ರಾಯಚೂರು: ಸಂಕ್ರಾಂತಿ ಹಬ್ಬವನ್ನು ಈ ಬಾರಿ ಎರಡು ದಿನ ಆಚರಣೆ ಮಾಡಲಾಗಿದೆ. ರವಿವಾರ ಮಧ್ಯಾಹ್ನದಿಂದ
ಸಂಕ್ರಾಂತಿ ರಾಶಿ ಪ್ರವೇಶ ಮಾಡಿರುವುದರಿಂದ ಹಬ್ಬವನ್ನು ಎರಡು ದಿನ ಆಚರಿಸಲಾಯಿತು. ಕೆಲವರು
ಸಂಕ್ರಾಂತಿ ಹಬ್ಬವನ್ನು ರವಿವಾರ ಆಚರಿಸಿದರೆ, ಇನ್ನೂ ಕೆಲವರು ಸೋಮವಾರ ಆಚರಿಸಿದರು. ರವಿವಾರದ
ಜತೆಗೆ ಸೋಮವಾರವೂ ರಜಾ ದಿನವಾಗಿತ್ತು. ಅದರ ಜತೆಗೆ ಎರಡನೇ ಶನಿವಾರವೂ ರಜೆ ದಿನವಾಗಿತ್ತು.
ಹೀಗಾಗಿ ಸಾರ್ವಜನಿಕರು ಪುಣ್ಯಸ್ನಾನಕ್ಕೆ ಹಂಪಿ, ಶ್ರೀಶೈಲ, ಮುರುಡೇಶ್ವರ ಸೇರಿ ಅನೇಕ ದೂರದ ಪ್ರದೇಶಗಳಿಗೆ
ತೆರಳಿದ್ದರು. ಜಿಲ್ಲೆಯ ಕೃಷ್ಣಾ, ತುಂಗಭದ್ರಾ ನದಿಗಳಿಗೆ ತೆರಳಿದ ಜನ ಪುಣ್ಯಸ್ನಾನಗೈದರು. ನಂತರ ಗಂಗಾ ಪೂಜೆ
ನೆರವೇರಿಸಿ ಭೋಗಿ ಸಲ್ಲಿಸಿದರು.
ಇನ್ನು ಗ್ರಾಮೀಣ ಭಾಗದಲ್ಲೂ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು. ವಿವಿಧ ಬಗೆ ಖಾದ್ಯಗಳನ್ನು ತಯಾರಿಸಿದ್ದರು. ಕೆಲವೆಡೆ ಕೋಳಿ ಪಂದ್ಯ, ಗುಂಡು ಎತ್ತುವ ಸ್ಪರ್ಧೆ, ಎತ್ತುಗಳ ಕಿಚ್ಚು ಹಾಯಿಸುವ ಸ್ಪರ್ಧೆ ನಡೆದವು. ಉತ್ತರಾಯಣ ಕಾಲವಾದ್ದರಿಂದ ಹಿರಿಯರಿಗೂ ವಂದಿಸಿ ನಂತರ ಸ್ನೇಹಿತರು ಸಂಬಂಧಿಗಳಿಗೆ ಎಳ್ಳು ಬೆಲ್ಲ ಹಂಚಿ ಶುಭ ಕೋರಿದರು.
ರಾಯರ ದರ್ಶನ: ಸಂಕ್ರಾಂತಿ ನಿಮಿತ್ತ ಮಂತ್ರಾಲಯಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ತುಂಗಭದ್ರೆಯಲ್ಲಿ ಮಿಂದೆದ್ದ ಭಕ್ತರು ನಂತರ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನಾಶೀರ್ವಾದ ಪಡೆದರು. ಇನ್ನು ನದಿ ಪಾತ್ರದ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಸೋಮವಾರವೂ ಹೆಚ್ಚಾಗಿ ಕಂಡು ಬಂತು