Advertisement
ಸಾವಿಗೆ ಹೆಸರು ಚಿರನಿದ್ರೆ. ಮನುಷ್ಯನ ಜೀವಿತ ಕೊನೆಯಾದ ಬಳಿಕ ದೇಹಕ್ಕೆ ನೆಮ್ಮದಿಯ ಸಂಸ್ಕಾರ ಬೇಕು ಎಂಬುದು ಎಲ್ಲರೂ ಬಯಸುವ ಮಾತು. ಆದರೆ ಬಹಳ ಕಡೆ ಇರುವ ಸ್ಮಶಾನಗಳ ಅವ್ಯವಸ್ಥೆಯನ್ನು ನೋಡಿದರೆ ಜೀವವಿಲ್ಲದ ಶವಕ್ಕೂ ಮುಜುಗರವಾದೀತು. ಈ ಮಾತಿಗೆ ಅಪವಾದವೆಂಬಂತೆ ಗ್ರಾಮೀಣ ಪ್ರದೇಶದ ಪಂಚಾಯತ್ ವ್ಯವಸ್ಥೆ ರೂಪಿಸಿದ ಒಂದು ರುದ್ರಭೂಮಿ ಇಡೀ ಕರ್ನಾಟಕಕ್ಕೇ ಮಾದರಿಯಾಗಿದೆ.
Related Articles
Advertisement
ಶವದಹನಕ್ಕೆ ಇರುವ ಜಾಗಕ್ಕೆ ತಗಡಿನ ಮಾಡು ಇದೆ. ಬಹು ಬೇಗನೆ ಪಾರ್ಥಿವ ದೇಹವನ್ನು ಭಸ್ಮಗೊಳಿಸಲು ತಕ್ಕುದಾದ ಸಿಲಿಕಾನ್ ಛೇಂಬರ್‌ಗಳಿವೆ. ಏಕಕಾಲದಲ್ಲಿ ಎರಡು ದೇಹಗಳಿಗೆ ಅಗ್ನಿಸ್ಪರ್ಶ ಮಾಡಬಹುದು. ಸನಿಹದಲ್ಲಿ ಕಟ್ಟಿಗೆ ದಾಸ್ತಾನು ಮಾಡುವ ಕೊಠಡಿ ಇದೆ. ಇಲ್ಲಿ ಶವ ದಹನ ಮಾಡಿದರೆ ಯಾವುದೇ ಶುಲ್ಕ ಕೊಡಬೇಕಾಗಿಲ್ಲ. ಆದರೆ, ಕಟ್ಟಿಗೆ ಬೇಕಿದ್ದರೆ ಮಾತ್ರ ತುಸು ಹಣ ತೆರಬೇಕಾಗುತ್ತದೆ. ಸಲೀಸಾಗಿ ಛೇಂಬರ್ ತಲುಪಲು ಮೆಟ್ಟಿಲುಗಳನ್ನು ನಿರ್ಮಿಸಿದ್ದಾರೆ.
ಇನ್ನು ರಾತ್ರಿ ಸಮಯದಲ್ಲೂ ಸಂಸ್ಕಾರಕ್ಕಾಗಿ ಬರಲು ಬೆಟ್ಟದ ತನಕ ಸುಸಜ್ಜಿತವಾದ ರಸ್ತೆ ನಿರ್ಮಿಸಿದ್ದಾರೆ. ಒಳಗೆ ಕೊಳವೆ ಬಾವಿಯ ವ್ಯವಸ್ಥೆ ಇದೆ. ಬೆಳಕಿಗಾಗಿ ಹೊಸದಾಗಿ 12 ಕಂಭ ಹಾಕಿಸಿ ವಿದ್ಯುತ್ ಲೈನು ಎಳೆದಿದ್ದಾರೆ.
50 ವಾಹನಗಳಿಗೆ ತಂಗಲು ಜಾಗವೂ ಇದೆ. ಶವ ತರಲು ಸ್ಥಳೀಯ ದೇರಾಜೆಯ ನೇತಾಜಿ ಯುವಕ ಮಂಡಲಿಯವರು ಆ್ಯಂಬುಲೆನ್ಸ್ ನೆರವು ಒದಗಿಸುತ್ತಾರೆ. ಸಜಿಪನಡು ಮಾತ್ರವೇ ಅಲ್ಲ, ಸಮೀಪದ ಮಂಚಿ, ಇರಾ ಮೊದಲಾದ ನಾಲ್ಕು ಗ್ರಾಮಗಳ ಜನರೂ ಇಲ್ಲಿಗೆ ಬರುತ್ತಾರೆ. 2016ರಿಂದ ನೂರಾರು ಪಾರ್ಥಿವ ದೇಹಗಳಿಗೆ ಇಲ್ಲಿ ನೆಮ್ಮದಿಯ ಚಿರನಿದ್ರೆ ಲಭಿಸಿದೆ.
