Advertisement

ಮೂರು ದಿನಗಳ ಜಿಲ್ಲಾ ಅಕ್ಷರ ಜಾತ್ರೆಗೆ ಸಂಭ್ರಮದ ತೆರೆ 

11:40 AM Mar 08, 2018 | Team Udayavani |

ಸುಬ್ರಹ್ಮಣ್ಯ (ಕೊಳಂಬೆ ಪುಟ್ಟಣ್ಣ ಗೌಡ ವೇದಿಕೆ) : ಅಂಗಡಿಗುಡ್ಡೆಯ ಕೊಳಂಬೆ ಪುಟ್ಟಣ್ಣ ಗೌಡ ವೇದಿಕೆಯಲ್ಲಿ ಮೂರು ದಿನಗಳ ಕಾಲ ನಡೆದ 22ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಬುಧವಾರ ಸಮಾರೋಪಗೊಂಡಿತು.

Advertisement

ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆದು, ಹಲವು ಆಯಾಮಗಳಲ್ಲಿ ಸಾಹಿತ್ಯದ ಕಂಪು ಜಿಲ್ಲೆಯ ವಿವಿಧ ಭಾಗಗಳಿಗೆ ಪಸರಿಸಿತ್ತು. ಮೊದಲ ದಿನ ಕನ್ನಡ ಭುವನೇಶ್ವರಿ ದಿಬ್ಬಣ ವೈಭವದೊಂದಿಗೆ ಆರಂಭಗೊಂಡು ಅನಂತರ ಅಕ್ಷರ ಜಾತ್ರೆಯಲ್ಲಿ ವಿವಿಧ ಗೋಷ್ಠಿ, ಚಿಂತನ-ಮಂಥನ, ಸಂವಾದ, ಕವಿಗೋಷ್ಠಿ, ಸಾಂಸ್ಕೃತಿಕ ಸಂಭ್ರಮಗಳು ಸಾಹಿತ್ಯ ಆಸಕ್ತರ ಮನ ಸೆಳೆಯಿತು.

ಸಮಾರೋಪದ ಕ್ಷಣ
ಸಮಾರೋಪದ ದಿನ ಉದಯರಾಗದೊಂದಿಗೆ ಆರಂಭಗೊಂಡ ಸಾಹಿತ್ಯ ಸಂಭ್ರಮದಲ್ಲಿ ಸುಳ್ಯದ ಶಿಲ್ಪಿ ಡಾ| ಕುರುಂಜಿ ವೆಂಕಟರಮಣ ಗೌಡ ಅವರಿಗೆ ಸಾಧಕ ನಮನ, ಮಾಧ್ಯಮ ಸಾಮಾಜಿಕ ಜವಾಬ್ದಾರಿ, ಕವಿಗೋಷ್ಠಿ, ಯಕ್ಷಗಾನ ಗೋಷ್ಠಿ, ಸಮ್ಮೇಳನಾಧ್ಯಕ್ಷರ ಸಾಹಿತ್ಯ ಸಮೀಕ್ಷೆ ಸಂವಾದ, ಡಿವಿಜಿ ಕಗ್ಗ ಕಾವ್ಯವಾಚನ, ಬಹಿರಂಗ ಅಧಿವೇಶನ, ಸಾಧಕರಿಗೆ ಸಂಮಾನ, ಹಾಸ್ಯ ಸಮಯ ನಡೆದು ಸಮಾರೋಪ ಸಮಾರಂಭದೊಂದಿಗೆ ತೆರೆ ಎಳೆಯಲಾಯಿತು.

ಅಕ್ಷರ ಮೇಳ
ಮೂರು ದಿನವೂ ನಿರಂತರವಾಗಿ ಸಾಗಿದ ಕಾರ್ಯಕ್ರಮದಲ್ಲಿ ವಿವಿಧ ಗೋಷ್ಠಿ, ಕವಿನಮನ, ಕೃಷಿ ರಂಗದ ಸವಾಲು, ಸಾಹಿತ್ಯ, ಮಾಧ್ಯಮ ರಂಗದ ಜವಾಬ್ದಾರಿ ಕುರಿತಂತೆ ವಿಷಯ ತಜ್ಞರು ವಿಚಾರ ಮಂಡಿಸಿದರು. 200ಕ್ಕೂ ಅಧಿಕ ಮಂದಿ 25ಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ ನುಡಿ, ಗಾಯನ, ಅಭಿನಯದ ಮೂಲಕ ಸಾಹಿತ್ಯದ ಕಂಪು ಪಸರಿಸಿದರು.

