ಹಾವೇರಿ: ಹಾವೇರಿ ಎಂದಾಕ್ಷಣ ಈ ಹಿಂದೆ ‘ಧೂಳೂರು’ ಎಂದು ಮೂಗು, ಮುಖ ಮುಚ್ಚಿಕೊಳ್ಳುವ ಪರಿಸ್ಥಿತಿ ಇತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ನಗರವನ್ನು ಧೂಳುಮುಕ್ತಗೊಳಿಸುವ ಕಾರ್ಯ ನಗರದ ಹಲವೆಡೆ ನಡೆಯುತ್ತಿದ್ದು, ಎಲ್ಲರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
ಜಿಲ್ಲಾ ಕೇಂದ್ರ ಎನಿಸಿದ ಹಾವೇರಿ ನಗರಕ್ಕೆ ಕಾಡುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಧೂಳಿನ ಸಮಸ್ಯೆಯೂ ಒಂದು. ನಗರದ ಯಾವ ರಸ್ತೆಯಲ್ಲಿ ಓಡಾಡಿದರೂ ಬರೀ ಧೂಳೇ ಧೂಳು ಎಂಬಂಥ ವಾತಾವರಣ ಇತ್ತು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ನಗರಸಭೆ ಹಾಗೂ ಜಿಲ್ಲಾಡಳಿತ ಎಸ್‌ಎಫ್‌ಸಿ ಹಾಗೂ ಮುಖ್ಯಮಂತ್ರಿಯವರ ವಿಶೇಷ ಅನುದಾನ ಹಾಗೂ ನಗರೋತ್ಥಾನದಲ್ಲಿ ಯೋಜನೆ ರೂಪಿಸಿವೆ. ತನ್ಮೂಲಕ ರಸ್ತೆ ಪಕ್ಕದ ಪಾದಚಾರಿ ಮಾರ್ಗಗಳನ್ನು ಸಂಪೂರ್ಣವಾಗಿ ಸಿಮೆಂಟ್ ಇಟ್ಟಿಗೆಗಳಿಂದ ಮುಚ್ಚಿ ಧೂಳುಮುಕ್ತ ನಗರವನ್ನಾಗಿಸಲು ಕಾರ್ಯಯೋಜನೆ ಹಾಕಿಕೊಂಡು ಅದನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಮೊದಲ ಬಾರಿ: ನಗರದ ರಸ್ತೆ ಪಕ್ಕದ ಪಾದಚಾರಿ ಮಾರ್ಗವನ್ನು ಸಿಮೆಂಟ್ ಇಟ್ಟಿಗೆಗಳಿಂದ ಮುಚ್ಚಿ ಧೂಳುಮುಕ್ತ ರಸ್ತೆಗಳನ್ನಾಗಿ ಮಾಡುವ ದಿಸೆಯಲ್ಲಿ ಮೊದಲು ನಗರಸಭೆ ಸದಸ್ಯ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರು ನಗರಸಭೆಯ ಎಸ್‌ಎಫ್‌ಸಿ ಅನುದಾನದಲ್ಲಿ ತಮ್ಮ 11ನೇ ವಾರ್ಡಿನ ಮೊದಲ ಮೂರ್‍ನಾಲ್ಕು ಕ್ರಾಸ್‌ಗಳಲ್ಲಿನ ಪಾದಚಾರಿ ಮಾರ್ಗಗಳಿಗೆ ಎರಡು ಹಂತಗಳಲ್ಲಿ ತಲಾ 6.50ಲಕ್ಷ ರೂ.ಗಳ ವೆಚ್ಚದಲ್ಲಿ ಸಿಮೆಂಟ್ ಇಟ್ಟಿಗೆಗಳನ್ನು ಅಳವಡಿಸುವ ಕಾರ್ಯ ಕೈಗೊಂಡರು. ಇದರಿಂದ ಪ್ರೇರಣೆಗೊಂಡ ಜಿಲ್ಲಾಡಳಿತ, ನಗರಾಭಿವೃದ್ಧಿಗೆ 2015ನೇ ಸಾಲಿನ ಬಜೆಟ್‌ನಲ್ಲಿ ನೀಡಿದ ಮುಖ್ಯಮಂತ್ರಿಯವರ 50 ಕೋಟಿ ರೂ.ಗಳ ವಿಶೇಷ ಅನುದಾನದಲ್ಲಿ, ನಗರೋತ್ಥಾನದಲ್ಲಿ ಸಿಮೆಂಟ್ ಇಟ್ಟಿಗೆಯ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಹಣ ಮೀಸಲಿಟ್ಟು ಮಾಡುತ್ತಿವೆ.
