಮಾಡುವುದನ್ನೂ ನಿಷೇಧಿಸಲಾಗಿದೆ. ದೇಶದ ಬೇಡಿಕೆಗೆ ತಕ್ಕಂತೆ ಆಮದು ಮಾಡಿಕೊಳ್ಳಲು ಮುಂದಾಗಿದೆ ಎಂದಿದ್ದರು.

ಚಿದು ಆಕ್ಷೇಪ: ವಿತ್ತ ಸಚಿವರ ಈ ಉತ್ತರದ ಬಗ್ಗೆ ಮಾಜಿ ಸಚಿವ ಪಿ.ಚಿದಂಬರಂ ಕಿಡಿಕಾರಿದ್ದಾರೆ. ಬುಧವಾರವಷ್ಟೇ ಜೈಲಿನಿಂದ ಬಿಡುಗಡೆಯಾಗಿ, ಗುರುವಾರ ಸಂಸತ್‌ ಕಲಾಪಕ್ಕೆ ಆಗಮಿಸಿದ ಅವರು, ಸುದ್ದಿಗಾರರ ಜತೆ ಮಾತನಾಡಿ, ‘ಸಚಿವರು ಈರುಳ್ಳಿ ತಿನ್ನಲ್ಲವೆಂದಾದರೆ, ಇನ್ನೇನು ಬೆಣ್ಣೆಹಣ್ಣು ತಿನ್ನುತ್ತಾರೆಯೇ’?ಎಂದು ಪ್ರಶ್ನಿಸಿದರು. ಅಲ್ಲದೆ, ಇಂಥ ಸಂದರ್ಭದಲ್ಲಿ ನಿರ್ಮಲಾ ಅವರ ಈ ಉತ್ತರದ ಬಗ್ಗೆಯೂ ಆಕ್ಷೇಪಿಸಿದ್ದರು.

ಚಿದುಗೆ ‘ಐಸ್‌ಕ್ರೀಮ್‌’ ನೆನಪಿಸಿದ ನಿರ್ಮಲಾ: ಬೆಣ್ಣೆಹಣ್ಣು ಬಗ್ಗೆ ಪ್ರಸ್ತಾಪಿಸಿರುವ ಮಾಜಿ ಸಚಿವ ಚಿದಂಬರಂ ವಿರುದ್ಧ ನಿರ್ಮಲಾ ಸೀತಾರಾಮನ್‌ ಕಿಡಿಕಾರಿದ್ದಾರೆ. 2012ರಲ್ಲೂ ಈರುಳ್ಳಿ ಸೇರಿದಂತೆ ಅಗತ್ಯ ವಸ್ತುಗಳ ದರ ಮುಗಿಲುಮುಖೀಯಾಗಿತ್ತು. ಆಗ ನಿಮ್ಮ ಸರಕಾರದ ಭಾಗವಾಗಿ ನೀವೇ ನೀಡಿದ್ದ ಉತ್ತರ ನೆನಪಿದೆಯೇ ಎಂದು ರಾಜ್ಯಸಭೆಯಲ್ಲಿ ಪ್ರಶ್ನಿಸಿದ್ದಾರೆ.

Advertisement

ಆಗ ಚಿದಂಬರಂ ಅವರು, ‘ನಮ್ಮ ದೇಶದ ಮಧ್ಯಮ ವರ್ಗ 15 ರೂ. ಕೊಟ್ಟು ಬಾಟಲ್‌ ನೀರು ಖರೀದಿ ಮಾಡುತ್ತದೆ, 20 ರೂ. ಕೊಟ್ಟು ಐಸ್‌ ಕ್ರೀಮ್‌ ಖರೀದಿಸಿ ತಿನ್ನುತ್ತದೆ. ಆದರೂ, ಬೆಲೆ ಏರಿಕೆ ಬಗ್ಗೆ ಭಾರೀ ಸದ್ದು ಮಾಡುತ್ತದೆ” ಎಂದಿದ್ದರು. ಇಂಥ ಮಾತುಗಳನ್ನಾಡಿದ್ದವರೇ ಈಗ, ಬೇರೆ ಪಾಠ ಹೇಳಲಿಕ್ಕೆ ಬಂದಿದ್ದಾರೆ ಎಂದೂ ಆಕ್ರೋಶ ವ್ಯಕ್ತಪಡಿಸಿದರು.

