Advertisement
ಸಂಸದ ಅನಂತಕುಮಾರ್ ಹೆಗಡೆ ಅವರ ಅನುಪಸ್ಥಿತಿಯಲ್ಲೂ ಕಾರ್ಯಕರ್ತರ ವಿಜಯದ ಉತ್ಸಾಹ ಮುಗಿಲು ಮುಟ್ಟಿತ್ತು. ಮಹಿಳಾ ಕಾರ್ಯಕರ್ತೆಯರು, ಪದಾಧಿಕಾರಿಗಳು, ನಗರಸಭೆ ಮಹಿಳಾ ಸದಸ್ಯರು ಡೋಲಿನ ಶಬ್ದಕ್ಕೆ ಅಕ್ಷರಶಃ ಡಾನ್ಸ್ ಮಾಡಿದರು. ಶಾಸಕಿ ರೂಪಾಲಿ ನಾಯ್ಕ ಸಹ ಕಾರ್ಯಕರ್ತರ ಹುರುಪನ್ನು ಕಂಡು ಸ್ವತಃ ಡಾನ್ಸ್ ಮಾಡಿದರು. ಯುವಕರು ಕುಣಿದು ಕುಪ್ಪಳಿಸಿದರು.
Related Articles
Advertisement
ಜೆಡಿಎಸ್‌ನ ಪದಾಧಿಕಾರಿಗಳು ಸಹ ಎರಡು ಬಣವಾದ ಕಾರಣ ಚುನಾವಣಾ ಪ್ರಚಾರದಲ್ಲಿ ಅಸ್ನೋಟಿಕರ್ ಹಿನ್ನೆಡೆ ಅನುಭವಿಸಿದ್ದರು. ಹಣಕಾಸು ವಿಷಯದಲ್ಲಿ ಮಾಡಿದ ಜಿಪುಣತನ ಸಹ ಮೈತ್ರಿ ಅಭ್ಯರ್ಥಿಯ ಸೋಲಿಗೆ ಕಾರಣವಾಯಿತು. ಹಾಲಿ ಸಂಸದರ ವಿರುದ್ಧ ಬಳಸಿದ ಅಸಂವಿಧಾನಕ ಭಾಷೆ, ಹಿಂದುಳಿದ ವರ್ಗದ ಪ್ರತಿನಿಧಿಯೆಂದು ಬೂಸಿ ಬಿಟ್ಟದ್ದು, ಶ್ರೀಮಂತಿಕೆ ಗತ್ತಿನಿಂದ ಅಸ್ನೋಟಿಕರ್ ಹೊರಬರದೇ ಇದ್ದುದು, ಮಾಧ್ಯಮಗಳನ್ನೇ ಒಡೆದು ಆಳಲು ನೋಡಿದ್ದು, ರಾಜಕೀಯ ಸ್ವಾರ್ಥಕ್ಕಾಗಿ ಪಕ್ಷಗಳನ್ನು ಬದಲಿಸಿದ್ದು ಅಸ್ನೋಟಿಕರ್ ಹಿನ್ನೆಡೆಗೆ ಕಾರಣವಾಗಿತ್ತು. ಯಾವತ್ತು ಜನರ ಜೊತೆ ಪ್ರಾಮಾಣಿಕವಾಗಿ ಬೆರೆಯದ ಉದ್ಯಮಿ ಅಸ್ನೋಟಿಕರ್‌ಗೆ ಪಾಠ ಕಲಿಸಲು ಸ್ವಕ್ಷೇತ್ರ ಕಾರವಾರದಲ್ಲೇ ನಿರ್ಧಾರಗಳಾಗಿದ್ದವು. ಮಾಜಿ ಶಾಸಕ ಕಾಂಗ್ರೆಸ್‌ನ ಸತೀಶ್ ಸೈಲ್ ಅತ್ಯಂತ ಅರ್ಥಪೂರ್ಣವಾಗಿ ಮೈತ್ರಿಯನ್ನು ತುಳಿದು ಹಾಕಿದ್ದು ಲೋಕಸಭಾ ಚುನಾವನಾ ಫಲಿತಾಂಶದಲ್ಲಿ ಸ್ಪಷ್ಟವಾಗಿ ಪ್ರತಿಫಲಿಸುತ್ತಿದೆ.
