ಬೆಂಗಳೂರು: ರಾಜ್ಯದ ಎಲ್ಲಾ ಗ್ರಾಮಗಳಲ್ಲಿ ಶವ ಸಂಸ್ಕಾರಕ್ಕೆ ಶ್ಮಶಾನ ಜಾಗ ಒದಗಿಸಿರುವ ಬಗ್ಗೆ ಸಮಗ್ರ ವರದಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡುವಂತೆ ಸರ್ಕಾರ ಹೈಕೋರ್ಟ್‌ಗೆ ಮನವಿ ಮಾಡಿದೆ.
ರಾಜ್ಯದ ಎಲ್ಲಾ ಗ್ರಾಮಗಳು ಮತ್ತು ಪಟ್ಟಣ ಪ್ರದೇಶಗಳಿಗೆ ಶವಸಂಸ್ಕಾರಕ್ಕೆ ಶ್ಮಶಾನ ಜಾಗ ಒದಗಿಸುವಂತೆ 2019ರ ಆಗಸ್ಟ್ 20ರಂದು ಹೈಕೋರ್ಟ್ ನೀಡಿದ್ದ ಆದೇಶ ಸರ್ಕಾರ ಪಾಲಿಸಿಲ್ಲ ಎಂದು ದೂರಿ ಬೆಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ ಎಂಬುವರು ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯು ನ್ಯಾ. ಬಿ. ವೀರಪ್ಪ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.
ಈ ವೇಳೆ ಕಂದಾಯ ಇಲಾಖೆಯ ಕಾರ್ಯದರ್ಶಿ ಎನ್.ಜಯರಾಮ್ ಅವರ ಅನುಪಾಲನಾ ಪ್ರಮಾಣಪತ್ರವನ್ನು ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದರು.
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಒದಗಿಸಿರುವ ಮಾಹಿತಿಯಂತೆ ರಾಜ್ಯದ ಒಟ್ಟು 28,222 ಗ್ರಾಮಗಳ ಪೈಕಿ ಈವರೆಗೆ 27,903 ಗ್ರಾಮಗಳಿಗೆ ಶವ ಸಂಸ್ಕಾರಕ್ಕೆ ಸ್ಮಶಾನ ಜಾಗ ಒದಗಿಸಲಾಗಿದೆ. ಇನ್ನೂ 319 ಗ್ರಾಮಗಳಿಗೆ ಮಾತ್ರ ಶ್ಮಶಾನ ಜಾಗ ಒದಗಿಸಬೇಕಾಗಿದ್ದು, ಶ್ಮಶಾನ ಜಾಗ ಒದಗಿಸುವ ಕಾರ್ಯ ಶೇ.98.87ರಷ್ಟಾಗಿದೆ. 56 ಗ್ರಾಮಗಳಲ್ಲಿ ಶ್ಮಶಾನ ಜಾಗ ಒತ್ತುವರಿಯಾಗಿದ್ದು, ಅವುಗಳನ್ನು ತೆರವುಗೊಳಿಸುವಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.
ಈ ರೀತಿ ಉಳಿದ 319 ಗ್ರಾಮಗಳಿಗೆ ಶ್ಮಶಾನ ಜಾಗ ಒದಗಿಸುವ ಮತ್ತು 56 ಗ್ರಾಮಗಳಲ್ಲಿ ಶ್ಮಶಾನ ಒತ್ತುವರಿ ಆಗಿರುವುದನ್ನು ತೆರವುಗೊಳಿಸಿ ನ್ಯಾಯಾಲಯಕ್ಕೆ ಸಮಗ್ರ ವರದಿ ಸಲ್ಲಿಸಲು 30 ದಿನ ಕಾಲಾವಕಾಶ ಬೇಕು ಎಂದು ಪ್ರಮಾಣಪತ್ರದಲ್ಲಿ ಮನವಿ ಮಾಡಲಾಗಿದೆ. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಜ.31ಕ್ಕೆ ಮುಂದೂಡಿತು.