ಜಲನಿಧಿ ಫಿಲಂಸ್‌ನ ಅನಿಲ್ ಕುಮಾರ್, ಲೋಕೇಶ್ ಕೋಟ್ಯಾನ್ ಹಾಗೂ ರಾಜೇಶ್ ಕುಡ್ಲ ನಿರ್ಮಾಣದ ಸೂರಜ್ ಬೋಳಾರ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನದ “ರಾಹುಕಾಲ ಗುಳಿಗಕಾಲ’ ಸಿನೆಮಾ ಸೆನ್ಸಾರ್ ಪಾಸಾಗಿದೆ. ಸೆನ್ಸಾರ್ ಮಂಡಳಿಯು ಸಿನೆಮಾ ನೋಡಿ ಎಲ್ಲಿಯೂ ಕತ್ತರಿ ಪ್ರಯೋಗಿಸದೆ, ಸಂಭಾಷಣೆಯನ್ನೂ ಎಲ್ಲಿಯೂ ಮ್ಯೂಟ್ ಮಾಡದೆ ಯು/ಎ ಪ್ರಮಾಣಪತ್ರ ನೀಡಿದೆ ಎಂದು ರಾಜೇಶ್ ಕುಡ್ಲ ತಿಳಿಸಿದ್ದಾರೆ.
ಮಣಿಕಾಂತ್ ಕದ್ರಿ ಸಂಗೀತದ ಜವಾಬ್ದಾರಿ ನಿರ್ವಹಿಸಿದ್ದಾರೆ. ಅರ್ಜುನ್ ಕಾಪಿಕಾಡ್, ನವ್ಯತಾ ರೈ, ಅರವಿಂದ ಬೋಳಾರ್, ವಿಸ್ಮಯ ವಿನಾಯಕ್, ಚಂದ್ರಹಾಸ್ ಉಳ್ಳಾಲ್, ಸಂತೋಷ್ ಶೆಟ್ಟಿ, ಉಮೇಶ್ ಮಿಜಾರ್, ವಿಸ್ಮಯ ವಿನಾಯಕ್, ಮೈಮ್ ರಾಮ್‌ದಾಸ್ ಮುಂತಾದವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಮಾಸ್ ಮಾದ ಸಾಹಸದಲ್ಲಿ ಕೈ ಜೋಡಿಸಿದ್ದಾರೆ. ಸಿದ್ದು ಜಿ.ಎಸ್.ಛಾಯಾಗ್ರಹಣ ಹಾಗೂ ಸುರೇಶ್ ಸಂಕಲನದಲ್ಲಿ ತೊಡಗಿಸಿದ್ದಾರೆ. “ಪತ್ತೀಸ್ ಗ್ಯಾಂಗ್’ ಸಿನೆಮಾ ಮಾಡಿದ ತಂಡ ರಾಹುಕಾಲದಲ್ಲಿ ತೊಡಗಿಸಿಕೊಂಡಿದೆ. ಪತ್ತೀಸ್ ಗ್ಯಾಂಗ್ ಶೂಟಿಂಗ್ ಆದ ಕಾಲದಲ್ಲಿಯೇ ರಾಹುಕಾಲದ ಶೂಟಿಂಗ್ ಕೂಡ ಮಾಡಲಾಗಿದೆ. ಹಲವು ವಿಶೇಷತೆಗಳನ್ನು ಒಳಗೊಂಡಿರುವ ಈ ಸಿನೆಮಾದಲ್ಲಿ, ಶೂಟಿಂಗ್ ವೇಳೆಯಲ್ಲಿ ಒರಿಜಿನಲ್ ಗನ್ ಹಿಡಿದುಕೊಳ್ಳಲಾಗಿದೆ. ಕೋಸ್ಟಲ್‌ವುಡ್‌ನಲ್ಲಿ ಇದೊಂದು ಮೊದಲ ಪ್ರಯತ್ನ. ಸಿನೆಮಾದಲ್ಲಿ ಒಂದು ಹಾಡಿದೆ. ಒಬ್ಬ ವ್ಯಕ್ತಿಗೆ ಒಂದು ಟೈಮ್ ಎದುರಾದರೆ ಆತನ ಕಥೆಯೇ ಬೇರೆ ಆಗುತ್ತದೆ. ಕೆಲವೊಂದು ಸಮಯ ಕೆಲವರ ಜೀವನವೇ ಏನೇನೋ ಆಗಿಬಿಡುತ್ತದೆ. ಅಂತಹ ಕಾಲದಲ್ಲಿ ಸಮಯವಲ್ಲದ ಜಾಗದಲ್ಲಿ ಯಾರ್ಯಾರೋ ಬಂದು ಮತ್ತೇನೋ ಆಗಿ ಬಿಡುವ ಸಾಧ್ಯತೆ ಇದೆ. ಯಾರು ಹೇಗೆ? ಏನು? ಎಂದು ಯೋಚಿಸುವ ಕಾಲಕ್ಕೆ ಇನ್ನೇನೋ ಆಗುವ ಸಾಧ್ಯತೆಯೂ ಇದೆ. ಬಹುತೇಕ ಜನರ ಜೀವನದಲ್ಲಿ ಇವೆಲ್ಲ ನಡೆದಿರುವ ಲಕ್ಷಣ ಇದೆ. ಹೀಗೆ ಕಾಲವಲ್ಲದ ಕಾಲದಲ್ಲಿ ಎದುರಾಗುವ ಒಂದೊಂದು ಸನ್ನಿವೇಶವನ್ನು ರಾಹುಕಾಲ-ಗುಳಿಗ ಕಾಲದಲ್ಲಿ ಬಿಂಬಿಸುವ ವಿನೂತನ ಪ್ರಯತ್ನ ನಡೆದಿದೆ ಎನ್ನುವುದು ಚಿತ್ರತಂಡದ ಅಭಿಪ್ರಾಯ.