ನಾಗರಾಜ ಹರಪನಹಳ್ಳಿ
ಭಟ್ಕಳದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ
ಭಟ್ಕಳ: ಸಂಸತ್ ಚುನಾವಣೆಯಲ್ಲಿ ಅನಂತಕುಮಾರ್ ಹೆಗಡೆ ಅವರು 6ನೇ ಬಾರಿಗೆ ಭಾರೀ ಬಹುಮತದಿಂದ ಆಯ್ಕೆಯಾಗುತ್ತಲೇ ಭಟ್ಕಳದಲ್ಲಿ ನೂರಾರು ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.
ಇಲ್ಲಿನ ಶಂಶುದ್ಧೀನ್ ಸರ್ಕಲ್ನಲ್ಲಿ ಸೇರಿದ ಕಾರ್ಯಕರ್ತರು ಅನಂತಕುಮಾರ್ ಹೆಗಡೆ ಹಾಗೂ ಮೋದೀಜಿಗೆ ಹಾಕಿದ ಜೈಕಾರ ಮುಗಿಲು ಮುಟ್ಟುವಂತಿತ್ತು. ಉತ್ಸಾಹದಿಂದಲೇ ಭಾಗವಹಿಸಿದ್ದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ದ್ವಿಗುಣಗೊಳಿಸಿದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಇಲ್ಲಿನ ಸರ್ಕಲ್ ಬಳಿ ಜಮಾಯಿಸಿದ್ದ ಕಾರ್ಯಕರ್ತರನ್ನು ನಂತರ ಶಾಸಕ ಸುನೀಲ್ ನಾಯ್ಕ ಹಾಗೂ ಬಿಜೆಪಿ ಪ್ರಮುಖರು ಬಂದು ಸೇರಿಕೊಂಡರು.
ಅನಂತಕುಮಾರ್ ಹೆಗಡೆಯವರಿಗೆ ರಾಜಕೀಯದ ಹುಟ್ಟು ನೀಡಿರುವುದೇ ಭಟ್ಕಳ ಎನ್ನುವುದಕ್ಕೆ ಎರಡು ಮಾತಿಲ್ಲ. ಅತ್ಯಂತ ಶಿಸ್ತಿನ ಆರ್‌ಎಸ್‌ಎಸ್ ಕಾರ್ಯಕರ್ತರಾಗಿದ್ದ ಅವರಿಗೆ ಭಟ್ಕಳದ ನಂಟು ಹೊಸತೇನಲ್ಲವಾಗಿತ್ತು. ಆದರೆ 1993ರಲ್ಲಿ ಭಟ್ಕಳದಲ್ಲಿ ನಡೆದ ಸುದೀರ್ಘ ಗಲಭೆ ಅವರಿಗೆ ಭಟ್ಕಳದ ಜನತೆ ಮೇಲೆ ಅನುಕಂಪ ಹುಟ್ಟುವಂತೆ ಮಾಡಿತ್ತು. ಅಂದು ಭಟ್ಕಳದಲ್ಲಿ ಹಿಂದೂಗಳು ಅಪಾಯದಲ್ಲಿದ್ದಾರೆ ಎನ್ನುವ ಅವರ ಭಾವನೆಯಿಂದಾಗಿ ಅವರು ಸಂಪೂರ್ಣ ತಮ್ಮನ್ನು ಇಲ್ಲಿನ ಹಿಂದೂಗಳ ರಕ್ಷಣೆಗೆ ತೊಡಗಿಸಿಕೊಂಡರು. ಹಲವಾರು ಬಾರಿ ಅಧಿಕಾರಿಗಳನ್ನು, ಸರಕಾರವನ್ನು ಕೂಡಾ ಎದುರು ಹಾಕಿಕೊಳ್ಳುವ ಪ್ರಸಂಗ ಎದುರಾದರೂ ಅವರು ಎದೆ ಗುಂದದೇ ಸದಾ ಸಂಕಷ್ಟಕ್ಕೆ ಸಿಲುಕಿದವರೊಂದಿಗೆ ಇದ್ದು ಜನರಿಗೆ ತಾವಿದ್ದೇವೆ ಎನ್ನುವ ಧೈರ್ಯ ತುಂಬಿದರು.
