Advertisement

ಡೋಲು ಬಡಿಯಲು ಪ್ರಾಯ ನೂರಾದರೇನು?

11:03 AM Mar 28, 2018 | Karthik A |

ಉಡುಪಿ: ಇವರ ವಯಸ್ಸು ನೂರು. ಆದರೆ ಇವರ ಹುರುಪಿಗೆ ಇಪ್ಪತ್ತೈದರ ತಾರುಣ್ಯ. ಗುರುವ ಕೊರಗರನ್ನು ಹೀಗೇ ಪರಿಚಯಿಸಿದರೆ ಚೆಂದ. ಶತಮಾನೋತ್ಸವ ಸಂಭ್ರಮದಲ್ಲಿರುವ ಗುರುವ ಅವರು ಈ ಇಳಿ ವಯಸ್ಸಿನಲ್ಲೂ ಡೋಲು ಬಾರಿಸಲು ಆರಂಭಿಸಿದರೆ ತರುಣರನ್ನೂ ನಾಚಿಸುವ ತರುಣ. ಕರಾವಳಿ ಕರ್ನಾಟಕದಲ್ಲಿ ಕೊರಗ ಪರಂಪರೆಯ ಡೋಲು ವಾದನಕ್ಕೆ ಕಡ್ಡಾಯಿ ವಾದನ ಎನ್ನುವುದುಂಟು. ಇದನ್ನು ನುಡಿಸುವುದರಲ್ಲಿ  ಇವರು ಪ್ರವೀಣರು. ಸುಮಾರು ಐದೂ ಮುಕ್ಕಾಲು ಅಡಿ ಎತ್ತರದ ಆಜಾನುಬಾಹು 15 ಕೆ.ಜಿ. ತೂಕದ ಡೋಲನ್ನು ಹೊತ್ತು ಒಂದೂವರೆ ಗಂಟೆ ಕಾಲ ಲೀಲಾಜಾಲವಾಗಿ ಬಾರಿಸುತ್ತಾರೆ. 

Advertisement

ಹಿರಿಯಡ್ಕ ಗುಡ್ಡೆ ಅಂಗಡಿಯ ತೋಮ ಮತ್ತು ತುಂಬೆ ದಂಪತಿಯ ಮಗ ಇವರು. 12ನೇ ವಯಸ್ಸಿನಿಂದಲೂ ಡೋಲು ಬಾರಿಸುವುದು, ಬುಟ್ಟಿ ಹೆಣೆಯುವ ಕಾಯಕದಲ್ಲಿ ತೊಡಗಿದ್ದರು. ಸಾಂಪ್ರದಾಯಿಕ ಡೋಲು ಬಾರಿಸುವಿಕೆಯಲ್ಲಿ ಅಪ್ರತಿಮ ಪ್ರತಿಭೆ ಹೊಂದಿದವರು. ಈ ಡೋಲು ಸಂಸ್ಕೃತಿಯ ಸಂರಕ್ಷಣೆಯ ಹಿನ್ನೆಲೆಯಲ್ಲಿ ಇವರ ಸಾಧನೆಯನ್ನು ಪರಿಗಣಿಸಿ ಸಂಘಟನೆಗಳು ಗೌರವಿಸಿ ಪುರಸ್ಕಾರ ನೀಡಿವೆ. ಕರ್ನಾಟಕ ಜಾನಪದ ಅಕಾಡೆಮಿ 2017ನೇ ಸಾಲಿನಲ್ಲಿ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.

ಶತಮಾನೋತ್ಸವ ಸಂಭ್ರಮ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ ಸಂಸ್ಥೆಗಳು ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌, ಎಂಜಿಎಂ ಕಾಲೇಜು ಸಹಯೋಗದಲ್ಲಿ ಮಾ. 28ರಂದು ಗುರುವ ಅವರ ಜನ್ಮಶತಮಾನೋತ್ಸವ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.

