ಕಾಳಗಿ: ಸಮೀಪದ ಸುಕ್ಷೇತ್ರ ಸುಗೂರ(ಕೆ) ಗ್ರಾಮದ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ವೈಕುಂಠ ಏಕಾದಶಿ ಉತ್ಸವ ಸಾವಿರಾರು ಭಕ್ತ ಸಮೂಹದ ಮಧ್ಯೆ ವಿಜೃಂಭಣೆಯಿಂದ ಜರುಗಿತು. ಶುಕ್ರವಾರ ನಸುಕಿನ ಜಾವ 4ಗಂಟೆಗೆ ಮೆರವಣಿಗೆ ಮೂಲಕ ಪುಷ್ಕರಣಿಯಿಂದ ತಂದ ಜಲದಿಂದ ವೆಂಕಟೇಶ್ವರ ಮೂರ್ತಿಗೆ ವಿಶೇಷ ಅಭಿಷೇಕ, ಅರ್ಚನೆ, ಮಹಾ ಮಂಗಳಾರತಿ ನಡೆಯಿತು.
ಸುಮಾರು 13 ಕ್ವಿಂಟಲ್ ಸಪ್ತ ಪ್ರಕಾರದ ಹೂಗಳಿಂದ ವಿಶೇಷ ಅಲಂಕಾರ ಮಾಡಿದ ಉತ್ತರ ದ್ವಾರವನ್ನು ತಿರುಮಲ ತಿರುಪತಿಯ ಅರ್ಜುನದಾಸ ಮಹಾರಾಜರು, ಕೃಷ್ಣದಾಸ ಮಹಾರಾಜರು, ಪವಾನದಾಸ ಮಹಾರಾಜರ ನೇತೃತ್ವದಲ್ಲಿ ಲಕ್ಷ್ಮೀ ಪದ್ಮಾವತಿ ಹಾಗೂ ವೆಂಕಟೇಶ್ವರನಿಗೆ ಸಹಸ್ರ ಪೂಜೆ ಮಾಡುವುದರ ಮೂಲಕ ಭಕ್ತರಿಗೆ ಉತ್ತರ ದ್ವಾರ ದರ್ಶನಕ್ಕೆ ಚಾಲನೆ ನೀಡಿದರು.
ರಾಜ್ಯದ ವಿವಿಧೆಡೆಯಿಂದ ಹರಿದು ಬಂದ ಸಾವಿರಾರು ಸಂಖ್ಯೆಯ ಭಕ್ತರು ಹೂವಿನಿಂದ ಅಲಂಕಾರ ಮಾಡಿದ ದ್ವಾರದ ಮೂಲಕ ಆಗಮಿಸಿ ಉತ್ತಾರಾಭಿಮುಖವಾಗಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದುಕೊಂಡರು. ನಂತರ ವಿವಿಧೆಡೆಯಿಂದ ಆಗಮಿಸಿದ ಭಕ್ತರು ಈ ಭಾಗದ ಐತಿಹಾಸಿಕ ದೇವಸ್ಥಾನಗಳಾದ ನೀಲಕಂಠ ಕಾಳೇಶ್ವರ, ಅಣವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದುಕೊಂಡರು.
ರಾತ್ರಿ ವೆಂಕಟೇಶ್ವರ ದೇವಸ್ಥಾನದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರಿಂದ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಭಜನೆ-ಕೀರ್ತನೆಗಳು ನಡೆದವು.
ವಿಸ್ಮಯ ಭತ್ತದ ಮಹಾಪ್ರಸಾದ: ಶನಿವಾರ ದ್ವಾದಶಿ ದಿನವಾದ ಶುಕ್ರವಾರ ಬೆಳಗ್ಗೆ ವೆಂಕಟೇಶ್ವರ ಮೂರ್ತಿಗೆ ವಿಶೇಷ ಅಭಿಷೇಕ, ಅರ್ಚನೆ, ಮಂಗಳಾರತಿ ನಡೆಯುವುದು. ನಂತರ ದೇವಸ್ಥಾನ ಪಕ್ಕದ ಸುವರ್ಣಗಿರಿ ಬೆಟ್ಟದ ಮೇಲೆ ಬಿತ್ತದೆ, ಉಳುಮೆ ಮಾಡದೆ ಬೆಳೆದಿರುವ ವಿಸ್ಮಯಕಾರಿ ಭತ್ತದದಿಂದ ಬಂದಿರುವ ಅಕ್ಕಿಯಿಂದ ಮಹಾಪ್ರಸಾದ ವಿತರಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪ್ರಸಾದವನ್ನು ಸ್ವೀಕರಿಸಿ ಪುನೀತರಾಗಬೇಕು ಎಂದು ತಿಳಿಸಿದ್ದಾರೆ.
ದೇವಸ್ಥಾನ ಪ್ರಧಾನ ಅರ್ಚಕ ಪವನದಾಸ ಮಹಾರಾಜ, ಕೇಶವದಾಸ ಮಹಾರಾಜ, ಬಾಲಕದಾಸ ನಾಗಾಸಾಧು, ಪರಮೇಶ್ವರ ಪಾಟೀಲ, ಚಂದ್ರಕಾಂತ ರೆಮ್ಮಣಿ, ದತ್ತಾತ್ರೇಯ ಮುಚ್ಚಟ್ಟಿ, ಜಗನ್ನಾಥ ಕೊಳ್ಳಿ, ಖೇಮು ರಾಠೊಡ, ಹಣಮಂತರಾವ ಮುಚ್ಚಟ್ಟಿ, ಸಿದ್ದು ಕೇಶ್ವರ, ಉದಯಕುಮಾರ ಹಡಪಾದ ಇದ್ದರು. ಕಲಬುರಗಿಯ ಸರದಾರ ವಲ್ಲಭಬಾಯಿ ಪಟೇಲ್ ಮೆಮೊರಿಯಲ್ ಶಾಲೆಯ ಸ್ಕೌಡ್ಸ್ ಗೈಡ್ಸ್ ವಿದ್ಯಾರ್ಥಿಗಳು ಹಾಗೂ ಕಾಳಗಿ ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ದೇವಸ್ಥಾನ ಆವರಣದಲ್ಲಿ ಶಿಸ್ತನ್ನು ಕಾಪಾಡಿದರು.