ಅನಂತಕುಮಾರ್ ಹೆಗಡೆ ಎಂದು ತಮಗಾಗಿ ಏನನ್ನೂ ಕೇಳಿದವರಲ್ಲ, ಅಂದು 1996ರಲ್ಲಿ ಅನಂತಕುಮಾರ್ ಹೆಗಡೆಯವರಿಗೆ ಪ್ರಥಮವಾಗಿ ಲೋಕಸಭೆಗೆ ಟಿಕೇಟ್ ದೊರೆತಾಗ ಕೂಡಾ ಅವರು ಹಿರಿಯರ ಒತ್ತಾಸೆಯ ಮೇರೆಗೆ ಒಪ್ಪಿಕೊಂಡಿದ್ದರು. ಡಾ| ಚಿತ್ತರಂಜನ್ ಅವರ ಹತ್ಯೆಯಾದಾಗ ಚುನಾವಣೆ ಹೊಸ್ತಿಲಲ್ಲಿದ್ದ ಹೆಗಡೆ ಅವರು ನಂತರದ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಆರಿಸಿ ಬಂದು ಅತ್ಯಂತ ಕಿರಿಯ ವಯಸ್ಸಿನ ಸಂಸದ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಇಂದು 6ನೇ ಬಾರಿಗೆ ಆಯ್ಕೆಯಾಗುವಾಗಲೂ ಅವರು ರಾಷ್ಟ್ರದಲ್ಲಿ ಅತಿ ಹೆಚ್ಚು ಪಡೆದ ಎರಡನೇ ಸಂಸದ ಎನ್ನುವ ಹೆಗ್ಗಳಿಕೆಯೊಂದಿಗೆ ಸಂಸತ್ ಪ್ರವೇಶಿಸುತ್ತಿದ್ದಾರೆ ಎನ್ನುವುದು ಭಟ್ಕಳದ ಜನತೆಗಷ್ಟೇ ಅಲ್ಲ ಉತ್ತರ ಕನ್ನಡ ಜಿಲ್ಲೆಯ ಜನತೆಗೆ ಒಂದು ಹೆಮ್ಮೆಯ ವಿಷಯವಾಗಿದೆ.
ಅಭಿಮಾನದ ವಿಶ್ವಾಸಕ್ಕೆ ನತಮಸ್ತಕನಾಗಿದ್ದೇನೆ: ಅನಂತ
ಶಿರಸಿ: ರಾಜ್ಯದಲ್ಲೇ ಅತಿ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ ಬಿಜೆಪಿಯ ಟೈಗರ್ ಅನಂತಕುಮಾರ ಹೆಗಡೆ ರಾಜಕೀಯ ಜೀವನದ ಅವಲೋಕನ ಮಾಡಿಕೊಳ್ಳುವ ಮೂಲಕ ಮತದಾರರ ಎದುರು ತಮ್ಮ ಫೇಸ್‌ಬುಕ್ ಖಾತೆ ಮೂಲಕ ತಿರುವು ನೋಡುವ ಪ್ರಯತ್ನ ಮಾಡಿದ್ದಾರೆ. ಅದರ ಪೂರ್ಣ ಪಾಠ ಇಲ್ಲಿದೆ.
ಅಂದಾಜು 23 ವರ್ಷಗಳ ನನ್ನ ರಾಜಕೀಯ ಪಯಣದ ಪೂರ್ಣ ಹಾದಿಯಿಂದ ಹಿಡಿದು, ಬಹುತೇಕ ಮೆಟ್ಟಿಲುಗಳನ್ನು ಒಂದೊಂದಾಗಿ ನನ್ನ ಕ್ಷೇತ್ರದ ಜನರೇ ಏರಿಸಿದ್ದೇ ವಿನಹ, ಮಿಕ್ಕಿದೆಲ್ಲವೂ ಗೌಣ! ಏಳು ಚುನಾವಣೆ ಎದುರಿಸಿ ಆರನೇ ಬಾರಿ ಆಯ್ಕೆಗೊಂಡಿದ್ದೇನೆ. ಹಿಂದಿನ ಅನುಭವಗಳನ್ನು ಹಾಗೂ ತಾವು ಯಾರ್ಯಾರೊಂದಿಗೆ ಸ್ಪರ್ಧಿಸಿದ್ದೆ, ತನ್ನನ್ನು ಜನತೆ ಹೇಗೆ ಪ್ರೋತ್ಸಾಹಿಸಿದರು ಮತ್ತೂಮ್ಮೆ ತಮ್ಮೊಂದಿಗೆ ಹಂಚಿಕೊಂಡಿದ್ದಾರೆ.