ವಿವಿಧೆಡೆ ಅಭಿವೃದ್ಧಿ: ಬಸವೇಶ್ವರ ನಗರದ ಎಲ್ಲ ಕ್ರಾಸ್‌ಗಳಲ್ಲಿ, ವಿದ್ಯಾನಗರ ಪೂರ್ವ ಬಡಾವಣೆ, ವಿನಾಯಕ ನಗರ, ಜಿ.ಎಚ್. ಕಾಲೇಜು ರಸ್ತೆ, ನಗರದ ಪೊಲೀಸ್ ಠಾಣೆಯಿಂದ ಅಶೋಕ ಹೋಟೆಲ್ ವರೆಗೆ ಹಾಗೂ ನಗರದ ಮೈಲಾರ ಮಹದೇವಪ್ಪ ವೃತ್ತದಿಂದ ಹಳೆ ಕೆಇಬಿ ಕಚೇರಿ ವರೆಗೆ ಹೀಗೆ ಹಲವೆಡೆ ರಸ್ತೆ ಪಕ್ಕದ ಪಾದಚಾರಿ ಮಾರ್ಗವನ್ನು ಸಿಮೆಂಟ್ ಇಟ್ಟಿಗೆಗಳಿಂದ ಅಭಿವೃದ್ಧಿಪಡಿಸಲಾಗುತ್ತಿದೆ.
ನಗರದಲ್ಲಿ ಕಾಂಕ್ರಿಟ್ ಹಾಗೂ ಡಾಂಬರ್ ರಸ್ತೆ ಎಷ್ಟೇ ಮಾಡಿದರೂ ರಸ್ತೆ ಪಕ್ಕದ ಪಾದಚಾರಿ ಮಾರ್ಗದಲ್ಲಿರುವ ಮಣ್ಣು ರಸ್ತೆ ಮೇಲೆ ಬರುವ ಜತೆಗೆ ಧೂಳು ಉಂಟಾಗಿ ಜನ ಸಂಚಾರ, ವಾಹನ ಸಂಚಾರಕ್ಕೆ ಭಾರಿ ತೊಂದರೆಯಾಗುತ್ತಿತ್ತು. ಪಾದಚಾರಿ ಮಾರ್ಗವನ್ನು ಸಿಮೆಂಟ್ ಇಟ್ಟಿಗೆ ಮೂಲಕ ಅಭಿವೃದ್ಧಿಪಡಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಹಾವೇರಿ ನಗರ ಸಂಪೂರ್ಣ ಧೂಳುಮುಕ್ತವಾಗುವ ನಿರೀಕ್ಷೆ ಹೊಂದಲಾಗಿದೆ.
ಧೂಳುಮುಕ್ತ ನಗರ….
ನಗರದ ಜನರಿಗೆ ರಸ್ತೆ ಧೂಳಿನಿಂದ ಆಗುತ್ತಿರುವ ತೊಂದರೆ ಹೋಗಲಾಡಿಸಲು ಮೊದಲು ನನ್ನ ವಾರ್ಡ್‌ನಲ್ಲಿ ನಗರಸಭೆಯ ಎಸ್‌ಎಫ್‌ಸಿ ಅನುದಾನದಲ್ಲಿ (13ಲಕ್ಷ ರೂ.ಗಳಲ್ಲಿ) ಒಂದೆರಡು ರಸ್ತೆಗಳ ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಿದೆ. ಈ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿ ನಗರದ ವಿವಿಧೆಡೆ ಪಾದಚಾರಿ ಮಾರ್ಗ ಅಭಿವೃದ್ಧಿ ಪಡಿಸಲು ಮುಖ್ಯಮಂತ್ರಿಯವರ ವಿಶೇಷ ಅನುದಾನದಲ್ಲಿ, ನಗರೋತ್ಥಾನ ಅನುದಾನದಲ್ಲಿ ನಗರವನ್ನು ಧೂಳು ಮುಕ್ತವಾಗಿಸುವ ಕೆಲಸ ನಡೆಯುತ್ತಿದ್ದು, ಕಾಮಗಾರಿ ಅಂತಿಮ ಹಂತದಲ್ಲಿದೆ. •ಸಂಜೀವಕುಮಾರ ನೀರಲಗಿ, ಸದಸ್ಯರು, ನಗರಸಭೆ.
•ಎಚ್.ಕೆ. ನಟರಾಜ್