ಹಾಸನ: ಹುತಾತ್ಮರ ದಿನವಾದ ಜ.30 ರಂದು ಉತ್ತರ ಪ್ರದೇಶದಲ್ಲಿ ಮಹಾತ್ಮಗಾಂಧೀಜಿಯವ ಹತ್ಯೆಯ ಅಣಕು ನಡೆಸಿ ಹಿಂದೂ ಮಹಾಸಭಾ ಮತ್ತು ಬಿಜೆಪಿ ಕಾರ್ಯಕರ್ತರು ದವರು ಸಂಭ್ರಮಿಸಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ದಿನ ಜ.30ರಂದು ಹುತಾತ್ಮರಾದ ದಿನದಂದು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಗೆ ಜೈಕಾರ ಹಾಕಿರುವವರ ವಿರುದ್ಧ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಅಂಬೇಡ್ಕರ್ ಪ್ರತಿಮೆ ಕೆಳಗೆ ಪ್ರತಿಭಟನೆ ಮಾಡಿ ಆಕ್ರೋಶವ್ಯಕ್ತಪಡಿಸಲಾಯಿತು.
ಅಂಬೇಡ್ಕರ್ ಪ್ರತಿಮೆ ಬಳಿ ಧರಣಿ: ನಗರದ ಬಿ.ಎಂ. ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಿಂದ ಮೆರವಣಿಗೆ ಹೊರಟ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಬಳಿ ಧರಣಿ ನಡೆಸಿದರು. ಹಿಂದೂ ಮಹಾಸಭಾದವರು ಗಾಂಧೀಜಿಯವರ ಪ್ರತಿಕೃತಿಗೆ ಶೂಟ್ ಮಾಡಿ ನಾಥೂರಾಂಗೋಡ್ಸೆಗೆ ಜೈಕಾರ ಹಾಕಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಗೋಡ್ಸೆ ವೈಭವೀಕರಣಕ್ಕೆ ಖಂಡನೆ: ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಾವಗಲ್ ಮಂಜುನಾಥ್ ಮಾತ ನಾಡಿ, ಮಹಾತ್ಮಗಾಂಧೀಜಿ ಹತ್ಯೆಯಾದ ದಿನವನ್ನು ದೇಶದಲ್ಲಿ ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತಿದೆ. ವಿಶ್ವವೇ ಗಾಂಧೀಜಿಯವರನ್ನು ಒಪ್ಪಿಕೊಂಡಿದೆ. ಆದರೆ ಬಿಜೆಪಿಯನ್ನು ಬೆಂಬಲಿಸುತ್ತಿರುವ ಸಂಘಟನೆಗಳು ಈ ಬಾರಿ ಹುತಾತ್ಮರ ದಿನ ಆಚರಣೆಯಲ್ಲಿ ಹಿಂದೂ ಮಹಾಸಭಾದವರು ಗಾಂಧೀಜಿಯವರ ಪ್ರತಿಕೃತಿಗೆ ಶೂಟ್ ಮಾಡುವುದರ ಮೂಲಕ ಮತ್ತು ನಾಥೂರಾಂಗೋಡ್ಸೆಯನ್ನು ವೈಭವೀಕರಿಸಿ ವಿಕೃತಿ ಮೆರೆದಿದ್ದಾರೆ. ಇದು ದೇಶವೇ ದೇಶ ತಲೆತಗ್ಗಿಸುವ ವಿಚಾರವಾಗಿದೆ. ಎಐಸಿಸಿ ಅಧ್ಯಕಷ ರಾಹುಲ್‌ಗಾಂಧಿಯವರ ಕರೆಯಂತೆ ಇಂದು ದೇಶಾದ್ಯಂತ ಮೌನ ಪ್ರತಿಭಟನೆ ನಡೆಯುತ್ತಿದೆ ಎಂದರು.
ರಾಷ್ಟ್ರದ್ರೋಹದ ಕೃತ್ಯ: ರಾಜ್ಯಸಭಾ ಮಾಜಿ ಸದಸ್ಯ ಎಚ್.ಕೆ. ಜವರೇಗೌಡ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ವನ್ನು ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಯವರ ಹತ್ಯೆ ದಿನವನ್ನು ಹುತಾತ್ಮ ದಿನಾಚರಣೆ ಯನ್ನಾಗಿ ಆಚರಿಸಿ ಹುತಾತ್ಮರಿಗೆ ಮುಕ್ತಿ ಸಿಗಲಿ ಎನ್ನುವ ಪ್ರಾರ್ಥಿಸುವ ದಿನದಂದು ಗಾಂಧೀಜಿಯವರ ಹತ್ಯೆನ್ನು ಸಂಭ್ರಮಿಸುವ ಮನಸ್ಥಿತಿಯು ರಾಷ್ಟ್ರ ದ್ರೋಹದ ಕೃತ್ಯ. ಇಂತಹವರು ಭಾರತದಲ್ಲಿರಲು ಯೋಗ್ಯರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಣಕು ಪ್ರದರ್ಶನ ನಡೆಸಿದವರು ಹಾಗೂ ಅದರ ಹಿಂದೆ ಇರುವವರನ್ನು ಬಂಧಿಸಿ ದೇಶದಲ್ಲಿ ಇಂತಹ ವಿಕೃತಿಗಳು ಮತ್ತೆ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದೂ ಅವರು ಒತ್ತಾಯಿಸಿದರು. ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶ್ವೇತಾ, ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ, ಕಾಂಗ್ರೆಸ್ ಮುಖಂಡ ಎಚ್.ಕೆ. ಮಹೇಶ್, ಬಾಗೂರು ಮಂಜೇಗೌಡ, ಅಸ್ಲಾಂ ಪಾಷಾ, ತಮ್ಲಾಪುರ ಗಣೇಶ್, ಮುಬಾಷೀರ ಅಹಮದ್ ಮತ್ತಿತರರು ಉಪಸ್ಥಿತರಿದ್ದರು.