ಈ ಬಾರಿಯ ಚುನಾವಣೆ ಇದುವರೆಗಿನ ಎಲ್ಲ ಚುನಾವಣೆಗಿಂತ ಬಹಳ ಭಿನ್ನವಾಗಿತ್ತು. ಜನತೆಯ ತೀರ್ಮಾನ ಕಾಂಗ್ರೆಸ್ ಪಕ್ಷದ ಆತ್ಮಸ್ಥೈರ್ಯವನ್ನೇ ಕುಗ್ಗಿಸಿತ್ತು. ಹಾಗಾಗಿ ಕ್ಷೇತ್ರವನ್ನು ಜನತಾದಳಕ್ಕೆ ಬಿಟ್ಟುಕೊಟ್ಟಿದ್ದರು. ಇದರ ಪರಿಣಾಮ ಜನತೆ ಮತ್ತೂಮ್ಮೆ ನನ್ನ ಪರವಾಗಿ ಕೇವಲ ಅಲ್ಪ ವಿಶ್ವಾಸವಲ್ಲ, ಬದಲಿಗೆ ಅತೀವ ಅಭಿಮಾನದ ಅಂಗೀಕಾರವನ್ನು ಸುಮಾರು 4,77,081 ಮತಗಳ ಅಂತರದಿಂದ ಆಯ್ಕೆ ಮಾಡುವ ಮೂಲಕ ತೀರ್ಮಾನ ನೀಡಿದ್ದಾರೆ.
ಹಾಗೆಂದು, ನಾನು ಸರ್ವಜ್ಞನು ಅಲ್ಲ, ಹಾಗೂ ಸರ್ವಶಕ್ತನೂ ಅಲ್ಲ! ನಾನೊಬ್ಬ ಕೇವಲ ಪಕ್ಷ ಹಾಗೂ ಸಂಘಟನೆಯ ಪ್ರತಿನಿಧಿ! ಈ ಗೆಲುವು ಸಂಪೂರ್ಣವಾಗಿ ನಮ್ಮ ಸಂಘಟನೆ ಹಾಗೂ ಪಕ್ಷದ ಸಿದ್ಧಾಂತಕ್ಕೆ ಸಲ್ಲಬೇಕು!
ಈ ಗೆಲುವಿನ ಮೂಲಕ ಆರು ಬಾರಿ ಸಂಸದನಾಗಿ ಆಯ್ಕೆಯಾಗಿರುವ ಖುಷಿಗಿಂತ, ಕ್ಷೇತ್ರದ ಜನತೆಯ ಸೇವೆಯ ಜವಾಬ್ದಾರಿ ನನ್ನನ್ನು ಇನ್ನಷ್ಟು ವಿನಮ್ರನಾಗಿಸಿದೆ. ನನ್ನ ಕ್ಷೇತ್ರದ ಜನತೆ, ಮತದಾರ ಪ್ರಭು ತೋರಿರುವ ಇಂತಹ ಅಗಾಧ ಔದಾರ್ಯದ ನಂಬಿಕೆ ಮುಂದೆ ನಾನು ಅಕ್ಷರಶಃ ತಲೆ ಬಾಗಿದ್ದೇನೆ.! ಜೊತೆಗೆ ಚುನಾವಣೆ ವೇಳೆಗೆ ಹಗಲೂ ರಾತ್ರಿ ದುಡಿದ, ದಣಿವರಿಯದೆ ಊರೂರು ತಿರುಗಿದ, ಪಕ್ಷಕ್ಕಾಗಿ ಮತ ಯಾಚಿಸಿದ, ನನ್ನನ್ನು ಒಂದಿಷ್ಟೂ ಬಿಟ್ಟು ಕೊಡದೆ ಸಮರ್ಥಿಸಿ ಕೊಂಡು ಎಲ್ಲವನ್ನೂ, ಎಲ್ಲರನ್ನೂ ಎದುರಿಸಿದ ಪರಿವಾರದ ಕಾರ್ಯಕರ್ತರ ಅಖಂಡ ನಿಷ್ಠೆಯ ಮುಂದೆ, ಅವರ ಸೇವಾ ತತ್ಪರತೆ ಮುಂದೆ ಮಾತಿಲ್ಲದೆ ಮೂಕನಾಗಿದ್ದೇನೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
ಮೋದಿ ಅಲೆಯಿಂದಲೇ ಅನಂತಕುಮಾರ್ ಹೆಗಡೆ ಗೆದ್ದರೇ?