ಚಿದು ಹೇಳಿದ್ದೇನು?: ಜೈಲಿನಿಂದ ಬಿಡುಗಡೆಯಾದ ಮೇಲೆ ಇದೇ ಮೊದಲ ಬಾರಿಗೆ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಹಣಕಾಸು ಸಚಿವ ಚಿದಂಬರಂ ಅವರು, ಮೊದಲಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನೇ ಟಾರ್ಗೆಟ್‌ ಮಾಡಿಕೊಂಡರು. ಈರುಳ್ಳಿ ದರ ಏರಿಕೆ ಬಗ್ಗೆ ಪ್ರಸ್ತಾಪಿಸಿದರೆ, ನಮ್ಮ ಮನೆಯಲ್ಲಿ ಈರುಳ್ಳಿ ತಿನ್ನುವುದೇ ಇಲ್ಲ ಎಂದು ಹೇಳುತ್ತಾರೆ. ಈ ಸರಕಾರದ ಮನಸ್ಥಿತಿಯೇ ಈ ರೀತಿ ಇದೆ ಎಂದು ಕಿಡಿಕಾರಿದರು.

ನಾನು ಸಸ್ಯಹಾರಿ, ಈರುಳ್ಳಿ ಬಗ್ಗೆ ಗೊತ್ತಿಲ್ಲ: ಈರುಳ್ಳಿ ದರದ ಬಗ್ಗೆ ಈ ರೀತಿ ಉತ್ತರ ನೀಡಿದ್ದು ಕೇಂದ್ರ ಸಚಿವ ಅಶ್ವಿ‌ನಿ ಚೌಬೆ. ನಿರ್ಮಲಾ ಸೀತಾರಾಮನ್‌ ಅವರು ಹೇಳಿದ್ದರಲ್ಲಿ ಏನೂ ತಪ್ಪೇ ಇಲ್ಲ. ನಾನೂ ಕೂಡ ಸಸ್ಯಹಾರಿಯಾಗಿರುವುದರಿಂದ ಈರುಳ್ಳಿ ತಿನ್ನುವುದಿಲ್ಲ. ಅದರ ರುಚಿ ಕೂಡ ನೋಡಿಲ್ಲ ಎಂದು ಅಶ್ವಿ‌ನಿ ಚೌಬೆ ಹೇಳಿದ್ದಾರೆ.

ಏರುತ್ತಲೇ ಇದೆ ದರ: ಅಂದ ಹಾಗೆ, ಈರುಳ್ಳಿ ಬಗ್ಗೆ ಇಷ್ಟೆಲ್ಲಾ ಚರ್ಚೆಗಳಾಗುತ್ತಿರುವ ಮಧ್ಯೆ, ದೇಶದ ವಿವಿಧ ಕಡೆಗಳಲ್ಲಿ ಈರುಳ್ಳಿ ದರ ಪ್ರತಿ ಕೆಜಿಗೆ 120 ರಿಂದ 160ರ ವರೆಗೆ ತಲುಪಿದೆ. ಒಡಿಶಾ, ಆಂಧ್ರಪ್ರದೇಶದಲ್ಲಿ 120 ರೂ.ಗಳಾಗಿದ್ದರೆ, ಪಶ್ಚಿಮ ಬಂಗಾಳದಲ್ಲಿ 160 ರೂ. ಮುಟ್ಟಿದೆ. ಇನ್ನೂ ಕೆಲವೆಡೆಗಳಲ್ಲಿ ಪ್ರತಿ ಕೆಜಿ ಈರುಳ್ಳಿಯನ್ನು 150 ರೂ. ಗೆ ಮಾರಾಟ ಮಾಡಲಾಗುತ್ತಿದೆ.

ಸುಪ್ರಿಯಾ ಸುಳೆ ಕೇಳಿದ್ದೇನು?
ಈರುಳ್ಳಿ ದರ ಏರಿಕೆಯ ಬಗ್ಗೆ ಬುಧವಾರ ಸಂಸತ್‌ನಲ್ಲಿ ಸುದೀರ್ಘ‌ ಚರ್ಚೆಯಾಗಿತ್ತು. ಈ ಸಂದರ್ಭ ಉತ್ತರ ನೀಡಿದ್ದ ನಿರ್ಮಲಾ ಸೀತಾರಾಮನ್‌ ಅವರು, ದರ ಏರಿಕೆ ನಿಯಂತ್ರಣಕ್ಕೆ ತರುವ ಸಲುವಾಗಿ ಈಜಿಪ್ಟ್ ಸೇರಿದಂತೆ ಇತರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದಿದ್ದರು.

