ಹೊಸಪೇಟೆ: ಸಮಾಜ ಸುಧಾರಣೆಗಾಗಿ ತಮ್ಮನ್ನು ಮುಡುಪಾಗಿಟ್ಟಿಕೊಂಡಿದ್ದ ಸಂತರ, ಶರಣರ ಹಾಗೂ ವಚನಕಾರರ ಜಯಂತಿಗಳು ಇಂದು ಕಾಟಾಚಾರಕ್ಕೆ ಎಂಬಂತೆ ಆಚರಿಸಲಾಗುತ್ತಿದ್ದು, ಯುವಜನರು ಜಯಂತಿಯಲ್ಲಿ ಡಿಜಿಗಳ (ಧ್ವನಿ ವರ್ಧಕ) ಮೂಲಕ ಕುಣಿದು-ಕುಪ್ಪಳಿಸಿ, ಅವರಿಗೆ ಅಗೌರವ ಸೂಚಿಸುತ್ತಿದ್ದಾರೆ ಎಂದು ಶಾಸಕ ಆನಂದ ಸಿಂಗ್ ಬೇಸರ ವ್ಯಕ್ತಪಡಿಸಿದರು.
ಸ್ಥಳೀಯ ಎಂ.ಪಿ. ಪ್ರಕಾಶ ಕಲಾ ಮಂದಿರದಲ್ಲಿ ತಾಲೂಕು ಆಡಳಿತ ಹಾಗೂ ಗಂಗಾಮತ ಸಮಾಜ ಭಾನುವಾರ ಹಮ್ಮಿಕೊಂಡಿದ್ದ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ವರ್ಷವಿಡೀ ಜಯಂತಿ ಆಚರಣೆಗೆ ಮುಂದಾದರೂ ಸಮಾಜ ಬಾಂಧವರು ಹಾಗೂ ಅಧಿಕಾರಿಗಳು, ಅರ್ಥಪೂರ್ಣ ಜಯಂತಿ ಆಚರಣೆ ಮಾಡುವಲ್ಲಿ ವಿಫಲರಾಗಿದ್ದಾರೆ. ಯುವಕರು ಜಯಂತಿ ಮೆರವಣಿಗೆಯಲ್ಲಿ ಕುಡಿದು (ಕುಣಿದು) ಕುಪ್ಪಳಿಸಿ, ಈ ನಾಡಿನ ಮಹನೀಯರಿಗೆ ಅಪಮಾನ ಮಾಡುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ ಎಂದರು.
ಮುಖ್ಯಭಾಷಾಣಕಾರ ಶಿಕ್ಷಕ ಎನ್. ನಾಗರಾಜ, 12ನೇ ಶತಮಾನದಲ್ಲಿ ಪ್ರಗತಿಪರ ಶರಣ ನಡೆಯನ್ನೆ ಪ್ರಶ್ನೆಸಿದ ಬಂಡಾಯ ವಚನಕಾರರಾಗಿ ರೂಪಗೊಂಡ ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಜಾತಿ, ಮೌಡ್ಯ-ಕಂದಾರ ವಿರುದ್ಧ ಜಾಗೃತಿ ಉಂಟುಮಾಡಿದ್ದರು. ಅವರ ವಿಚಾರಧಾರೆ ಹಾಗೂ ತತ್ವ-ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ತಹಶೀಲ್ದಾರ್ ಎಚ್.ವಿಶ್ವನಾಥ, ಗಂಗಾಮತ ಸಮಾಜದ ಅಧ್ಯಕ್ಷ ಅಭಿಮನ್ಯು, ಉಪಾಧ್ಯಕ್ಷ ಮಡ್ಡಿ ಹನುಮಂತಪ್ಪ, ಗೌರವಾಧ್ಯಕ್ಷ ಬಿ.ಸುದರ್ಶನ, ಮಾಜಿ ಅಧ್ಯಕ್ಷ ಎಸ್.ಗಾಳೆಪ್ಪ, ನಗರಸಭೆ ಸದಸ್ಯ ಕೆ.ಗೌಸ್, ಮಾಜಿ ಸದಸ್ಯ ಪೂಜಾರಿ ವೆಂಕಟೇಶ, ಸಮಾಜದ ಮುಖಂಡ ವೈ ಯಮುನೇಶ, ಗೋವಿಂದರಾಜ್, ಮಡ್ಡಿಮಂಜುನಾಥ, ಮುಸ್ಲಿಂ ಸಮಾಜದ ಮುಖಂಡ ಬಸೀರ್ ಅಮ್ಮದ್ ಇದ್ದರು. ನಗರದ ಪ್ರಮುಖ ಬೀದಿಗಳಲ್ಲಿ ಅಂಬಿಗರ ಚೌಡಯ್ಯ ಅವರ ಭಾವಚಿತ್ರ ಮೆರವಣಿಗೆ ನಡೆಯಿತು. ಟಿ.ವೆಂಕೋಬಪ್ಪ ಸ್ವಾಗತಿಸಿದರು.
ಮಾ.ಬ.ಸೋಮಣ್ಣ ನಿರೂಪಿಸಿದರು.
ನಗರಸಭೆ ಆವರಣದಲ್ಲಿರುವ ಎಂ.ಪಿ. ಪ್ರಕಾಶ ಕಲಾಮಂದಿರ ತೀರ ಹದೆಗೆಟ್ಟಿದ್ದು, ಯಾವುದೇ ಕಾರ್ಯಕ್ರಮ ಮಾಡಲು ಯೋಗ್ಯವಿಲ್ಲದಂತಾಗಿದೆ. ಸಭಾಂಗಣದಲ್ಲಿ ಮುರಿದು ಬಿದ್ದಿರುವ ಆಸನಗಳು ಇದಕ್ಕೆ ಸಾಕ್ಷಿ. ಈ ಕಲಾ ಮಂದಿರವನ್ನು ಮರ ನಿರ್ಮಾಣ
ಮಾಡುವ ಮೂಲಕ ಮಾಜಿ ಉಪಮುಖ್ಯಮಂತ್ರಿ ದಿ| ಎಂ.ಪಿ. ಪ್ರಕಾಶ ಅವರ ಹೆಸರಿಗೆ ಇನಷ್ಟು ಗೌರವ ತರುವಂತ ಕೆಲಸ ಮಾಡಲಾಗುವುದು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿ, ಬಜೆಟ್‌ನಲ್ಲಿ ನೂತನ ಕಲಾ ಮಂದಿರ ನಿರ್ಮಾಣಕ್ಕೆ ಅನುದಾನ ನೀಡುವಂತೆ ಕೋರಲಾಗುವುದು. ಆನಂದಸಿಂಗ್, ಶಾಸಕ, ವಿಜಯನಗರ ಕ್ಷೇತ್ರ