Advertisement

ಕಲಬುರಗಿ ಜಿಲ್ಲೆಗೆ ಬರಲಿದೆ ಮತ್ತೂಂದು ಸಿಮೆಂಟ್‌ ಕಂಪನಿ

04:12 PM Oct 29, 2020 | sudhir |

ಕಲಬುರಗಿ: ಜಿಲ್ಲೆಯಲ್ಲಿ ಖ್ಯಾತ ಸಿಮೆಂಟ್‌ ಕಂಪನಿಯೊಂದು ತನ್ನ ಘಟಕವೊಂದನ್ನು ಸ್ಥಾಪಿಸಲು ಮುಂದೆ ಬಂದಿದ್ದು, ಈಗ
ಸ್ಥಾಪನೆಗೆ ಸಿದ್ಧತೆಗಳು ನಡೆದಿವೆ. ಸೇಡಂ ತಾಲೂಕಿನ ಆಗ ಹೊಸಹಳ್ಳಿ ಮತ್ತು ಕೊಂಕನಹಳ್ಳಿ ಗ್ರಾಮಗಳ ಸಮೀಪ ಸುಮಾರು
120 ಹೆಕ್ಟೇರ್‌ ಪ್ರದೇಶದಲ್ಲಿ ಕಾರ್ಖಾನೆ ಸ್ಥಾಪಿಸಲು ಸಿದ್ಧತೆಗಳು ನಡೆಯುತ್ತಿವೆ. ದಾಲ್ಮಿಯಾ ಭಾರತ ಗ್ರೂಪ್‌ನವರು ಹೂಡಿಕೆಗೆ ಮುಂದೆ ಬಂದಿದ್ದು, ಜಿಲ್ಲೆಯಲ್ಲಿ ಸಿಮೆಂಟ್‌ ಕಾರ್ಖಾನೆ ಸ್ಥಾಪಿಸಲು ಒಲವು ತೋರಲಾಗುತ್ತಿದೆ. ಒಂದು ವೇಳೆ ಈ ಸಿಮೆಂಟ್‌
ಕಾರ್ಖಾನೆ ಸ್ಥಾಪನೆ ಅಂತಿಮಗೊಂಡರೆ ರಾಜ್ಯದಲ್ಲಿ ದಾಲ್ಮಿಯಾ ಗ್ರೂಪ್‌ನಿಂದ ಎರಡನೇ ಕಾರ್ಖಾನೆ ಸ್ಥಾಪಿಸಿದಂತೆ ಆಗಲಿದೆ.

Advertisement

ಈಗಾಗಲೇ ಬೆಳಗಾವಿಯಲ್ಲಿ ದಾಲ್ಮಿಯಾ ಸಿಮೆಂಟ್‌ ಕಾರ್ಖಾನೆ ಇದೆ. ಕಳೆದ ಗುರುವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಕೈಗಾರಿಕ ಸಚಿವ ಜಗದೀಶ ಶೆಟ್ಟರ್‌ ಅವರು ದಾಲ್ಮಿಯಾ ಗ್ರೂಪ್‌ ಮತ್ತು ಭಾರತಿ ಎಂಟರ್‌ ಪ್ರೈಸಸ್‌ ಮುಖ್ಯಸ್ಥರೊಂದಿಗೆ
ನಡೆಸಿದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನ ನೀಡಿದ್ದಾರೆ. ಕರ್ನಾಟಕ ಹೂಡಿಕೆ ಮತ್ತು ಉದ್ಯಮಿ ಸ್ನೇಹಿ ರಾಜ್ಯವಾಗಿದ್ದು, ಹೊಸ ಹೂಡಿಕೆ ಪ್ರಸ್ತಾವನೆಗಳಿಗೆ ಶೀಘ್ರ ಅನುಮೋದಿಸಲಾಗುವುದು ಎಂದು ಕಂಪನಿಗಳ ಮುಖ್ಯಸ್ಥರಿಗೆ ಭರವಸೆ ನೀಡಲಾಗಿದೆ.

ಇದನ್ನೂ ಓದಿ:ಡಿಆರ್‌ಎಸ್‌ಗೆ ಮನವಿ ಬೇಡ: ಅಂಪೈರ್‌ರಿಂದಲೇ ಸಲಹೆ, ಅನಿಲ್‌ ಚೌಧರಿ ವಿವಾದ!