ಬಿಸಿಲಿನ ಝಳ
ಸಮ್ಮೇಳನಕ್ಕೆ ತಟ್ಟಿದ್ದು ಬಿಸಿಲಿನ ಝಳ. ಮಟ-ಮಟ ಮಧ್ಯಾಹ್ನ ಸಾಹಿತ್ಯ ಜಾತ್ರೆಯ ನೆಲದಲ್ಲಿ ನೆತ್ತಿ ಸುಡುತ್ತಿದ್ದ ಬಿಸಿಲಿದ್ದರೂ ಆಸಕ್ತ ಅಕ್ಷರ ಪ್ರೇಮಿಗಳಿಗೆ ಅದು ಭಂಗ ತರಲಿಲ್ಲ. ಕುಲ್ಕುಂದ ಶಿವರಾವ್‌ (ನಿರಂಜನ) ಸಭಾಂಗಣದಲ್ಲಿ ಮೂರು ದಿನವೂ ಸೇರಿ ಆರು ಸಾವಿರಕ್ಕೂ ಅಧಿಕ ಕನ್ನಡ ಪ್ರೇಮಿಗಳು ಪಾಲ್ಗೊಂಡು ಅಕ್ಷರ ಜಾತ್ರೆಗೆ ಸಾಥ್‌ ನೀಡಿದರು. ವೇದಿಕೆ ಮತ್ತು ಸಭಾಂಗಣದಲ್ಲಿ ನೆರೆದು ಮಾತು ಮತ್ತು ಮೌನದಲ್ಲೇ ಅಕ್ಷರ ಸಂಭ್ರಮಕ್ಕೆ ಸಾಕ್ಷಿಯಾದರು.

Advertisement

ಸ್ವಯಂಸೇವಕರ ದಂಡು
ಸಾಹಿತ್ಯ ಸಮ್ಮೇಳನದ ಮೂರು ದಿವಸವೂ ಸಮಿತಿಯ ಜತೆಗೆ ಸ್ವಯಂ ಸೇವಕರಾಗಿ ಸ್ಥಳೀಯ ಕಾಲೇಜು ವಿದ್ಯಾರ್ಥಿಗಳು ಅವಿರತ ಶ್ರಮ ವಹಿಸಿದ್ದರು. ನೂರಾರು ಮಂದಿ ಕಾರ್ಯಕ್ರಮ ಸಾಂಗವಾಗಿ ಸಾಗಲು ಸಹಕಾರ ನೀಡಿದರು.

ಕೊನೆಯ ದಿನದ ಅತಿಥ್ಯ
ನಿತ್ಯ ನಿರಂತರವಾಗಿ ಅನ್ನ ದಾಸೋಹಗೈಯ್ಯುವ ಕುಕ್ಕೆ ಸುಬ್ರಹ್ಮಣ್ಯನ ನೆಲದಲ್ಲಿ, ಸಾಹಿತ್ಯ ಸಂಭ್ರಮದ ಮೂರು ದಿನವೂ ಮೂರು ಹೊತ್ತು ಉಪಾಹಾರ, ಊಟ, ಚಹಾ ತಿಂಡಿ ಸಾಹಿತ್ಯಾಸಕ್ತರ ಉದರ ತುಂಬಿತ್ತು. ಬುಧವಾರ ಬೆಳಗ್ಗೆ 400 ಮಂದಿಗೆ ಹೆಸರು ಕಾಳು, ಅವಲಕ್ಕಿ, ಮೊಸರು ಹಾಗೂ ಚಹಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೆಳಗ್ಗೆ 10ಕ್ಕೆ ಚಹಾ, ತಿಂಡಿ, ಮಧ್ಯಾಹ್ನ 1500 ಮಂದಿಗೆ ಅನ್ನ – ಸಾಂಬಾರು, ಮೆಣಸುಕಾಯಿ, ಬದನೆ, ಅಲೂಗಡ್ಡೆ ಸಾಂಬಾರು, ಮಜ್ಜಿಗೆ ಹುಳಿ, ಶಾವಿಗೆ ಪಾಯಸ, ಜಿಲೇಬಿ, ಮಜ್ಜಿಗೆ ನೀಡಲಾಯಿತು. ಸಾಯಂಕಾಲ ಚಹಾ, ತಿಂಡಿ, ರಾತ್ರಿ 750 ಮಂದಿಗೆ ಅನ್ನ – ಸಾರು, ಸಾಂಬಾರು, ಪಾಯಸ, ಪಲ್ಯ, ಚಟ್ನಿ, ಮಜ್ಜಿಗೆ ನೀಡಲಾಯಿತು.

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next