ಯಾದಗಿರಿ: ಸುಕ್ಷೇತ್ರ ಅಬ್ಬೆತುಮಕೂರಿನ ಸಿದ್ಧಿ ಪುರುಷ ಶ್ರೀ ವಿಶ್ವಾರಾಧ್ಯರ ರಥೋತ್ಸವ ಲಕ್ಷಾಂತರ ಭಕ್ತರ ಜಯಘೋಷದ ಮಧ್ಯೆ ಸಂಭ್ರಮದಿಂದ ಮಂಗಳವಾರ ಸಂಜೆ ಜರುಗಿತು. ಸುಡು ಬಿಸಿಲಿನಲ್ಲಿಯೂ ಭಕ್ತ ಸಮೂಹ ತಂಡೋಪ ತಂಡವಾಗಿ ಅಬ್ಬೆತುಮಕೂರಿನ ಕಡೆಗೆ ಧಾವಿಸಿ ಬರುತ್ತಿದ್ದರು. ವಾಹನ ಮೂಲಕ ಬರುವರು ಒಂದೆಡೆಯಾದರೆ, ಪಾದಯಾತ್ರೆ ಮೂಲಕ ಭಕ್ತರು ಆಗಮಿಸುವುದು ಕಂಡು ಬಂತು.
ಪೀಠಾಧಿಪತಿ ಶ್ರೀ ಡಾ. ಗಂಗಾಧರ ಮಹಾಸ್ವಾಮಿಗಳು ಸಂಜೆ 6:30 ಗಂಟೆಗೆ ರಥವನ್ನೇರಿ ಚಾಲನೆ ನೀಡುವುದೇ ತಡ, ಭಕ್ತ ವೃಂದ ವಿಶ್ವಾರಾಧ್ಯ ಮಹಾರಾಜ ಕೀ ಜೈ, ಗಂಗಾಧರ ಮಹಾರಾಜ ಕೀ ಜೈ ಎಂಬ ಮುಗಿಲು ಮುಟ್ಟವ ಜಯಘೋಷ ಕೂಗಿ ರಥ ಎಳೆದು ಸಂಭ್ರಮಿಸಿದರು.
ಜಿಲ್ಲೆಯ ಪ್ರತಿಷ್ಠಿತ ಆಧ್ಯಾತ್ಮಿಕ ಕೇಂದ್ರ ಜಾಗೃತ ಸ್ಥಾನವೆಂದು ಖ್ಯಾತವಾದ ಸಿದ್ಧ ಸಂಸ್ಥಾನದ ಶ್ರೀ ವಿಶ್ವಾರಾಧ್ಯರ ಜಾತ್ರೆಗೆ ನೆರೆಯ ಆಂಧ್ರ, ತೆಲಂಗಾಣ, ಮಹಾರಾಷ್ಟ್ರಗಳಿಂದಲೂ ಅಸಂಖ್ಯಾತ ಭಕ್ತರು ಆಗಮಿಸಿ ಆಶೀರ್ವಾದ ಪಡೆದರು. ಜಾತ್ರಾ ಮಹೋತ್ಸವದಲ್ಲಿ ಭಕ್ತರ ಸಾಮಗ್ರಿ ಖರೀದಿ ಜೋರಾಗಿತ್ತು. ಚಿಕ್ಕ-ಚಿಕ್ಕ ಮಕ್ಕಳು ಆಟಿಕೆ ಸಾಮಗ್ರಿ ಕೊಂಡು ಸಂಭ್ರಮಿಸಿದರು.
ಆರೋಗ್ಯ ಇಲಾಖೆ ಸಿಬ್ಬಂದಿ ಭಕ್ತರಿಗೆ ಪ್ರಥಮ ಚಿಕಿತ್ಸೆಗಾಗಿ ಸಿದ್ಧತೆ ಮಾಡಿಕೊಂಡಿತ್ತು. ವಾಹನ ನಿಲುಗಡೆ ವ್ಯವಸ್ಥೆಯನ್ನು ಸ್ವಯಂ ಸೇವಕರು ಮಾಡಿದ್ದರು. ಒಟ್ಟಿನಲ್ಲಿ ಇಡೀ ಜಾತ್ರೆ ಶಾಂತಿ ಸುವ್ಯವಸ್ಥೆಯಿಂದ ನಡೆಯುವಂತೆ ಪೀಠಾಧಿ ಪತಿಗಳು ಸ್ವತಃ ಮುತುವರ್ಜಿ ವಹಿಸಿರುವುದು ಕಂಡು ಬಂದಿತು.
ಜಾತ್ರಾ ಮಹೋತ್ಸವದಲ್ಲಿ ಶ್ರೀ ಕಾಶಿ ಜ್ಞಾನ ಸಿಂಹಾಸನಾ ದೀಶ್ವರ, ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ| ಚಂದ್ರ ಶೇಖರ ಮಹಾಸ್ವಾಮಿಗಳು, ಶಾಸಕ ಡಾ| ಎ.ಬಿ. ಮಾಲಕರೆಡ್ಡಿ, ಡಾ| ವೀರಬಸವಂತರೆಡ್ಡಿ ಮುದ್ನಾಳ್, ಚೆನ್ನಾರೆಡ್ಡಿ ತುನ್ನೂರು, ನಾಗನಗೌಡ ಕಂದಕೂರ, ಡಾ| ಸುಭಾಶ್ಚಂದ್ರ ಕೌಲಗಿ, ರಾಜಪ್ಪ ಗೌಡ, ಚಲನಚಿತ್ರ ನಿರ್ದೇಶಕ ಓಂ ಸಾಯಿಪ್ರಕಾಶ, ವೆಂಕಟರಡ್ಡಿಗೌಡ ಬ್ಬೆತುಮಕೂರ, ನರಸಣಗೌಡ ರಾಯಚೂರು, ನಾಗರೆಡ್ಡಿ ಕರದಾಳ್, ಮಹೇಶ ಪಾಟೀಲ್, ವೆಂಕಟ್‌ರೆಡ್ಡಿ ಮಾಲಿಪಾಟೀಲ, ಜುಮಾಳಿಕೇರಿ ಬಾಂಬೆ, ಚನ್ನಪ್ಪಗೌಡ ಮೊಸಂಬಿ, ವಿಶ್ವಾನಾಥ ಶಿರವಾಳಕರ್, ಸಿದ್ದು ಪಾಟೀಲ ಮಳಗಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.