ದಾಲ್ಮಿಯಾ ಗ್ರೂಪ್‌ನವರು ಈಗಾಗಲೇ ರಾಜ್ಯದಲ್ಲಿ ಸಾವಿರಾರು ಕೋಟಿ ಹೂಡಿಕೆ ಮಾಡಿದ್ದು, ಈಗ ಮುಖ್ಯಮಂತ್ರಿಗಳ ಮಾತುಕತೆ ನಂತರ ಮತ್ತೆ ಹೂಡಿಕೆಗೆ ಮುಂದೆ ಬಂದಿದ್ದಾರೆ. ಜಿಲ್ಲೆಯಲ್ಲಿ ಸಿಮೆಂಟ್‌ ಕಾರ್ಖಾನೆ ಸ್ಥಾಪನೆಗಾಗಿ ಎರಡು ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಉದ್ದೇಶಿಸಲಾಗಿದೆ ಎಂಬುದಾಗಿ ಕಂಪನಿಯ ಮುಖ್ಯಸ್ಥರು ರಾಜ್ಯ ಸರ್ಕಾರಕ್ಕೆ ತಿಳಿಸಿದ್ದಾರೆ.

ಹಳೆಯದ್ದಕ್ಕೆ ಮರು ಜೀವ?: ದಾಲ್ಮಿಯಾ ಗ್ರೂಪ್‌ನವರು ಈ ಹಿಂದೆಯೇ ಸೇಡಂ ತಾಲೂಕಿನಲ್ಲಿ ಸಿಮೆಂಟ್‌ ಕಂಪನಿ ಸ್ಥಾಪನೆಗೆ
ಮುಂದೆ ಬಂದಿದ್ದರು. ವಾರ್ಷಿಕ 4 ಮಿಲಿಯನ್‌ ಟನ್‌ ಸಿಮೆಂಟ್‌ ಉತ್ಪಾದನಾ ಕಾರ್ಖಾನೆ ಮತ್ತು 45 ಮೇಗಾ ವ್ಯಾಟ್‌ ಸಾಮರ್ಥ್ಯದ
ಶಾಖೋತ್ಪನ್ನ ವಿದ್ಯುತ್‌ ಕೇಂದ್ರ ಸ್ಥಾಪನೆಗೆ ಉದ್ದೇಶಿಸಲಾಗಿತ್ತು. ಸಿಮೆಂಟ್‌ ಕಾರ್ಖಾನೆಗೆ 2008ರ ಮೇನಲ್ಲಿ ಅನುಮೋದನೆ ಸಹ
ನೀಡಲಾಗಿತ್ತು. ಆಗ ಮುಖ್ಯಮಂತ್ರಿಯಾಗಿ ಯುಡಿಯೂರಪ್ಪನವರೇ ಇದ್ದರು. ಹೀಗಾಗಿ ಈಗ ಇದೇ ಯೋಜನೆಗೆ ಅನುಮತಿ ಸಿಗಲಿದೆ ಎನ್ನಲಾಗುತ್ತಿದೆ.