ರಾಘವೇಂದ್ರ ಬೆಟ್ಟಕೊಪ್ಪ
ಶಿರಸಿ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಈ ಬಾರಿ ಕರ್ನಾಟಕದಲ್ಲಿ ದಾಖಲೆಯ ಅಂತರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆಲುವಿಗೆ ಕಾರಣವಾಗಿದ್ದು ಕೇವಲ ಮೋದಿ ಅಲೆಯಾ? ಅದೊಂದೇ ಆಗಿದ್ದರೆ ಈ ಪ್ರಮಾಣದಲ್ಲಿ ಗೆಲುವು ಸಾಧ್ಯವಾಗುತ್ತಿತ್ತಾ?
ಇಂಥದೊಂದು ಪ್ರಶ್ನೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸ್ವತಃ ಅನಂತಕುಮಾರ ಹೆಗಡೆ ಅವರಿಗೂ ಕಾಡುವಂತೆ ಆಗಿದೆ. ಮೂರು ಲಕ್ಷ ಮತಗಳ ಅಂತರದಲ್ಲಿ ಗೆಲುವು ಎನ್ನುತ್ತಿದ್ದ ಅನಂತ ಬೆಂಬಲಿಗರ ನಿರೀಕ್ಷೆಗಿಂತ ಒಂದುವರೆ ಲಕ್ಷ ಮತಗಳು ಇನ್ನೂ ಹೆಚ್ಚಲು ಕಾರಣವೇನು ಎಂಬುದು ಕುತೂಹಲ ಗರಿಗೆದರಲು ಕಾರಣವಾಗುತ್ತಿದೆ. ದೇಶದಲ್ಲಿ ನಂಬರ್ 2 ಲೀಡ್‌ನಲ್ಲಿ ಗೆಲುವು ಸಾಧಿಸಿದ ಅನಂತಕುಮಾರ ಹೆಸರೇ ಬಹುತೇಕರಿಗೆ ಚುಂಬಕ ಶಕ್ತಿಯಾಗಲು ಕಾರಣವಾಗಿದೆ ಎಂಬ ವಿಶ್ಲೇಷಣೆ ಕೂಡ ಇದೆ.
ದೂರ ದೂರಗಳಿಂದ, ದುಬೈ, ಅಮೆರಿಕಾ, ಜರ್ಮನಿ ಸೇರಿದಂತೆ ವಿವಿಧೆಡೆಯಿಂದ ಮತದಾರರು ಆಗಮಿಸಿ ಮತದಾನ ಮಾಡಿದ್ದರು. ಎಷ್ಟೋ ಕಡೆ ಮತವಾಗಿ ಪರಿವರ್ತನೆ ಆಗಲು ರಾಷ್ಟ್ರವನ್ನು ಪುನಃ ಪ್ರಪಂಚದ ಗುರುವಾಗಿಸಲು ಮೋದಿ ಬೆಂಬಲಿಸಿದ್ದಾಗಿ ಹೇಳಿಕೆಗಳೂ ವ್ಯಕ್ತವಾಗಿದ್ದವು.
