Advertisement

CEN Police Station: ದಕ್ಷಿಣ ಕನ್ನಡ ಜಿಲ್ಲಾ ಸೆನ್‌ ಪೊಲೀಸ್‌ ಠಾಣೆ ಬಂಟ್ವಾಳಕ್ಕೆ

04:12 AM Dec 24, 2024 | Team Udayavani |

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರವಾದ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದ್ದ ಜಿಲ್ಲಾ ಪೊಲೀಸ್‌ ವ್ಯಾಪ್ತಿಯ ಸೆನ್‌ (ಸೈಬರ್‌, ಎಕನಾಮಿಕ್‌ ಆ್ಯಂಡ್‌ ನಾರ್ಕೋಟಿಕ್ಸ್‌) ಪೊಲೀಸ್‌ ಠಾಣೆಯು ಶೀಘ್ರವೇ ಬಂಟ್ವಾಳಕ್ಕೆ ಸ್ಥಳಾಂತರಗೊಳ್ಳಲಿದೆ. ಇದರಿಂದ ಜಿಲ್ಲೆಯ ಗ್ರಾಮಾಂತರ ಭಾಗದ ಜನತೆಗೆ ಇಂತಹ ಪ್ರಕರಣಗಳ ಬಗ್ಗೆ ದೂರು ನೀಡಲು ಅನುಕೂಲವಾಗಲಿದೆ. ಠಾಣೆಗಾಗಿ ಬ್ರಿಟಿಷರ ಕಾಲದಲ್ಲಿ ಜೈಲಾಗಿದ್ದ ಬಂಟ್ವಾಳ ನಗರ ಪೊಲೀಸ್‌ ಠಾಣೆಯ ಹಳೆಯ ಕಟ್ಟಡವನ್ನು ಮಂಗಳೂರು ನಿರ್ಮಿತಿ ಕೇಂದ್ರದ ಮೂಲಕ ನವೀಕರಿಸುವ ಕಾರ್ಯ ಭರದಿಂದ ಸಾಗುತ್ತಿದೆ.

Advertisement

ಸದ್ಯ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ ಬರುವ ಯಾವುದೇ ಪ್ರದೇಶದಲ್ಲಿ ಸೈಬರ್‌ ಕ್ರೈಮ್‌ ಪ್ರಕರಣಗಳು ನಡೆದರೂ ಸಂತ್ರಸ್ತರು ದೂರು ನೀಡುವುದಕ್ಕೆ ಮಂಗಳೂರಿಗೆ ತೆರಳಬೇಕು. ಇದರಿಂದ ಸುಳ್ಯ, ಪುತ್ತೂರು, ಬೆಳ್ತಂಗಡಿ, ಕಡಬ, ಬಂಟ್ವಾಳ ತಾಲೂಕಿನಂತಹ ದೂರ ಪ್ರದೇಶದ ನಾಗರಿಕರಿಗೆ ಅನನುಕೂಲ ಆಗುತ್ತಿತ್ತು.

ಪ್ರಸ್ತುತ ಸೈಬರ್‌ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜಿಲ್ಲೆಯ ಗ್ರಾಮೀಣ ತಾಲೂಕುಗಳ ಜನರು ದೂರು ನೀಡಲು ಮಂಗಳೂರಿಗೆ ತೆರಳಬೇಕು ಎನ್ನುವ ಕಾರಣದಿಂದ ಸಣ್ಣ ಪ್ರಕರಣಗಳಾದರೆ ದೂರು ನೀಡುವುದಕ್ಕೇ ಹೋಗುತ್ತಿರಲಿಲ್ಲ. ಆದರೆ ಇನ್ನು ಠಾಣೆಯು ಹತ್ತಿರದಲ್ಲಿದೆ ಎಂದು ಹೆಚ್ಚಿನ ಮಂದಿ ಇಂತಹ ಪ್ರಕರಣಗಳಿಗೆ ಸಂಬಂಧಿಸಿ ದೂರು ನೀಡುವ ಸಾಧ್ಯತೆ ಹೆಚ್ಚಿದೆ.

ಹಳೆಯ ಕಟ್ಟಡ ಉಳಿಸಿ ನವೀಕರಣ
ಪ್ರಸ್ತುತ ಮಂಗಳೂರಿನಲ್ಲಿ ಬಾಡಿಗೆ ಕಟ್ಟಡದಲ್ಲಿ ಸೆನ್‌ ಠಾಣೆಯು ಕಾರ್ಯಾಚರಿಸುತ್ತಿದ್ದು, ಜನರ ಅನುಕೂಲದ ಜತೆಗೆ ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುವ ಹಿನ್ನೆಲೆಯಲ್ಲಿ ಬಿ.ಸಿ. ರೋಡಿನಲ್ಲಿರುವ ಕಟ್ಟಡಕ್ಕೆ ಸ್ಥಳಾಂತರಗೊಳಿಸಲು ಇಲಾಖೆ ಚಿಂತಿಸಿದೆ. ಬಂಟ್ವಾಳ ನಗರ ಪೋಲಿಸ್‌ ಠಾಣೆಯ ಬಳಿ ಇರುವ ಹಳೆಯ ಜೈಲು ಪುರಾತನ ಶೈಲಿಯ ನಿರ್ಮಾಣ ಹೊಂದಿದ್ದು, ಹಂಚಿನ ಮೇಲ್ಛಾವಣಿ ಹೊಂದಿದೆ. ಈ ಹೀಗಾಗಿ ಈ ಕಟ್ಟಡವನ್ನು ಉಳಿಸಿಕೊಂಡು ನವೀಕರಿಸಲು ಇಲಾಖೆಗೆ ತೀರ್ಮಾನಿಸಿದೆ.

