Advertisement

ಯಕ್ಷಗಾನ ಕಲಾವಿದರ ನೋವಿಗೆ ಭರವಸೆ ಬೆಳಕು ನೀಡಿತು ‘ಸೆಲ್ಕೋ’

09:47 AM Jun 24, 2021 | Team Udayavani |

ಶಿರಸಿ: ಕಳೆದ ಒಂದುವರೆ ವರ್ಷದಿಂದ ಕೊರೋನಾದ ಗಂಭೀರ ಸಮಸ್ಯೆ ಎದುರಿಸುತ್ತಿರುವ ಸಾಂಸ್ಕೃತಿಕ ಕ್ಷೇತ್ರದ ನೋವಿಗೆ ಸ್ಪಂದಿಸುವ, ಭರವಸೆಯ ಬೆಳಕು ನೀಡುವಲ್ಲಿ ಸೆಲ್ಕೋ ಫೌಂಡೇಶನ್ ಸದ್ದಿಲ್ಲದೇ ಒಂದು ಹೆಜ್ಜೆ ಮುಂದಿಟ್ಟಿದೆ.

Advertisement

ಮ್ಯಾಗ್ಸತ್ಸೇ ಪ್ರಶಸ್ತಿ ಪುರಸ್ಕೃತ ಹರೀಶ ಹಂದೆ ಅವರ ನೇತೃತ್ವದ ಸೆಲ್ಕೋ ಫೌಂಡೇಶನ್ ಶಕ್ತಿ ಆಧಾರಿತವಾಗಿ ಸಮಾಜದಲ್ಲಿ ಬದುಕಿನ ಭರವಸೆಯನ್ನು ಮೂಡಿಸುತ್ತಿದೆ. ಹೊಸ ಹೊಸ ಆವಿಷ್ಕರ, ಉದ್ಯಮ ಸ್ಥಾಪನೆಗೆ ನೆರವು, ಕಲೆ ಹಾಗೂ ಗ್ರಾಮೀಣ ಗುಡಿಕೈಗಾರಿಕೆ ಉಳಿಸಿ ಬೆಳಸುವ ದೃಷ್ಟಿಯಿಂದ, ಆರೋಗ್ಯ ಉಪಕರಣಗಳನ್ನು ಒದಗಿಸುವ ಜೊತೆಗೆ ಕಡಿಮೆ ಇಂಧನ ಬಳಸಿ ಪರಿಸರ ಉಳಿಸುವ ಅನುಪಮ ಕಾರ್ಯಕ್ಕೂ ಮುಂದಾಗಿದೆ.

ಈ ಸೆಲ್ಕೋ ಫೌಂಡೇಶನ್ ಉತ್ತರ ಕನ್ನಡದ ಯಲ್ಲಾಪುರದಲ್ಲಿ ಹೆರಿಗೆ ಆಸ್ಪತ್ರೆಗೆ ಸಂಪೂರ್ಣ ಸೋಲಾರ್ ಅಳವಡಿಕೆ, ಬೆಂಗಳೂರಿನಲ್ಲಿ ನೂರು ಬೆಡ್‌ನ ಆಸ್ಪತ್ರೆ ಸ್ಥಾಪನೆಗೆ ಪ್ರಮುಖ ಸಹಭಾಗಿತ್ವ ಸೇರಿದಂತೆ ಅನೇಕ ರಚನಾತ್ಮಕ, ಸಮಾಜಕ್ಕೆ ಕೆಳ ಸ್ಥರದಲ್ಲಿ ಸ್ಪಂದಿಸುವ ಕಾರ್ಯ ಮಾಡುತ್ತಿದೆ.

ಸಂಕಷ್ಟಕ್ಕೆ ಸ್ಪಂದನೆ:

ಕೊರೋನಾ ಸಂಕಷ್ಟದಿಂದ ಯಕ್ಷಗಾನದ ವೃತ್ತಿ ಮೇಳ, ಹವ್ಯಾಸಿ ಮೇಳಗಳಲ್ಲಿ ತೊಡಗಿಕೊಂಡ, ಅದನ್ನೇ ವೃತ್ತಿಯಾಗಿಸಿಕೊಂಡ ಕಲಾವಿದರುಗಳಿಗೆ ಏನು ಮಾಡಬೇಕು ಎಂಬ ಸ್ಥಿತಿ ನಿರ್ಮಾಣ ಆಗಿತ್ತು. ಕಲೆಯ ಬದುಕು ಬಿಟ್ಟರೆ, ವೇಷ ಬಳಿದುಕೊಂಡು ರಾತ್ರಿಯನ್ನು ಹಗಲಾಗಿಸಿ ಜಗಮಗಿಸುವ ಸಾಂಸ್ಕೃತಿಕ ಔತಣ ನೀಡುವ ಸಾಂಪ್ರದಾಯಿಕ ಕಲಾವಿದರಿಗೆ ಕೊರೋನಾ ಪ್ರದರ್ಶನಕ್ಕೆ ತೊಡಕಾಗಿ ತಣ್ಣೀರು ಬಟ್ಟೆ ನೀಡಿತ್ತು.

