ಬೀದರ: ಲೋಹದ ಹಕ್ಕಿಗಳಲ್ಲಿ ಹಾರಾಟಬೇಕೆಂಬ ಬಿಸಿಲೂರಿನ ಜನರ ದಶಕಗಳ ಕನಸು ನನಸಾಗಿ ಇಂದಿಗೆ (ಫೆ.7ಕ್ಕೆ) ವರ್ಷ ತುಂಬಿದ್ದು, ಕೋವಿಡ್-19 ಲಾಕ್‌ಡೌನ್ ನಡುವೆಯೂ ವಿಮಾನಯಾನದಲ್ಲಿ ಉತ್ತಮ ಸ್ಪಂದನೆ ದೊರೆತಿದೆ. ಬೀದರ ವಿಮಾನ ನಿಲ್ದಾಣ ಆರಂಭಗೊಂಡ ಒಂದು ವರ್ಷದ ಅವಧಿಯಲ್ಲಿ 6923 ಪ್ರಯಾಣಿಕರು ವಿಮಾನಯಾನದ ಪ್ರಯೋಜನ ಪಡೆದಿದ್ದಾರೆ.
ಯುದ್ಧ ವಿಮಾನಗಳ ತರಬೇತಿ ನೆಲೆಯಾಗಿರುವ ಬೀದರನಲ್ಲಿ ವಿಮಾನಯಾನ ಆರಂಭವಾಗಬೇಕೆಂಬುದು ದಶಕಗಳ ಬೇಡಿಕೆ ಆಗಿತ್ತು. ಬೆಂಗಳೂರಿನಿಂದ ಗಡಿನಾಡು ಬೀದರ ಬಹಳಷ್ಟು ದೂರದಲ್ಲಿ ಇದೆ. ಹಾಗಾಗಿ, ಇಲ್ಲಿನ ವಿಮಾನಯಾನ ಸೇವೆ ಶುರುವಾಗಬೇಕೆಂಬ ಕನಸು ಇತ್ತು. ನಿರಂತರ ಹೋರಾಟದ ಫಲವಾಗಿ 2020ರಲ್ಲಿ ಸಿಎಂ ಯಡಿಯೂರಪ್ಪ ಅವರಿಂದ ವಿಮಾನ ನಿಲ್ದಾಣ ಲೋಕಾರ್ಪಣೆಯೊಂದಿಗೆ ಆಶಯ ಸಾಕಾರಗೊಂಡಿತು. ಏರ್ ಫೋರ್ಸ್‌ಗೆ ಹೊಂದಿಕೊಂಡಿರುವ 21.6 ಎಕರೆ ವಿಶಾಲವಾದ ಭೂಮಿಯಲ್ಲಿ ರಾಜ್ಯದ 7ನೇ ನಾಗರಿಕ ವಿಮಾನ ನಿಲ್ದಾಣ ನಿರ್ಮಾಣಗೊಂಡು ವಿಮಾನ ಹಾರಾಟ ಶುರುವಾಗಿದೆ.
ಅಡಿಗಲ್ಲು ಹಾಕಿದ್ದ ಬಿಎಸ್‌ವೈ ಉದ್ಘಾಟನೆ: ಬೀದರ-ಕಮಠಾಣಾ ರಸ್ತೆಯಲ್ಲಿ ಚಿದ್ರಿ ಬಳಿ 2009ರಲ್ಲಿ ಅಡಿಗಲ್ಲು ಹಾಕಿದ್ದ ಆಗಿನ ಸಿಎಂ ಯಡಿಯೂರಪ್ಪ ಅವರಿಂದಲೇ ವಿಮಾನ ನಿಲ್ದಾಣ ಉದ್ಘಾಟನೆಗೊಂಡಿರುವುದು ವಿಶೇಷ. ಏರ್ ಟರ್ಮಿನಲ್ ಸಿದ್ದವಿದ್ದರೂ ವಿಮಾನ ಹಾರಾಟಕ್ಕೆ ಅಡ್ಡಿಯಾಗಿದ್ದ ಜಿಎಂಆರ್ ಕಂಪನಿ ಜತೆಗಿನ ವಿಮಾನ ಪ್ರಾಧಿಕಾರದ ಹಳೆ ಒಪ್ಪಂದ ವಿವಾದ ಕಂಗ್ಗಟ್ಟಾಗಿತ್ತು. ನಂತರ “ಉಡಾನ್’ನಡಿ ಬೀದರ ಮೊದಲ ಹಂತದಲ್ಲೇ ಆಯ್ಕೆಯಾದರೂ ವಿಮಾನ ಮಾತ್ರ ಹಾರಾಡಲಿಲ್ಲ.