ಪೊಲೀಸ್‌ ಇಲಾಖೆಯು ಸುಮಾರು 35 ಲಕ್ಷ ರೂ. ವೆಚ್ಚದಲ್ಲಿ ಹಳೆಯ ಕಟ್ಟಡದ ದುರಸ್ತಿಗೆ ತೀರ್ಮಾನಿಸಿದ್ದು ಪ್ರಸ್ತುತ ಅದರ ಕಾಮಗಾರಿಯು ಭರದಿಂದ ಸಾಗಿದೆ. ಹಳೆಯ ಶೈಲಿನ ಕಟ್ಟಡವನ್ನು ಹಾಗೇ ಉಳಿಸುವ ದೃಷ್ಟಿಯಿಂದ ಮೇಲ್ಛಾವಣಿ ಹಾಗೂ ಇತರ ಭಾಗಗಳ ನವೀಕರಣ ನಡೆಯಲಿದೆ. ಜತೆಗೆ ಮುಂಭಾಗದಲ್ಲಿ 8 ಪಿಲ್ಲರ್‌ಗಳ ವರಾಂಡ ನಿರ್ಮಾಣವಾಗಲಿದೆ. ಸುಮಾರು ಎರಡು ವರ್ಷಗಳ ಹಿಂದೆ ಸೆನ್‌ ಠಾಣೆಯ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಈ ವರ್ಷ ಅದಕ್ಕೆ ಅನುದಾನ ಬಿಡುಗಡೆಗೊಂಡಿದೆ.

Advertisement

ನವೀಕರಣ ಕಾರ್ಯದಲ್ಲಿ ಪ್ರತ್ಯೇಕ ಎರಡು ಜೈಲುಗಳು, ಡಿವೈಎಸ್‌ಪಿ, ಇನ್‌ಸ್ಪೆಕ್ಟರ್‌, ಪಿಎಸ್‌ಐ ಹಾಗೂ ಸಿಬಂದಿಗೆ ಪ್ರತ್ಯೇಕ ಕೊಠಡಿಗಳು, ಅಹವಾಲು ಸ್ವೀಕಾರದ ಕೊಠಡಿ, ಶೌಚಾಲಯಗಳು ನಿರ್ಮಾಣಗೊಳ್ಳಲಿದೆ ಎಂದು ಇಲಾಖೆ ಮೂಲಗಳು ತಿಳಿಸಿದೆ.

ಠಾಣೆಯಲ್ಲಿ 25 ಸಿಬಂದಿ
ದ.ಕ. ಜಿಲ್ಲಾ ಸೆನ್‌ ಪೊಲೀಸ್‌ ಠಾಣೆಯಲ್ಲಿ ಒಬ್ಬರು ಡಿವೈಎಸ್‌ಪಿ, ಒಬ್ಬರು ಇನ್‌ಸ್ಪೆಕ್ಟರ್‌, ಪಿಎಸ್‌ಐ ಸೇರಿ 25 ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಠಾಣೆಗೆ ಖಾಯಂ ಇನ್‌ಸ್ಪೆಕ್ಟರ್‌ ಇಲ್ಲದೆ ಬಂಟ್ವಾಳ ನಗರ ಇನ್ಸ್‌ಪೆಕ್ಟರ್‌ ಅನಂತಪದ್ಮನಾಭ ಅವರಿಗೆ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ. ಠಾಣೆಯು ಬಂಟ್ವಾಳಕ್ಕೆ ವರ್ಗಾವಣೆಗೊಂಡರೆ ಹೆಚ್ಚುವರಿ ಜವಾಬ್ದಾರಿಯ ಇನ್‌ಸ್ಪೆಕ್ಟರ್‌ಗೂ ಅನುಕೂಲವಾಗಿದೆ.

ದ.ಕ. ಎಸ್‌ಪಿ ಪರಿಶೀಲನೆ
ಬಂಟ್ವಾಳದಲ್ಲಿ ನವೀಕರಣಗೊಳ್ಳುತ್ತಿರುವ ಕಟ್ಟಡವನ್ನು ಈಗಾಗಲೇ ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌. ಅವರು ಪರಿಶೀಲಿಸಿ ನಿರ್ಮಾಣಕ್ಕೆ ಸಂಬಂಧಿಸಿ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದ್ದಾರೆ.

‘ಸೆನ್‌ ಪೊಲೀಸ್‌ ಠಾಣೆಗಾಗಿ ಹಳೆಯ ಕಟ್ಟಡದ ನವೀಕರಣ ಕಾರ್ಯ ನಿರ್ಮಿತಿ ಕೇಂದ್ರದ ಮೂಲಕ ನಡೆಯುತ್ತಿದ್ದು, ಪೂರ್ಣಗೊಳ್ಳುವುದಕ್ಕೆ ಏಳೆಂಟು ತಿಂಗಳು ಬೇಕಾಗಬಹುದು. ಹೆಂಚಿನ ಮೇಲ್ಛಾವಣಿಯನ್ನು ತೆಗೆದು ಮತ್ತೆ ಜೋಡಿಸಬೇಕಿದ್ದು, ಇತರ ದುರಸ್ತಿ ಕಾರ್ಯವೂ ನಡೆಯಬೇಕಿದೆ.’
-ನವೀನ್‌ಚಂದ್ರ, ಎಂಜಿನಿಯರ್‌, ನಿರ್ಮಿತಿ ಕೇಂದ್ರ ಮಂಗಳೂರು

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next