Advertisement
ಶ್ರವಣಬೆಳಗೊಳಕ್ಕೆ ಭಾನುವಾರ ಭೇಟಿ ನೀಡಿದ್ದ ಅವರು, ಪಂಚಕಲ್ಯಾಣ ನಗರಕ್ಕೆ ಆಗಮಿಸಿದ ತ್ಯಾಗಿಗಳಿಗೆ ಸ್ವಾಗತ ಕೋರಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದಿನ ಮಹಾಮಸ್ತಕಾಭಿಷೇಕಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡಿತ್ತು. ಆದರೆ, ಈ ಬಾರಿ ಹಲವು ಬಾರಿ ಮನವಿ ಮಾಡಿದರೂ ಅನುದಾನ ನೀಡಿಲ್ಲ. ಶ್ರವಣಬೆಳಗೊಳ ಹೋಬಳಿ ರಸ್ತೆ ಅಭಿವೃದ್ಧಿಗಾಗಿ ಕೇಂದ್ರ ರಸ್ತೆ ನಿಧಿಯಿಂದ ಸರ್ಕಾರ 30 ಕೋಟಿ ರೂ. ಹಣ ಬಿಡುಗಡೆ ಮಾಡಿರುವುದನ್ನು ಬಿಟ್ಟರೆ ಮಹೋತ್ಸವಕ್ಕೆ ಹಣ ನೀಡಿಲ್ಲ. ರಾಷ್ಟ್ರೀಯ ಮಹೋತ್ಸವಕ್ಕೆ ಕೇಂದ್ರ ಅನುದಾನ ನೀಡುವ ಮೂಲಕ ಪ್ರೋತ್ಸಾಹ ನೀಡಬೇಕಿತ್ತು. 12 ವರ್ಷಕ್ಕೆ ಒಮ್ಮೆ ನಡೆಯುವ ಬಾಹುಬಲಿ ಮಹೋತ್ಸವಕ್ಕೆ ರಾಷ್ಟ್ರದ ವಿವಿಧೆಡೆಯಿಂದ ನೂರಾರು ಮುನಿಗಳು ಆಗಮಿಸಿದ್ದು, ಲಕ್ಷಾಂತರ ಭಕ್ತರು, ಪ್ರವಾಸಿಗರು ಆಗಮಿಸುತ್ತಾರೆ. ಇಂತಹ ಮಹತ್ವದ ಮಹೋತ್ಸವಕ್ಕೂ ಕೇಂದ್ರ ಸರ್ಕಾರ ನೆರವು ನೀಡಲಿಲ್ಲ ಎಂದು ವಿಷಾದಿಸಿದರು.
ಫೆ.7 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕ್ಷೇತ್ರಕ್ಕೆ ಆಗಮಿಸಿ ಮಹಾಮಸ್ತಕಾಭಿಷೇಕ ಉದ್ಘಾಟಿಸಲಿದ್ದಾರೆ. ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಂತ್ರಿಮಂಡಲದ ಹಲವು ಸಚಿವರು ಆಗಮಿಸಿ, ಮಹಾಮಜ್ಜನಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ. ಆದರೆ, ಅಂದಿನ ಕಾರ್ಯಕ್ರಮದಲ್ಲಿ ತಾವು ಭಾಗವಹಿಸಲಾಗುತ್ತಿಲ್ಲ. ಲೋಕಸಭಾ ಅಧಿವೇಶನದಲ್ಲಿ ಪಾಲ್ಗೊಳ್ಳುವ ಅನಿವಾರ್ಯತೆ ಇದೆ ಎಂದು ಸ್ಪಷ್ಟಪಡಿಸಿದರು.