ಸಚಿವ ಪ್ರಮೋದ್‌ ಮಧ್ವರಾಜ್‌ ಬೆಳಗ್ಗೆ 10.30ಕ್ಕೆ ಸಮಾವೇಶವನ್ನು ಉದ್ಘಾಟಿಸುವರು. ಜಾನಪದ ಅಕಾಡೆಮಿ ಅಧ್ಯಕ್ಷ ಬಿ. ಟಾಕಪ್ಪ ಕಣ್ಣೂರು ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಮಣಿಪಾಲ ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌, ಹಿರಿಯ ವಿದ್ವಾಂಸ ಡಾ| ಯು.ಪಿ ಉಪಾಧ್ಯಾಯ  ಉಪಸ್ಥಿತರಿರುವರು. ಬಳಿಕ ‘ಗುರುವ ಕೊರಗ  ಹಾಗೂ ಬುಡಕಟ್ಟು ಸಂಸ್ಕೃತಿ: ಬಹುಮುಖೀ ಜ್ಞಾನದ ಆಯಾಮಗಳು’ ವಿಷಯ ಕುರಿತು ವಿಚಾರ ಸಂಕಿರಣ, ಕೊರಗರ ಕೊಪ್ಪದೊಳಗಿನ ಕುಲ ಕಸುಬು ಮತ್ತು ಸಂಪ್ರದಾಯ ಪ್ರಾತ್ಯಕ್ಷಿಕೆ ಮತ್ತು ದಾಖಲೀಕರಣ, ಡಾ| ಯು. ಪಿ. ಉಪಾಧ್ಯಾಯರ ಮಾರ್ಗದರ್ಶನದಲ್ಲಿ ಕೊರಗ ಸಮುದಾಯ ಸ್ಥಿತಿ ಗತಿ ಚಿತ್ರಣದ ಕುರಿತು ಸಂವಾದ ನಡೆಯಲಿದೆ. ಬಳಿಕ ಸಮಾರೋಪ ಜರಗಲಿದೆ. 

ಭಾಗವಹಿಸುವ ತಂಡಗಳು
ಕಪ್ಪೆಟ್ಟು ರವಿಚಂದ್ರ ಅಂಬಲಪಾಡಿ, ಬಾಬು ಪಾಂಗಾಳ ಶಿರ್ವ, ಗುರುವ ಕೊರಗ ತಂಡ ಹಿರಿಯಡ್ಕ, ಗಣೇಶ ವಿ. ಕೊರಗ ತಂಡ ಕುಂದಾಪುರ ಈ ಡೋಲು/ ಕಡ್ಡಾಯಿ ತಂಡಗಳು, ಟೀಕಪ್ಪ ಮತ್ತು ತಂಡ – ಡೊಳ್ಳು ಕುಣಿತ- ಸಾಗರ, ಪಲ್ಲವಿ ಮತ್ತು ತಂಡ – ಮಹಿಳಾ ವೀರಗಾಸೆ ಚಿಕ್ಕಮಗಳೂರು, ಲಿಲ್ಲಿ ಮತ್ತು ತಂಡ – ಸಿದ್ಧಿ ಡಮಾಮಿ ನೃತ್ಯ ಕಾರವಾರ, ಸಂಕಯ್ಯ ಮತ್ತು ತಂಡ – ಗೊಂಡರ ಢಕ್ಕೆ ಕುಣಿತ ಶಿವಮೊಗ್ಗ ಜಿಲ್ಲೆ, ಜೀವನ್‌ ಪ್ರಕಾಶ್‌ ಮಾರ್ಗದರ್ಶನ-ಕಂಗಿಲು ಕುಣಿತ- ತುಳುಕೂಟ ಉಡುಪಿ.

Advertisement

ಕಾಯಕ ಯೋಗಿ
ಗುರುವರ ಶಕ್ತಿ ಕುಂಠಿತವಾಗಿಲ್ಲ. ಕಂಠ ತ್ರಾಣ – ಸೊಂಟ ತ್ರಾಣ ಬಲವಾಗಿದೆ. ಇವರು ಬಾರಿಸುವ ಕಡ್ಡಾಯಿ ಸಂಸ್ಕೃತಿಯ ಬಗ್ಗೆ ಮೊದಲು ರಾಷ್ಟ್ರೀಯ ಗಮನ ಸೆಳೆದದ್ದು 1988ರಲ್ಲಿ. ಅದು ಮಂಗಳೂರು ಆಕಾಶವಾಣಿಯ ಮೂಲಕ. ಜೀವನ ಶೈಲಿ ಎಂದರೆ ಪ್ರಾಮಾಣಿಕವಾಗಿರಬೇಕು, ಇತರರಿಗೆ ಕೇಡು  ಬಯಸಬಾರದು ಎಂಬುದು. ದೇವಾಲಯಕ್ಕೆ ಹೋಗಿಲ್ಲವಾದರೂ ಬೇಕೆಂದಾಗ ದೇವರನ್ನು ಕಾಣುವೆ ಎನ್ನುವ ತತ್ವನಿಷ್ಠೆ . ದುಡಿಮೆಯೇ ದೇವರು ಎನ್ನುವ  ತತ್ವ ಶಿಸ್ತನ್ನು ಅಂತರ್ಗತ ಮಾಡಿಕೊಂಡಿರುವ ಗುರುವ ಕೊರಗ ಆದಿ ಸಂಸ್ಕೃತಿಯ ಬುಡಕಟ್ಟು ಜೀವನದ ಕಾಯಕ ಯೋಗಿ.

Advertisement

Udayavani is now on Telegram. Click here to join our channel and stay updated with the latest news.

Next