ಹೊಸದಿಲ್ಲಿ: ಪಾಶ್ಚಾತ್ಯ ಮತ್ತು ಐರೋಪ್ಯ ದೇಶಗಳಲ್ಲಿ ಸಾಮಾನ್ಯವಾಗಿರುವ “ಒಂಟಿ ತೋಳ ದಾಳಿ’ (ಲೋನ್ ವೂಲ್ಫ್ ಅಟ್ಯಾಕ್), ಸ್ವಯಂಪ್ರೇರಿತ ಉಗ್ರ ದಾಳಿ (ಡಿಐವೈ) ತಡೆಗೆ ಪ್ರತ್ಯೇಕ ವಿಭಾಗ ತೆರೆಯಲು ಕೇಂದ್ರ ಗೃಹ ಇಲಾಖೆ ಮುಂದಾಗಿದೆ.
ಇಂಟರ್‌ನೆಟ್ ಮೂಲಕ ತ್ವೇಷಮಯ ಅಂಶ ಗಳನ್ನು ಪ್ರಚಾರ ಮಾಡಿ ಮನಸ್ಸು ಪರಿವರ್ತನೆ ಗೊಳಿಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಯಲ್ಲಿ ಈ ಕ್ರಮಕ್ಕೆ ನಿರ್ಧರಿಸಲಾಗಿದೆ. ಜತೆಗೆ ಇಂಥ ಕ್ರಮಗಳಿಂದಾಗಿ ಕೋಮು ಸೌಹಾರ್ದ ಕದಡುವಂಥ ಘಟನೆಗಳ ಮೇಲೂ ನಿಗಾ ಇರಿಸುವಂತಾಗುತ್ತದೆ ಎನ್ನುವುದು ಗೃಹ ಇಲಾಖೆಯ ವಾದ.
ಮಧ್ಯಪ್ರದೇಶದ ತೇಕಾನ್ಪುರದಲ್ಲಿ ಮೂರು ದಿನಗಳ ವಿವಿಧ ಪೊಲೀಸ್ ಮಹಾನಿರ್ದೇ ಶಕರ ಸಭೆಯಲ್ಲಿ ಮಾತನಾಡುವ ವೇಳೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಈ ಅಂಶ ಪ್ರಸ್ತಾವ ಮಾಡಿದ್ದಾರೆ. ಫ್ರಾನ್ಸ್, ಜರ್ಮನಿ ಮತ್ತು ಯುನೈಟೆಡ್ ಕಿಂಗ್‌ಡಮ್‌ಗಳಲ್ಲಿ ನಡೆದ “ಒಂಟಿ ತೋಳ ದಾಳಿ’ ಪ್ರಕರಣಗಳನ್ನು ಉಲ್ಲೇಖೀಸಿ ಅವರು ಮಾತನಾಡಿದ್ದಾರೆ. ವಿದೇಶ ಗಳಲ್ಲಿ ಕಂಡು ಬಂದಿರುವಂತೆ ವಾಹನಗಳನ್ನು ಚಲಾಯಿಸಿ ಸಾರ್ವಜನಿಕರನ್ನು ಕೊಲ್ಲುವುದು ಮತ್ತು ಸಿಕ್ಕ ಸಿಕ್ಕವರಿಗೆ ಇರಿತದಂಥ ವಿಚಾರ ಗಳು ದೇಶದಲ್ಲಿ ಗಂಭೀರ ತಿರುವು ಪಡೆದು ಕೊಳ್ಳಬಹುದು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ರವಿವಾರ ಸಭೆ: ಕೇಂದ್ರ ಗೃಹ ಸಚಿವರ ಸಲಹೆಯಂತೆ ಇಂಟೆಲಿಜೆನ್ಸ್ ಬ್ಯೂರೋ (ಐ.