Advertisement

ಇದನ್ನೂ ಓದಿ:ಕ್ಷುಲ್ಲಕ ವಿಚಾರಕ್ಕೆ ಜಗಳ : ಚಾಕುವಿನಿಂದ ಇರಿದು ವೃದ್ಧನ ಕೊಲೆ

ಆಗ ಹೊಸಹಳ್ಳಿ ಮತ್ತು ಕೊಂಕನಹಳ್ಳಿ ಗ್ರಾಮಗಳ ಸಮೀಪ ಸುಮಾರು 120 ಹೆಕrೇರ್‌ ಪ್ರದೇಶದಲ್ಲಿ ಕಾರ್ಖಾನೆ
ಉದ್ದೇಶಿಸಲಾಗಿತ್ತು. ಎರಡೂ ಗ್ರಾಮಗಳಲ್ಲಿ ಜಮೀನು ಅಂತಿಮಗೊಳಿಸಲಾಗಿತ್ತು. ಕಾರ್ಖಾನೆಗೆ ಕಾಗಿಣಾ ನದಿಯಿಂದ ಪೂರೈಕೆಗೆ
ಜಲಸಂಪನ್ಮೂಲ ಇಲಾಖೆ ಒಪ್ಪಿಗೆ ನೀಡಿತ್ತು. ಅಷ್ಟೇ ಅಲ್ಲ, ಸಾರ್ವಜನಿಕ ಅಹವಾಲು ಸಭೆ ನಡೆಸಲಾಗಿತ್ತು. ಆದರೆ, ಸಾರ್ವಜನಿಕ ಅಹವಾಲು ಸಭೆಯಲ್ಲಿ ಗ್ರಾಮಸ್ಥರು ಮತ್ತು ಕಂಪನಿಯವರು ನಡುವೆ ಒಮ್ಮತ ಏರ್ಪಡದೇ ಗದ್ದಲ ಉಂಟಾಗಿತ್ತು. ಆಗ
ಪೊಲೀಸರು ಗಾಳಿಯಲ್ಲಿ ಗುಂಡು ಸಹ ಹಾರಿಸಿ ಸಭೆಯನ್ನು ನಿಯಂತ್ರಿಸಿದ್ದರು. ತದನಂತರ 60ಕ್ಕೂ ಹೆಚ್ಚು ಜನರ ಮೇಲೆ
ಪೊಲೀಸ್‌ ಪ್ರಕರಣ ದಾಖಲಾಗಿತ್ತು. ನಂತರ ರೈತರ ಮೇಲಿನ ಪ್ರಕರಣಗಳನ್ನು ವಾಪಸ್‌ ಪಡೆಯಲಾಗಿತ್ತು.

ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಸಿಎಂ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ದಾಲ್ಮಿಯಾ ಗ್ರೂಪ್‌ನವರಿಗೆ ಆಹ್ವಾನ ನೀಡಲಾಗಿದೆ. ಹೊಸ ಹೂಡಿಕೆ ಪ್ರಸ್ತಾವನೆಗಳಿಗೆ ಶೀಘ್ರ ಅನುಮೋದನೆ ನೀಡುವ ಕುರಿತು ಭರವಸೆ ನೀಡಲಾಗಿದೆ. ಹೂಡಿಕೆ ಪ್ರಸ್ತಾವನೆ ಬಂದ ನಂತರ ಯೋಜನೆಗಳ ಸ್ಪಷ್ಟ ನೀಲಿನಕ್ಷೆ ಗೊತ್ತಾಗಲಿದೆ.
– ಜಗದೀಶ ಶೆಟ್ಟರ್‌, ಬೃಹತ್‌ ಕೈಗಾರಿಕಾ ಸಚಿವ

ರೈತರ ಹಾಗೂ ಕಂಪನಿ ನಡುವೆ ಮಾತುಕತೆ ವಿಫ‌ಲವಾಗಿದ್ದರಿಂದ ಘಟಕ ಸ್ಥಾಪನೆ ಕೈ ಬಿಟ್ಟಂತಾಗಿದೆ. ಗಲಾಟೆಯಾದ ನಂತರ 60ಕ್ಕೂ ಹೆಚ್ಚು ರೈತರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ತಮ್ಮ ಕಾಂಗ್ರೆಸ್‌ ಸರ್ಕಾರದಲ್ಲಿ ವಾಪಸ್‌ ಪಡೆಯಲಾಗಿದೆ. ಘಟಕ ಸ್ಥಾಪನೆ ಬಗ್ಗೆ ಈಗ ಯಾವುದೇ ಮಾಹಿತಿ ಇಲ್ಲ.
– ಡಾ| ಶರಣಪ್ರಕಾಶ ಪಾಟೀಲ್‌, ಮಾಜಿ ಸಚಿವ

ಈಗಾಗಲೇ ಶೇ.90ರಷ್ಟು ಭೂಮಿ ಕಂಪನಿ ಒಡೆತನದಲ್ಲಿದೆ. ಸರ್ಕಾರದ ಮಟ್ಟದಲ್ಲಿ ಒಪ್ಪಂದ ಆದ ನಂತರ ರೈತರೊಂದಿಗೆ ಅಹವಾಲು ಸಭೆ ನಡೆಸಲು ಮುಂದಾಗಲಾಗುವುದು.
– ರಾಜಕುಮಾರ ಪಾಟೀಲ್‌ ತೇಲ್ಕೂರ, ಶಾಸಕ

– ರಂಗಪ್ಪ ಗಧಾರ

Advertisement

Udayavani is now on Telegram. Click here to join our channel and stay updated with the latest news.

Next