Advertisement

ಅನೇಕರು ಬದಲೀ ಉದ್ಯೋಗ ಕೂಡ ನೋಡಿಕೊಳ್ಳಲೂ ಆಗದೇ ಸಂಕಷ್ಟಕ್ಕೆ ತಲುಪಿತ್ತು. ರಂಗದಲ್ಲಿ ರಾಜನಾಗಿ, ಹಾಸ್ಯದಲ್ಲಿ ನಗಿಸಿದ ಕಲಾವಿದನಾಗಿ ಮಿಂಚಿದವರಿಗೆ ಕರೋನಾ ಬರೆ ಸಿಡಿಲಾಗಿತ್ತು. ಈ ನೋವನ್ನು ಸ್ವತಃ ಯಕ್ಷಗಾನ, ತಾಳಮದ್ದಲೆ ಕಲಾವಿದರೂ ಆಗಿ ಅರಿತ ಸೆಲ್ಕೋ ಫೌಂಡೇಶನ್‌ನ ಸಿಇಓ ಮೋಹನ ಹೆಗಡೆ ಸಾಧ್ಯವಿದ್ದ ಜನರಿಗೆ ನೆರವಾಗುವ ಸಂಕಲ್ಪ ತೊಟ್ಟರು. ಹಂದೆ ಅವರ ಕಲಾ ಪ್ರೀತಿ ಇಲ್ಲಿ ಭರವಸೆಯ ಬೆಳಕಾಗಿಸುವಲ್ಲಿ ನೆರವಾಯಿತು.

ಕಳೆದ ವರ್ಷದ ಪ್ರಥಮ ಕೋವಿಡ್ ಅಲೆಗೆ ಸುಮಾರು 120 ಜನ ಯಕ್ಷಗಾನ ಹಾಗೂ ಇತರ ವಿಭಾಗದ ಕಲಾವಿದರಿಗೆ ಫೌಂಡೇಶನ್ ಸರಾಸರಿ 5 ಸಾವಿರ ರೂ. ನಂತೆ ನೆರವಾಯಿತು. ಕಳೆದ ವರ್ಷ ಜೂನ್‌ದಲ್ಲಿ ಆರೋಗ್ಯ ಸಮಸ್ಯೆ ಇದ್ದವರಿಗೆ, ನಿವೃತ್ತಿ ಅಂಚಿನಲ್ಲಿ ಇದ್ದವರಿಗೆ, ಯುವ ಕಲಾವಿದರಿಗೆ, ಆರ್ಥಿಕ ಅನಿವಾರ್‍ಯತೆ ಇದ್ದವರಿಗೆ ನೆರವಿನ ಹಸ್ತ ಚಾಚಿ ಯಾವುದೇ ಪ್ರಚಾರ ಬಯಸದೇ ಮುಂದಡಿ ಇಟ್ಟಿತು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಇತರ ಪ್ರದೇಶದ ಯಕ್ಷಗಾನ ಕಲಾವಿದರಿಗೆ ನೆರವಾಯಿತು.

ಕಳೆದ ವರ್ಷ ಯಕ್ಷಗಾನ ವೇಷಧಾರಿಗಳು, ವೇಷ ಭೋಷಣ ಕಲಾವಿದರು, ಹಿಮ್ಮೇಳ ಕಲಾವಿದರು ಸಹಿತ ಹಲವರಿಗೆ ನೆರವಾದರೆ ಈ ಬಾರಿ ಕೂಡ ೧೦೦ರಷ್ಟು ಕಲಾವಿದರಿಗೆ ಸ್ವತಃ ಮುಂದೆ ಬಂದು ನೆರವಾಗುತ್ತಿದೆ. ಇನ್ನೂ ಅಧಿಕ ಕಲಾವಿದರು ಸಂಕಷ್ಟದಲ್ಲಿ ಇದ್ದಾರೆ. ಎಲ್ಲರಿಗೆ ನೆರವಾಗುವ ಆಸಕ್ತಿ ಇದ್ದರೂ ಒಂದು ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದೂ ಹೇಳುತ್ತಾರೆ ಮೋಹನ್ ಹೆಗಡೆ.

ಯಕ್ಷಗಾನದಂತ ಸಾಂಪ್ರದಾಯಿಕ ಕಲೆಯನ್ನು ಉಳಿಸಿ, ಉತ್ತೇಜಿಸಬೇಕಾಗಿದೆ. ಈ ಕಾರಣದಿಂದ ನಮ್ಮ ಕಾಣಿಕೆ ಸಲ್ಲಿಸಿದ್ದೇವೆ.

– ಮೋಹನ್ ಹೆಗಡೆ ಹೆರವಟ್ಟ, ಸೆಲ್ಕೋ ಫೌಂಡೇಶನ್ ಸಿಇಓ

ಕಲಾವಿದರ ಸಂಕಷ್ಟಕ್ಕೆ ಸ್ಪಂದಿಸುವ ಸೆಲ್ಕೋ ಯಾವುದೇ ಪ್ರಚಾರ, ಪ್ರತಿಫಲ ಬಯಸದೇ ಕೆಲಸ ಮಾಡುತ್ತಿರುವದು ಮಾದರಿ.

– ಕೇಶವ ಹೆಗಡೆ‌ ಕೊಳಗಿ,‌ಪ್ರಸಿದ್ದ ಭಾಗವತ

Advertisement

Udayavani is now on Telegram. Click here to join our channel and stay updated with the latest news.

Next