Advertisement

ಲಾಕ್‌ಡೌನ್‌ ಸಡಿಲಿಕೆ ಬಳಿಕ ಸಿಮೆಂಟ್‌, ಸ್ಟೀಲ್‌ ದರ ಏರಿಕೆ

01:41 PM May 20, 2020 | mahesh |

ಉಡುಪಿ: ಲಾಕ್‌ಡೌನ್‌ ಸಡಿಲಿಕೆ ಆಗುತ್ತಿದ್ದಂತೆ ನಿರ್ಮಾಣ ಹಂತದ ಕೆಲಸಗಳಿಗೆ ಬಳಸುವ ಸಿಮೆಂಟ್‌, ಸ್ಟೀಲ್‌ ಸಲಕರಣೆಗಳ ದರ ಏರಿಕೆಯಾಗಿದೆ. ನಿರ್ಮಾಣ ಹಂತದ ಸಾಮಗ್ರಿ ಬೆಲೆ ಒಮ್ಮೆಲೇ ಗಗನಕ್ಕೇರಿದೆ. ಸಿಮೆಂಟ್‌ ತಯಾರಿಕೆ ಕಂಪೆನಿಗಳಾದ ಎಸಿಸಿ ಸಹಿತ ವಿವಿಧ ಕಂಪೆನಿಯ ಸಿಮೆಂಟ್‌ ದರ ರೂ 80ರಿಂದ 100ಕ್ಕೆ ಏರಿಕೆಯಾಗಿದೆ. ಸ್ಟೀಲಿಗೂ ಕೆ.ಜಿ. ಒಂದಕ್ಕೆ 3 ರೂ. ನಷ್ಟು ಏರಿಕೆಯಾಗಿದೆ. ಲಾಕ್‌ಡೌನ್‌ ಸಡಿಲಗೊಂಡು, ಮಳೆ ಆರಂಭದ ಹೊತ್ತಿಗೆ ಬೇಗನೆ ನಿರ್ಮಾಣ ಹಂತದ ಕೆಲಸಗಳನ್ನು ತರಾತುರಿಯಲ್ಲಿ ಮುಗಿಸಿಕೊಳ್ಳುವ ಅವಸರದಲ್ಲಿದ್ದ ಜನರಿಗೆ ದರ ಏರಿಕೆ ಬಿಸಿ ಸಹಿಸಿಕೊಳ್ಳಲಾಗುತಿಲ್ಲ.

Advertisement

ಸರಕು ಸಾಗಣೆ, ಕಾರ್ಮಿಕರ ಕೊರತೆ ಇತ್ಯಾದಿಗಳ ತೊಂದರೆಯಿಂದ ಮೊದಲೇ ಬಳಲುತ್ತಿದ್ದ ಸೂರು ಹೊಂದುವ ಕನಸು ಕಂಡವರುಗೆ ಬೆಲೆ ಏರಿಕೆಯ ಶಾಕ್‌ ಆಘಾತವನ್ನು ತಂದೊಡ್ಡಿದೆ. ಲಾಕ್‌ಡೌನ್‌ಗೆ ಮೊದಲು ಎಲ್ಲ ಕಂಪೆನಿಗಳ ಎ ಗ್ರೇಡ್‌ ಸಿಮೆಂಟ್‌ ದರ 330ರಿಂದ 335 ರೂ ಬೆಲೆಯಿತ್ತು. ಲಾಕೌಡೌನ್‌ ಸಡಿಲಿಕೆ ನಂತರ ಇದೇ ಎ ಗ್ರೇಡ್‌ ಸಿಮೆಂಟ್‌ ಪ್ರತಿ ಚೀಲಕ್ಕೆ 400 ರಿಂದ 420 ರೂ.ಗೆ ಏರಿಸಲಾಗಿದೆ. ಉಳಿದ ಇತರೆ ಗ್ರೇಡ್‌ಗಳ ಸಿಮೆಂಟ್‌ ಬೆಲೆ ಕೂಡ ಏರಿಕೆ ಆಗಿರುವುದು ನಿರ್ಮಾಣ ಕಾರ್ಯದಲ್ಲಿ ತೊಡಗಿರುವವರ ಅಸಮಾಧಾನಕ್ಕೆ ಇದು ಕಾರಣವಾಗಿದೆ.

ಕಬ್ಬಿಣಕ್ಕೂ ಬೆಲೆ ಏರಿದೆ
ಕಟ್ಟಡ ಕಟ್ಟಲು ಬಳಸುವ ಸಲಕರಣೆಯಾದ ಕಬ್ಬಿಣದ ಬೆಲೆ ಕೂಡ ಏರಿಕೆಯಾಗಿದೆ. ಲಾಕೌಡೌನ್‌ಗಿಂತ ಮೊದಲು ಇದ್ದ ಬೆಲೆಗಿಂತ ಕೆ,ಜಿಗೆ 2ರಿಂದ 3 ರೂ ತನಕ ಹೆಚ್ಚಳಗೊಂಡಿದೆ.