ಆಗ, ಮಧ್ಯ ಪ್ರವೇಶಿಸಿದ್ದ ಸುಪ್ರಿಯಾ ಸುಳೆ ಅವರು, ನೀವು ಈಜಿಪ್ಟ್ ಈರುಳ್ಳಿ ತಿನ್ನುತ್ತೀರಾ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ನಿರ್ಮಲಾ ಸೀತಾರಾಮನ್‌, ನಮ್ಮ ಮನೆಯಲ್ಲಿ ಈರುಳ್ಳಿ ಬಳಕೆ ಮಾಡುವುದೇ ಇಲ್ಲ ಎಂದು ಹೇಳಿದ್ದರು. ಆದರೆ, ತಮ್ಮ ಮನೆಯಲ್ಲಿ ಈರುಳ್ಳಿ ತಿನ್ನುವುದಿಲ್ಲ ಎಂಬ ಅಂಶ ಮಾತ್ರ ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್‌ ಅವರ ಕಚೇರಿಯೇ ಇಡೀ ಚರ್ಚೆಯ ವಿಡಿಯೋವನ್ನು ಹಾಕಿ ಸ್ಪಷ್ಟನೆ ನೀಡಿದೆ.

ಪ್ರತಿ ಕೆಜಿ ಈರುಳ್ಳಿಗೆ 25 ರೂ. ನೀಡುವೆ: ವೀರೇಂದ್ರ ಸಿಂಗ್‌
ಲೋಕಸಭೆಯಲ್ಲಿ ಈರುಳ್ಳಿ ಬೆಲೆ ಏರಿಕೆ ಕುರಿತು ಚರ್ಚೆಗಳು ನಡೆಯುತ್ತಿದ್ದ ವೇಳೆ ಉತ್ತರ ಪ್ರದೇಶದ ಬಾಲಿಯಾ ಕ್ಷೇತ್ರದ ಸಂಸದ ವೀರೇಂದ್ರ ಸಿಂಗ್‌ ಮಸ್ತ್ ಪ್ರತಿಪಕ್ಷ ನಾಯಕರಿಗೆ ಒಂದು ಟ್ರಕ್‌ ಫ‌ುಲ್‌ ಲೋಡ್‌ ಈರುಳ್ಳಿ ಯನ್ನು 25 ರೂ.ಗೆ ನೀಡುವುದಾಗಿ ಹೇಳಿದ್ದಾರೆ. ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಮಾತ್ರ ಬೆಳೆಯುವುದಿಲ್ಲ, ಉತ್ತರ ಪ್ರದೇಶದಲ್ಲೂ ಬೆಳೆಯಲಾಗುತ್ತದೆ. ನನ್ನ ಕ್ಷೇತ್ರದ ಉತ್ಕೃಷ್ಟ ಗುಣಮಟ್ಟದ ಈರುಳ್ಳಿ ಮಾರಾಟ ಮಾಡಲಾಗುತ್ತದೆ. ಪ್ರತಿ ಪಕ್ಷ ನಾಯಕರಿಗೆ ಲಾರಿಗಟ್ಟಲೆ ಈರುಳ್ಳಿಯನ್ನು ಕೇಜಿಗೆ 25 ರೂ.ನಂತೆ ನೀಡುತ್ತೇನೆ ಎಂದಿದ್ದಾರೆ.

ನ್ಯಾಯಾಲಯದಲ್ಲಿರುವ ಚಿದಂಬರಂ ವಿರುದ್ಧದ ಪ್ರಕರಣದ ಬಗ್ಗೆ ಹೊರಗೆ ಎಲ್ಲೂ ಮಾತಾಡಬಾರದು ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದರೂ, ಚಿದಂಬರಂ ಅವರು ಬುಧವಾರ ಆ ಬಗ್ಗೆ ಮಾತನಾಡಿದ್ದು, ಇದು ನ್ಯಾಯಾಂಗ ನಿಂದನೆಯಾಗಿದೆ.
– ಪ್ರಕಾಶ್‌ ಜಾವಡೇಕರ್‌, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next