ಬಳಿಕ ಸ್ಥಳೀಯ ಸಂಸದ ಭಗವಂತ ಖೂಬಾ ನಿರಂತರ ಪ್ರಯತ್ನದಿಂದಾಗಿ ಎಲ್ಲ ವಿಘ್ನಗಳು ನಿವಾರಣೆಯಾಗಿತ್ತು. ಕೇಂದ್ರ ಸರ್ಕಾರದ ಪ್ರಾದೇಶಿಕ ಸಂಪರ್ಕಯೋಜನೆಯ ಮೊದಲ ಹಂತದಲ್ಲೇ ಬೀದರ ವಿಮಾನ ನಿಲ್ದಾಣ ಆಯ್ಕೆಯಾಗಿದೆ. ಹೈದ್ರಾಬಾದ್ ನಿಲ್ದಾಣದ ಉಸ್ತುವಾರಿ ಹೊತ್ತಿರುವ ಜಿಎಂಆರ್ ಸಂಸ್ಥೆಯೇ ಬೀದರ ಟರ್ಮಿನಲ್‌ನ ಕಾರ್ಯಾಚರಣೆ ಮತ್ತು ನಿರ್ವಹಣೆ ಮಾಡುತ್ತಿದೆ. ಏರ್ ಟರ್ಮಿನಲ್ ಮಾತ್ರ ಭಾರತೀಯ ವಿಮಾನ ನಿಲ್ದಾಣ ಪ್ರಾಧಿ ಕಾರದ ಅಧಿನಕ್ಕೆ ಒಳಪಟ್ಟಿದ್ದು, ಉಳಿದಂತೆ ವಿಮಾನಯಾನಕ್ಕಾಗಿ ಏರ್ ಫೋರ್ಸ್‌ನಲ್ಲಿ ಲಭ್ಯವಿರುವ ರನ್‌ವೇ ಮತ್ತು ವಿಮಾನಯಾನ ದಿಕ್ಸೂಚಿ (ವೈಮಾನಿಕ ಸಂಚಾರ) ಕೇಂದ್ರವನ್ನೇ ಬಳಸಿಕೊಳ್ಳಲಾಗುತ್ತಿದೆ.
6923 ಜನ ಪ್ರಯಾಣ: 70 ಆಸನಗಳ ಸೌಲಭ್ಯವುಳ್ಳ ಟ್ರೂಜೆಟ್ ಸಂಸ್ಥೆ ಬೀದರ-ಬೆಂಗಳೂರು ನಡುವೆ ವಿಮಾನ ಹಾರಿಸುತ್ತಿದ್ದು, 1.40 ಗಂಟೆ ಪ್ರಯಾಣದ ಅವಧಿ ಹೊಂದಿದೆ. ಆರಂಭದಲ್ಲಿ ವಾರದ 7 ದಿನಗಳ ಕಾಲ ಲಭ್ಯವಿದ್ದ ವಿಮಾನ ಸೇವೆ ನಂತರ ಕೋವಿಡ್ -19 ಲಾಕ್‌ಡೌನ್‌ನಿಂದ 2 ತಿಂಗಳು ವಿಮಾನಯಾನ ಸೇವೆ ಸ್ಥಗಿತಗೊಂಡಿತ್ತು. ಲಾಕ್‌ಡೌನ್ ತೆರವು ಬಳಿಕ ವಾರದಲ್ಲಿ ಕೇವಲ 2 ದಿನ ಮಾತ್ರ ಸೇವೆ ನೀಡಿದ್ದ ಟ್ರೂಜೆಟ್ ಸಂಸ್ಥೆ, ಕಳೆದ ನವೆಂಬರನಿಂದ ವಾರದಲ್ಲಿ 4 ದಿನ ವಿಮಾನ ಹಾರಾಟ ನಡೆಸುತ್ತಿದೆ. ಕೋವಿಡ್ ಲಾಕ್‌ಡೌನ್ ನಡುವೆಯೂ ಕಳೆದ ಒಂದು ವರ್ಷದಲ್ಲಿ 166 ವಿಮಾನಗಳ ಹಾರಾಟ ನಡೆದಿದ್ದು, 6923 ಪ್ರಯಾಣಿಕರು ಸೇವೆಯನ್ನು ಪಡೆದಿದ್ದಾರೆ.
ಬೀದರನಿಂದ ರಾಜಧಾನಿಗೆ ವಿಮಾನಯಾನ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬೀದರ ವಿಮಾನ ನಿಲ್ದಾಣದಿಂದ ಮುಂಬೈ, ಪುಣೆ, ದೆಹಲಿ ಮತ್ತು ಅಮೃತಸರ್‌ಗೆ ವಿಮಾನ ಹಾರಾಡಬೇಕೆಂಬ ಬೇಡಿಕೆಯಿದೆ. ಬೀದರ ನಿಲ್ದಾಣದ ಕಾರ್ಯಾಚರಣೆಯ ಜವಾಬ್ದಾರಿ ಹೊತ್ತಿರುವ ಜಿಎಂಆರ್ ಸಂಸ್ಥೆ ನಿರ್ಧಾರ ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿ ಧಿಗಳು ಪ್ರಯತ್ನಿಸಬೇಕಿದೆ.
ಕೋವಿಡ್ ಲಾಕ್‌ಡೌನ್ ನಡುವೆಯೂ ಬೀದರನಿಂದ ವಿಮಾನಯಾನ ಸೇವೆಗೆ ಉತ್ತಮ ಸ್ಪಂದನೆ ದೊರೆತಿದೆ. ವಿಮಾನ ನಿಲ್ದಾಣ ಉದ್ಘಾಟನೆಗೊಂಡ ಒಂದು ವರ್ಷದ ಅವಧಿಯಲ್ಲಿ 166 ವಿಮಾನಗಳ ಹಾರಾಟ ಆಗಿದ್ದು, 6923 ಜನರು ಪ್ರಯಾಣಿಸಿದ್ದಾರೆ. ಸದ್ಯ ವಾರದಲ್ಲಿ 4 ದಿನ ಬೀದರ-ಬೆಂಗಳೂರು ನಡುವೆ ವಿಮಾನಯಾನ ಸೇವೆ ನೀಡಲಾಗುತ್ತಿದೆ.
ಅವಿನಾಶ, ವ್ಯವಸ್ಥಾಪಕರು, ಟ್ರೂಜೆಟ್ ವಿಮಾನ ಸಂಸ್ಥೆ
ಶಶಿಕಾಂತ ಬಂಬುಳಗೆ