ಕಾರವಾರಕ್ಕೆ ನಿರ್ಮಲಾ ಸೀತಾರಾಮ, ಶಿರಸಿ, ಸಿದ್ದಾಪುರ, ಯಲ್ಲಾಪುರಕ್ಕೆ ಮಾಳವಿಕಾ ಅವಿನಾಶ ಹೊರತುಪಡಿಸಿ ಉಳಿದವರಾರ್ಯರೂ ಸ್ಟಾರ್ ಪ್ರಚಾರಕರು ಬಂದಿಲ್ಲ. ಚಿಕ್ಕೋಡಿಗೆ ಮೋದಿ ಅವರು ಬಂದಾಗಲೂ ಬೆಳಗಾವಿಯ ಎರಡು ತಾಲೂಕು ಒಳಗೊಂಡ ಉತ್ತರ ಕನ್ನಡದ ಅಭ್ಯರ್ಥಿ ಕೂಡ ಹೋಗಿರಲಿಲ್ಲ. ಆದರೂ ಅನಂತಕುಮಾರ ಅವರನ್ನು ಈ ಪ್ರಮಾಣದಲ್ಲಿ ಬೆಂಬಲಿಸಿದ್ದು ಈಗ ಬಯಲಾಗಿದೆ. ಸ್ಟಾರ್ ಪ್ರಚಾರಕರು ಕ್ಷೇತ್ರಕ್ಕೆ ಬೇಡ ಎಂದು ಸ್ವತಃ ಅನಂತ್ ಹೇಳಿದ್ದರೂ ಕೇಂದ್ರ ಬಿಜೆಪಿ ಇಬ್ಬರನ್ನು ಕಳಿಸಿದ್ದು ಸಣ್ಣ ಆತಂಕದಿಂದಲೇ. ಕಾಂಗ್ರೆಸ್, ಜೆಡಿಎಸ್ ಸೇರಿ ಬಿಜೆಪಿ ಕಮಲಕ್ಕೆ ಏಟಾಗಬಹುದು ಎಂಬ ಆತಂಕದಿಂದಲೂ ಸೀಬರ್ಡ್ ಪ್ರದೇಶಕ್ಕೆ ನೆರವಾದ ನಿರ್ಮಲಾ ಅವರನ್ನು ಮತಯಾಚನೆಗೆ ಕಳಿಸಿತ್ತು.
ಬಿಜೆಪಿ ಗೆಲುವಿಗೆ ಕೇವಲ ಮೋದಿ ಅಲೆ ಕಾರಣವಲ್ಲ. ಬದಲಿಗೆ ಅನಂತಕುಮಾರ ಹೆಗಡೆ ಎದುರಿಗೂ ಕಾಂಗ್ರೆಸ್ ಅಭ್ಯರ್ಥಿ ಇಲ್ಲದೇ ಜೆಡಿಎಸ್ ಅಭ್ಯರ್ಥಿ ಹಾಕಿದ್ದೂ ಕಾರಣವಾಗಿದೆ. ಆನಂದ ಅಸ್ನೋಟಿಕರ್ ಅನಂತ ಎದುರಿಗೆ ಕಡಿಮೆ ಅವಧಿಯಲ್ಲಿ ಅಭ್ಯರ್ಥಿ ಹಾಕಿಸಿದ್ದು, ಕಾಂಗ್ರೆಸ್ ಜೆಡಿಎಸ್ ಸಂಘಟನೆ ಕೊನೇ ಕ್ಷಣದ ತನಕ ಆಗದೇ ಇರುವುದೂ, ಜೆಡಿಎಸ್‌ಗೆ ಅಭ್ಯರ್ಥಿ ಸ್ಥಾನ ಕೊಟ್ಟು, ಹಠ ಮಾಡಿ ದೇವೇಗೌಡರು ಸೀಟ್ ಕೊಡಿಸಿದ್ದು ಸೋಲಿಗೆ ಕಾರಣವಾಗಿದೆ.
