ಮೈಸೂರು: ಸಮಾಜದ ಓರೆ ಕೋರೆಗಳನ್ನು ಬಲ್ಲವರಾಗಿ, ಸಮಾಜದ ಜನರಿಗೆ ಮಾರ್ಗದರ್ಶನ ಮಾಡುತ್ತಿದ್ದ ಸೇವಾಲಾಲ್ ಅವರು ನಮ್ಮ ಸಮಾಜದ ನೇತಾರರಾಗಿ ರೂಪುಗೊಂಡಿದ್ದಾರೆ ಎಂದು ಶಿಕಾರಿಪುರದ ಗೋರ್ ಸೀಕವಾಡಿ, ಸಂಚಾಲಕ ಬೋಜರಾಜ ನಾಯ್ಕ ಬಣ್ಣಿಸಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಸಂತ ಶ್ರೀಸೇವಾಲಾಲ್ ಜಯಂತ್ಯುತ್ಸವ ಸಮಿತಿ ವತಿಯಿಂದ ಸೋಮವಾರ ಕಲಾಮಂದಿರದಲ್ಲಿ ಆಯೋಜಿಸಿದ್ದ ಸಂತ ಶ್ರೀ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದ ಓರೆ ಕೋರೆಗಳನ್ನು ಬಲ್ಲವರಾಗಿದ್ದ ಸೇವಾಲಾಲ್ ಅವರು ಪ್ರತಿಯೊಂದು ವಿಚಾರವನ್ನು ಸಮರ್ಥವಾಗಿ ವಿಶ್ಲೇಷಣೆ ಮಾಡಿ ಅದರಿಂದಾಗುವ ಅಪಾಯವನ್ನು ಜನರಿಗೆ ತಿಳಿಹೇಳುತ್ತಿದ್ದರು.
ಈ ಗುಣಗಳನ್ನು ಗಮನಿಸಿದ ಅಂದಿನ ಜನತೆ ಇವರಿಗೆ ವಿಶೇಷವಾದ ಪೂಜ್ಯ ಸ್ಥಾನ ನೀಡಿತ್ತು. ಜನರಿಗೆ ಒಳ್ಳೆಯ ನಡವಳಿಕೆ, ವಿಚಾರಗಳ ಬಗ್ಗೆ ಅರಿವು ಮೂಡಿಸಿದ ಸಂತ ಸೇವಾಲಾಲ್ ನಮ್ಮೆಲ್ಲರ ಸದ್ಗುರುವಾಗಿದ್ದಾರೆ ಎಂದು ಹೇಳಿದರು.
ಸೇವಾಲಾಲ್ ಅವರು ತಾವು ಕಂಡ ಸತ್ಯವನ್ನು ದೇಶಾದ್ಯಂತ ಸಾರಿದ್ದು, ಆಂಧ್ರಪ್ರದೇಶ, ಬಳ್ಳಾರಿ ಸೇರಿದಂತೆ ಇನ್ನಿತರ ಕಡೆಗಳಲ್ಲಿನ ಸಾಹಿತ್ಯದಲ್ಲಿ ಸಂತ ಸೇವಾಲಾಲ್ ಅವರ ಉಲ್ಲೇಖವಿದೆ. ಮಧ್ಯ ಭಾರತದಿಂದ ಪಾಕಿಸ್ತಾನದವರೆಗೆ ಸದ್ವಿಚಾರಗಳನ್ನು ಸಾರಿದ್ದು, ಹರಪ್ಪ ಮತ್ತು ಮಹೆಂಜೋದಾರೊ ನಾಗರಿಕತೆಯಲ್ಲಿ ಬಂಜಾರ ಸಮುದಾಯದ ಅಸ್ತಿತ್ವವಿದೆ. ಬಂಜಾರ ಗೀತೆಗಳಲ್ಲಿ ಹರಪ್ಪ ಮತ್ತು ಮಹೆಂಜೊದಾರೊ ನಾಗರಿಕತೆಯ ಉಲ್ಲೇಖವಿದೆ.
ನಮ್ಮ ಸಮುದಾಯಕ್ಕೆ ಅನೇಕ ವರ್ಷದ ಇತಿಹಾಸವಿದ್ದು, 4ನೇ ಶತಮಾನದಲ್ಲಿ ದೇಮದರು ಎಂಬ ವ್ಯಕ್ತಿಯು ಶಿಕ್ಷಣದ ಮಹತ್ವವನು ಸಾರಿದ್ದಾರೆ. ವಿಶೇಷ ಸಂಸ್ಕೃತಿ ಆಚಾರ-ವಿಚಾರಗಳನ್ನು ಹೊಂದಿರುವ ನಮ್ಮ ಸಮುದಾಯದ ಆಚಾರ ವಿಚಾರಗಳನ್ನು ಇಂದಿನ ಜನತೆಗೆ ಪರಿಚಯಿಸಲು ಸಂತ ಸೇವಾಲಾಲ್ ಜಯಂತಿ ಅವಕಾಶ ಮಾಡಿಕೊಟ್ಟಿದೆ ಎಂದರು.
ಕಾರ್ಯಕ್ರಮದಲ್ಲಿ ಮೇಯರ್ ಭಾಗ್ಯವತಿ, ಸಮುದಾಯದ ಪ್ರಮುಖರಾದ ನಾಗರಾಜ್, ಸದಾನಂದ, ಚಂದ್ರಶೇಖರ್, ಇಂಪರಾಜ್, ಬಸವರಾಜು ಹಾಜರಿದ್ದರು.