ಚಿಕ್ಕೋಡಿ: ಭಾರತ ಗೌರವ ಆಚಾರ್ಯ ರತ್ನ ಶ್ರೀ 108 ದೇಶಭೂಷಣ ಮಹಾರಾಜರ ಚಿಕ್ಕೋಡಿ ತಾಲೂಕಿನ ಕೊಥಳಿ -ಕುಪ್ಪಾನವಾಡಿ ಶಾಂತಿಗಿರಿ ಟ್ರಸ್ಟ್ ಮತ್ತು ಬೇಡಕಿಹಾಳ ಗ್ರಾಮದ ಪ್ರೀತಿಯ “ಉಷಾರಾಣಿ” ಎಂಬ ಆನೆ ಶನಿವಾರ(ಆಗಸ್ಟ್10) ಮಧ್ಯಾಹ್ನ 55 ನೇ ವಯಸ್ಸಿಗೆ ಹೃದಯಘಾತದಿಂದ ನಿಧನ ಹೊಂದಿದೆ. ಇದರಿಂದ ಕರ್ನಾಟಕ-ಮಹಾರಾಷ್ಟ್ರದ ಗಡಿ ಭಾಗದ ಕೊಥಳಿ -ಕುಪ್ಪಾನವಾಡಿಯಲ್ಲಿ ಶೋಕ ಮಡುಗಟ್ಟಿದೆ.
ಶ್ರೀ ಆಚಾರ್ಯ ರತ್ನ ದೇಶಭೂಷಣ ದಿಗಂಬರ ಜೈನ ಶಾಂತಿಗಿರಿ ಟ್ರಸ್ಟ್ ವತಿಯಿಂದ 1971 ರಲ್ಲಿ 5 ರಿಂದ 6 ವರ್ಷ ವಯಸ್ಸಿನ ಉಷಾರಾಣಿ ಆನೆನ್ನು ಕರ್ನಾಟಕದ ಸಕ್ರೆಬೆಲ್ ಆನೆ ಕೇಂದ್ರದಿಂದ ತರಲಾಗಿತ್ತು. ಕಳೆದ 50 ವರ್ಷಗಳಿಂದ ಬೆಳಗಾವಿ, ಕೊಲ್ಹಾಪುರ, ಸಾಂಗಲಿ, ಜಿಲ್ಲೆಯಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು, ಇವರೊಂದಿಗೆ ಸ್ವಾಮಿ ಸಮರ್ಥ ಚಲನಚಿತ್ರ, ಜಾನತಾ ರಾಜಾ ಮಹಾನಾಟ್ಯ, ರಾಜಶ್ರೀ ಛತ್ರಪತಿ ಶಾಹು ಮಹಾರಾಜರ ಧಾರಾವಾಹಿಯಲ್ಲಿ ಈ ಉಷಾರಾಣಿಗೆ ಮಹತ್ವದ ಸ್ಥಾನ ಲಭಿಸಿ ಗಡಿ ಭಾಗದಲ್ಲಿ ಭಾರಿ ಹೆಸರುಗಳಿಸಿತ್ತು.
ಆನೆ ಕೋಥಳಿ ಶಾಂತಿಗಿರಿ ಟ್ರಸ್ಟ್ ಗೆ ಸೇರಿದ್ದರೂ ಬೇಡಕಿಹಾಳದ ಸಂದೀಪ್ ಪೊಲೀಸ್ ಪಾಟೀಲ್ ಅವರ ಜಾಗದಲ್ಲಿ ವಾಸವಾಗಿತ್ತು. ವಿಶೇಷವಾಗಿ ಈ ಉಷಾರಾಣಿಯು ಬೇಡಕಿಹಾಳದ ಗ್ರಾಮ ದೇವರಾದ ಶ್ರೀ ಕಲ್ಯಾಣ ಸಿದ್ಧೇಶ್ವರನ ಐತಿಹಾಸಿಕ ದಸರಾ ಹಬ್ಬ, ದೀಪಾವಳಿ ಮತ್ತು ಧೂಳವಡ ಪಲ್ಲಕಿ ಆಚರಣೆಯ ಕೇಂದ್ರ ಬಿಂದುವಾಗಿತ್ತು.
ಈ ಆನೆಯ ಸೂಕ್ಷ್ಮ ಬುದ್ಧಿವಂತಿಕೆಯಿಂದಾಗಿ, ಒಮ್ಮೆ ನೋಡಿದ ವ್ಯಕ್ತಿಯನ್ನು ಅದು ಎಂದಿಗೂ ಮರೆಯುವುದಿಲ್ಲ. ಮಾವುತ ಬಾಸು ಲಕ್ಷ್ಮೀಶ್ವರ್ ಅವರು ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ಈ ಆನೆಯನ್ನು ನೋಡಿಕೊಳ್ಳುತ್ತಿದ್ದರು. ಅವರ ದೈನಂದಿನ ಸ್ನಾನ, ವಾರಕ್ಕೊಮ್ಮೆ ವೈದ್ಯಕೀಯ ಆರೈಕೆ, ಶುದ್ಧ ನೀರು, ಆಹಾರದ ಬಗ್ಗೆ ವಿಶೇಷ ಗಮನ ಹರಿಸಲಾಗುತ್ತಿತ್ತು. ಉಷಾರಾಣಿ ದಿಢೀರ್ ಅಗಲಿರುವುದರಿಂದ ಬೇಡಕಿಹಾಳ ಸೇರಿದಂತೆ ಗಡಿ ಭಾಗದಲ್ಲಿ ಶೋಕ ಮಡುಗಟ್ಟಿದೆ.
ಘಟನೆಯ ಮಾಹಿತಿ ಸಿಕ್ಕಿದ ನಂತರ ಶಾಂತಿಗಿರಿ ಟ್ರಸ್ಟ್ನ ಪದಾಧಿಕಾರಿಗಳು, ಶ್ರೀ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಕ್ಷೇತ್ರದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜೈನ ಸಮಾಜದ ಶ್ರಾವಕ-ಶ್ರಾವಕಿಯರು. ಗ್ರಾ.ಪಂ.ಅಧ್ಯಕ್ಷರು ಎಲ್ಲ ಸದಸ್ಯರು, ಮತ್ತು ಗ್ರಾಮಸ್ಥರು ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.
ಚಿಕ್ಕೋಡಿ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು .ಈ ವೇಳೆ ಸಂಜೆ 6 ಗಂಟೆಯ ನಂತರ ಕ್ರೇನ್ ಮೂಲಕ ಅರಣ್ಯ ಇಲಾಖೆಯ ವಾಹನದಲ್ಲಿ ಪಾರ್ಥಿವ ಶರೀರವನ್ನು ಹಾಕಿ ಬೆಡಕಿಹಾಳ ವೃತ್ತದಿಂದ ಹಳೆ ಬಸ್ ನಿಲ್ದಾಣದವರೆಗೆ ಅಂತಿಮ ಯಾತ್ರೆ ನಡೆಸಿ ಕೋಥಳಿ ಶಾಂತಿಗಿರಿಯ ಬೆಟ್ಟಕ್ಕೆ ಪಾರ್ಥಿವ ಶರೀರವನ್ನು ಸ್ಥಳಾಂತರಿಸಲಾಯಿತು. ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಮತ್ತು ಸರ್ಕಾರಿ ಪಶುವೈದ್ಯರಿಂದ ಮರಣೋತ್ತರ ಪರೀಕ್ಷೆ ಮಾಡಿ ವಿಧಿವಿಧಾನದ ನಂತರ ಅಂತ್ಯಸಂಸ್ಕಾರ ನಡೆಯಿತು.