ಅನಂತಕುಮಾರ ಪ್ರಖರ ಹಿಂದುತ್ವವಾದಿ ಆಗಿದ್ದರಿಂದ, ಪರೇಶ ಮೇಸ್ತಾ ಪ್ರಕರಣದ ಬಳಿಕ ಪರಿಣಾಮಗೊಂಡ ಹಿಂದುತ್ವದ ಅಲೆಯನ್ನು ಹಿಡಿದಿಟ್ಟುಕೊಂಡಿದ್ದು ಕೂಡ ಮತ ಹೆಚ್ಚಲು ಕಾರಣ ಎನ್ನಲಾಗುತ್ತಿದೆ.
ಅಸ್ನೋಟಿಕರ್ ಸೋಲಿಗೆ ಕಾರಣ ಎಂದರೆ ಎಂಟು ವಿಧಾನ ಸಭಾ ಕ್ಷೇತ್ರಕ್ಕೆ ಪರಿಚಿತ ವ್ಯಕ್ತಿ ಆಗದೇ ಇರುವುದು, ಪಕ್ಷಾಂತರಿ ಆಗಿರುವದು, ಪದೇ ಪದೇ ಎದುರು ಅಭ್ಯರ್ಥಿಯನ್ನು ಏಕ ವಚನದಲ್ಲಿ ಸಂಬೋಧಿಸಿದ್ದು ಕೂಡ ಉಳಿದ ಮತಗಳು ಸೇರಲು ಕಾರಣವಾಗಿದೆ.
ದೇಶಪಾಂಡೆ ಅವರು ಮುದುಕ ಎಂದು ಹೇಳಿದ್ದು ಕಾಂಗ್ರೆಸ್ಸಿಗರು ಮರೆತಿರಲಿಲ್ಲ. ಕಾಂಗ್ರೆಸ್ ನಾಯಕರನ್ನು ಸೇರಿಸುವುದೇ ದೊಡ್ಡ ಸಮಸ್ಯೆ ಆಗಿದ್ದೂ ಅಸ್ನೋಟಿಕರ್‌ಗೆ ಸೋಲಲು ಕಾರಣವಾಗಿದೆ. ಜೆಡಿಎಸ್ ಪಕ್ಷವೇ ಬಲಿಷ್ಠ ಇಲ್ಲದೆಡೆ ಅಭ್ಯರ್ಥಿ ಆಗಿದ್ದೂ ಹಿನ್ನಡೆಯಾಗಿದೆ.
ನಮ್ಮ ಪ್ರಮುಖರು, ಕಾರ್ಯಕರ್ತರು ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡಿದ್ದರೆ ಇನ್ನೂ ಅಧಿಕ ಮತಗಳ ಅಂತರದ ಗೆಲುವು ಸಾಧ್ಯವಾಗುತ್ತಿತ್ತು ಎಂಬ ಮಾತುಗಳೂ ಬಿಜೆಪಿ ಅವಲೋಕನ ಸಭೆಯಲ್ಲಿ ಕೇಳಿ ಬಂದಿದ್ದೂ ಉಲ್ಲೇಖನೀಯ. ಅನಂತಣ್ಣ ಜಿಲ್ಲೆಯಲ್ಲಿ ಇನ್ನೂ ಹೆಚ್ಚೆಚ್ಚು ಸಂಪರ್ಕ ಇಟ್ಟುಕೊಳ್ಳಬೇಕು ಎನ್ನುವ ಮಾತುಗಳು ವ್ಯಕ್ತವಾಗಿದೆ. ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಕೂಡ ತರಲಿ ಎಂಬುದು ಹಕ್ಕೊತ್ತಾಯ ಕೇಳಿ ಬಂದಿದೆ. ಮೋದಿ ಅಲೆಯ ಜೊತೆಗೆ ಅನಂತಕುಮಾರ ಹೆಗಡೆ ಅವರನ್ನು ಕೈ ಹಿಡಿದದ್ದು ಪ್ರಖರ ಹಿಂದುತ್ವವಾದಿ ಅನ್ನೋದಕ್ಕಾ? ಏಕೆಂದರೆ, ಮೋದಿ ಅವರಿಗಿಂತ ಹೆಚ್ಚು ಲೀಡ್ ಸಿಕ್ಕಿದ್ದು ಈ ಶಂಕೆಯನ್ನೂ ಹುಟ್ಟಿಸಿದ್ದು ಸುಳ್ಳಲ್ಲ.