ಶವ ಸಂಸ್ಕಾರಕ್ಕೊಂದು ರುದ್ರಭೂಮಿ ಇಲ್ಲದೆ ಪರಿತಪಿಸುತ್ತಿದ್ದ ಗ್ರಾಮಕ್ಕೆ ಈ ಸೌಲಭ್ಯ ಒದಗಿಸಲು ಶ್ರಮಿಸಿದ ಹತ್ತಾರು ಕೈಗಳಲ್ಲಿ ಎದ್ದು ಕಾಣುವುದು ಮಾಜಿ ತಾ. ಪಂ. ಅಧ್ಯಕ್ಷ ಯಶವಂತ ದೇರಾಜೆಯವರ ದುಡಿಮೆ. ತಾಲೂಕು ಪಂಚಾಯಿತಿಯ ಧನ ಸಹಾಯವೂ ಸಿಕ್ಕಿದೆ. ಸ್ಮಶಾನ ನಿರ್ಮಾಣದ ಸಮಿತಿಯ ನೇತೃತ್ವವೂ ಅವರದೇ. ವಿಧಾನ ಪರಿಷತ್ ಸದಸ್ಯರಾಗಿದ್ದ ಮೋನಪ್ಪ ಭಂಡಾರಿಯವರ ಅಭಿವೃದ್ಧಿ ನಿಧಿಯಿಂದ ಮೂರು ಲಕ್ಷ ಬಂದಿದೆ. ಸಜಿಪ ನಡು ಗ್ರಾಮ ಪಂಚಾಯಿತಿ 14ನೆಯ ಹಣಕಾಸು ಯೋಜನೆ ಮತ್ತು ಉದ್ಯೋಗ ಖಾತ್ರಿ ಯೋಜನೆಗಳ ಮೂಲಕ ಆರೇಳು ಲಕ್ಷ ಒದಗಿಸಿದೆ. ನೆಲಕ್ಕೆ ಇಂಟರ್‌ಲಾಕ್ ಹಾಕುವುದಕ್ಕೂ ನೆರವಾಗಿದೆ. ಜಿಲ್ಲಾ ಪಂಚಾಯಿತಿಯ ಆರ್ಥಿಕ ನೆರವು ಲಭಿಸಿದೆ. ಧರ್ಮಸ್ಥಳದ ಧರ್ಮಾಧಿಕಾರಿಗಳು ಸಿಲಿಕಾನ್ ಚೇಂಬರ್‌ಗಳನ್ನು ಒದಗಿಸಿದ್ದಾರೆ.
ಇದು ಬರೇ ಹೆಣ ಸುಡುವ ಮಸಣವಾಗಬಾರದು. ಪ್ರವಾಸಿಗಳ ಸಂದರ್ಶನದ ತಾಣವಾಗಬೇಕು ಎಂಬ ಇರಾದೆ ನಮ್ಮದು ಎನ್ನುತ್ತಾರೆ ಅದರ ಸಮಿತಿಯ ಅಧ್ಯಕ್ಷರಾದ ಯಶವಂತ ದೇರಾಜೆ. ಇಲ್ಲಿ ನಿಸರ್ಗದ ರಮ್ಯನೋಟ ಇರಬೇಕೆಂದು ತೆಂಗು, ಮಾವು, ಕ್ರೋಟನ್ ಗಿಡಗಳನ್ನು ಬೆಳೆಸುತ್ತಿದ್ದೇವೆ. ರಾತ್ರಿ ಕಾವಲಿಗೆ ಕಾವಲುಗಾರನಿದ್ದಾನೆ.
ಶಿವರಾತ್ರಿಯಲ್ಲಿ ಇಲ್ಲಿ ಜಾಗರಣೆ, ಭಜನೆ ನಡೆಸುತ್ತೇವೆ. ಒಂದೂವರೆ ಸಾವಿರ ಮಂದಿ ಅದಕ್ಕಾಗಿ ಬರುತ್ತಾರೆ. ಅವರಿಗೆಲ್ಲ ಸಂತರ್ಪಣೆ ಏರ್ಪಡಿಸುತ್ತೇವೆ ಎಂದು ಅವರು ವಿವರಗಳನ್ನು ಬಿಚ್ಚಿಡುತ್ತಾರೆ. ಪ. ರಾಮಕೃಷ್ಣ ಶಾಸ್ತ್ರಿ