ಬಿ.) ರವಿವಾರ ವಿಶೇಷ ಸಭೆ ಆಯೋಜಿ ಸಿದ್ದು, ಕೇಂದ್ರ ಮತ್ತು ರಾಜ್ಯಗಳ ಪೊಲೀಸ್ ಇಲಾಖೆಗಳ ಜತೆಗೆ ಮಾಹಿತಿ ವಿನಿಮಯ ಮತ್ತು ಸಂಗ್ರಹ ಬಗ್ಗೆ ಚರ್ಚಿಸಲಾಗುತ್ತದೆ. ಐ.ಬಿ. ಈಗಾಗಲೇ ಧರ್ಮ ದ್ವೇಷ (ರಾಡಿಕಲೈಸೇಷನ್)ದ ವಿರುದ್ಧ ಕೈಗೊಳ್ಳಬಹುದಾದ ಕ್ರಮ ಮತ್ತು ಅದರ ವಿರುದ್ಧ ಏಕೀಕೃತ ಕ್ರಮದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದೆ. ಪೊಲೀಸ್ ಮಹಾ ನಿರ್ದೇಶಕರ ಮೂಲಕ ವಿವಿಧ ರಾಜ್ಯಗಳಲ್ಲಿ ಯಾವ ರೀತಿಯ ಧರ್ಮದ್ವೇಷದ ವಿಧಗಳು ಇವೆ ಎಂಬುದರ ಬಗ್ಗೆ ಅಧ್ಯಯನ ನಡೆಸುವಂತೆ ಐ.ಬಿ. ಸಲಹೆ ನೀಡಿದೆ.
ಏನಿದು ಒಂಟಿ ತೋಳ ದಾಳಿ?
ಒಂಟಿ ತೋಳ ದಾಳಿ ಎಂದರೆ ಒಬ್ಬನೇ ಒಬ್ಬ ವ್ಯಕ್ತಿ ಬಾಹ್ಯ ಆದೇಶವಿಲ್ಲದೆ ಏಕಾಂಗಿಯಾಗಿ ನಡೆಸುವ ದಾಳಿ. ನಿಗದಿತ ಉಗ್ರ ಸಂಘಟನೆಯ ಕೃತ್ಯ ಅಥವಾ ತತ್ವದಿಂದ ಪ್ರೇರಿತನಾಗಿ ಈತ ಉಗ್ರ ಕೃತ್ಯ ಎಸಗುತ್ತಾನೆ. ಆದರೆ, ಡೂ ಇಟ್ ಯುವರ್‌ಸೆಲ್ಫ್ (ಡಿಐವೈ) ಮಾದರಿಯಲ್ಲಿ ದಾಳಿ ಮಾಡುವವನಿಗೆ ಯಾರಾದರೂ ಸೂತ್ರಧಾರ ಇದ್ದೇ ಇರುತ್ತಾನೆ. ಆತನ ಆದೇಶದಂತೆಯೇ ಈತ ವಿಧ್ವಂಸಕ ಕೃತ್ಯ ಎಸಗುತ್ತಾನೆ. ಎರಡೂ ಮಾದರಿ ದಾಳಿಗಳಲ್ಲಿ ಚೂರಿ, ವೇಗದಲ್ಲಿ ಚಲಿಸುವ ವಾಹನ, ಬೆಂಕಿಕಡ್ಡಿಗಳನ್ನು ಬಳಸಲಾಗುತ್ತದೆ. ಲಂಡನ್, ಬರ್ಲಿನ್ ಮತ್ತು ಫ್ರಾನ್ಸ್‌ನ ನೀಸ್‌ನಲ್ಲಿ ಇದೇ ಮಾದರಿಯಲ್ಲಿ ದಾಳಿ ನಡೆಸಲಾಗಿತ್ತು. ಭಾರತದಲ್ಲಿ ಈ ವರೆಗೆ ಒಂಟಿ ತೋಳ ದಾಳಿ (ಲೋನ್ ವೂಲ್ಫ್ ಅಟ್ಯಾಕ್) ಮತ್ತು ಸ್ವಯಂ ಪ್ರೇರಿತ ಉಗ್ರ ದಾಳಿ (ಡೂ ಇಟ್ ಯುವರ್ ಸೆಲ್ಫ್-ಡಿಐವೈ) ಬಗ್ಗೆ ಪ್ರತ್ಯೇಕ ವ್ಯಾಖ್ಯೆ ಮಾಡಲಾಗಿಲ್ಲ.