ಕಂಪೆನಿಗಳಿಗೂ ತಟ್ಟಿತು ಬಿಸಿ
ಲಾಕ್‌ಡೌನ್‌ ಸಡಿಲಿಕೆ ಬಳಿಕ ಉತ್ಪಾದನೆ ಆರಂಭವಾಗಿದ್ದರೂ ಕಚ್ಚಾ ವಸ್ತುಗಳು, ಸಾಗಾಟ, ಕಾರ್ಮಿಕರ ಕೊರತೆ, ಒಂದೇ ಪಾಳಿಯಲ್ಲಿ ಕೆಲಸ ಮಾಡುವ ಅನಿವಾರ್ಯತೆ ಇತ್ಯಾದಿ ಸಮಸ್ಯೆಗಳು ಉತ್ಪಾದನ ಕ್ಷೇತ್ರಕ್ಕೆ ಎದುರಾಗಿವೆ. ಹಾಗಾಗಿ ಬೆಲೆ ಏರಿಸಲಾಗಿದೆ, ಯಾವುದೇ ಡಿಸ್ಕೌಂಟ್‌ ಕೂಡ ಇಲ್ಲ ಎಂದು ಉತ್ಪಾದನಾ ಕಂಪೆನಿಗಳು ದರ ಏರಿಕೆಗೆ ನೀಡುತ್ತಿರುವ ಕಾರಣಗಳಾಗಿವೆ.

ಸೂರು ಕನಸಿಗೂ ಭಗ್ನ ತಂದ ಸೋಂಕು
ಆರ್ಥಿಕ ಸಂಸ್ಥೆಗಳಲ್ಲಿ ಸಾಲ ಮಾಡಿ ಸೂರು ಕಟ್ಟಿಕೊಳ್ಳಲು ಹೊರಟ ಮಧ್ಯಮ, ಬಡ ಮಧ್ಯಮ ವರ್ಗದ ಮಂದಿ, ನೌಕರರು ಮಾತ್ರ ಬೆಲೆ ಏರಿಕೆಯಿಂದ ತತ್ತರಿಸಲಿದ್ದಾರೆ. ಕೊರೊನಾ ಲಾಕ್‌ಡೌನ್‌ನಿಂಂದ ಕೆಲಸವಿಲ್ಲದೆ ಅದೆಷ್ಟೊ ಮಂದಿ ತತ್ತರಿಸುತ್ತಿದ್ದಾರೆ. ಇಂತಹ ಹೊತ್ತಲ್ಲಿ ಅರ್ಧಕ್ಕೆ ನಿಂತಿದ್ದ ತಮ್ಮ ಮನೆಗಳನ್ನು ಬೇಗ ಮುಗಿಸಿಕೊಂಡು ಹೊಸ ಮನೆ ಸೇರುವ ಧಾವಂತದಲ್ಲಿದ್ದವರು ದುಬಾರಿ ಬೆಲೆ ತೆರುವಂತಾಗಿದೆ. ಕೆಲವರು ಮನೆ ನಿರ್ಮಾಣವನ್ನೇ ನಿಲ್ಲಿಸುವ ಸ್ಥಿತಿಗೆ ತಲುಪಿದ್ದಾರೆ.

Advertisement

ಜಿಲ್ಲೆಗೆ ವಿವಿಧೆಡೆಯಿಂದ ಕೆಲ ಕಂಪೆನಿಗಳ ಸಿಮೆಂಟ್‌ ನೆರೆಯ ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ರಾಜ್ಯಕ್ಕೆ ರವಾನೆ ಆಗಬೇಕಿದೆ. ರಾಜ್ಯದಲ್ಲಿಯೂ ಕೆಲ ಕಂಪೆನಿಗಳಿವೆ. ರಾಜ್ಯದಿಂದ ಹೊರಗಿ ನಿಂದಲೂ ಜಿಲ್ಲೆಗೆ ಸಿಮೆಂಟ್‌ ಬರುತ್ತದೆ. ಬೆಲೆ ಏರಿಕೆಯಿಂದ ಏಜೆನ್ಸಿಯವರು ಮತ್ತು ಹಾರ್ಡ್‌ ವೇರ್‌ ಅಂಗಡಿಯವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಗ್ರಾಹಕರನ್ನು ಸಮಾಧಾನ ಪಡಿಸುವುದೇ ಅವರಿಗೆ ದೊಡ್ಡ ಚಿಂತೆಯಾಗಿದೆ.

ದರ ಹೆಚ್ಚಳ
ಸಿಮೆಂಟ್‌ ದರ ಹೆಚ್ಚಳವಾಗಿದೆ. ಇದಕ್ಕೆ ಕಾರಣವನ್ನು ಕಂಪೆನಿಯವರು ನೀಡುತ್ತಿಲ್ಲ. ನಾವು ಮೊದಲೇ ಅಡ್ವಾನ್ಸ್‌ ಹಣ ನೀಡಿ ಸಿಮೆಂಟ್‌ ದಾಸ್ತಾನು ತರಿಸಿಕೊಳ್ಳಬೇಕಾಗುತ್ತದೆ. ಬೆಲೆ ಏರಿಕೆಯಿಂದ ಮಾರಾಟಗಾರರು, ಖರೀದಿದಾರರು ಎಲ್ಲರೂ ಕಷ್ಟಕ್ಕೆ ಸಿಲುಕಿದ್ದೇವೆ.
-ಅಶೋಕ್‌ ನಾಯಕ್‌, ಕಟ್ಟಡ ನಿರ್ಮಾಣ ಕ್ಷೇತ್ರ ಉದ್ಯಮಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next