ಕನಕಪುರ: ನಗರದ ರಾಮನಗರ ರಸ್ತೆಯ ಮೇಗಳ ಬೀದಿಯಲ್ಲಿನ ಬಾಣಂತಮಾರಮ್ಮ ದೇವಿಯ ಅಗ್ನಿಕೋಂಡೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ವೈಭವಯುತವಾಗಿ ನಡೆಯಿತು.
ಬಾಣಂತಮಾರಮ್ಮನ ದೇವಾಲಯದಿಂದ ಮಧ್ಯರಾತ್ರಿಯಲ್ಲೇ ಬಾಣಂತಮಾರಮ್ಮ ದೇವಿಯ ಕಲಶದಲ್ಲಿ ಪ್ರತಿಷ್ಠಾಪಿಸಿ ಅರ್ಕಾವತಿ ನದಿಯ ದಡದಿಂದ ಪೂಜೆ ಮೂಲಕ ಮೆರವಣಿಗೆಯಲ್ಲಿ ದೇವರನ್ನು ಕರೆದೋಯ್ದು ಬುಧವಾರ ಬೆಳಗ್ಗೆ 8 ಗಂಟೆಗೆ ಅಗ್ನಿಕೊಂಡೋತ್ಸವದಲ್ಲಿ ಬಾಣಂತಮಾರಮ್ಮನ ಕಲಶವನ್ನು ಹೊತ್ತ ಅರ್ಚಕ ಅಗ್ನಿ ಪ್ರವೇಶ ಮಾಡಿ ಕೊಂಡ ಹಾಯುತ್ತಿದ್ದಂತೆ ನೆರೆದಿದ್ದ ಭಕ್ತರು ಜೈಕಾರ ಹಾಕಿ ಸಂಭ್ರಮಿಸಿದರು.
ಪಟಾಕಿಗಳ ಚಿತ್ತಾರ: ಬಾಣಂತಮಾರಮ್ಮ ದೇವಿಯನ್ನು ಅರ್ಕಾವತಿ ನದಿಯ ದಡದಿಂದ ಮೆರವಣಿಗೆ ಮೂಲಕ ಬೂದಕೇರಿ ರಸ್ತೆ , ಎಂ.ಜಿ. ರಸ್ತೆ , ಕಾಮನಗುಡಿ ರಸ್ತೆ ಮೂಲಕ ರಾಮನಗರ ರಸ್ತೆಗೆ ಬಂದು ನಂತರ ದೇವಾಲಯಕ್ಕೆ ತೆರಳುವುದು ಹಿಂದಿನಿಂದಲೂ ನಡೆದುಕೊಂಡು ಬಂದ ವಾಡಿಕೆಯಾಗಿದ್ದು, ಅಂತೆಯೇ ಬೆಳಗಿನ ಜಾವ 4 ಗಂಟೆಗೆ ಮೆರವಣಿಗೆ ಆರಂಭವಾಗು ತ್ತಿದ್ದಂತೆ ಪಟಾಕಿಗಳ ಸದ್ದು ಮತ್ತು ಆಗಸದಲ್ಲಿ ಹಲವು ಬಗೆಯ ಚಿತ್ತಾರಗಳನ್ನು ಮೂಡಿಸುವ ಮೂಲಕ ಹಬ್ಬದ ಮೆರಗನ್ನು ಹೆಚ್ಚಿಸಿದವು.
ಬುಧವಾರ ಬೆಳಗಿನ ಜಾವ ಕೊಂಡೋತ್ಸವದ ನಂತರ ಬಾಣಂತಮಾರಮ್ಮ ದೇಗುಲದ ಸುತ್ತಮುತ್ತ ಪಕ್ಕದ ರಸ್ತೆಗಳಲ್ಲಿ ದೇವರ ಮೆರವಣಿಗೆ ನಡೆಸಲಾಗುತ್ತದೆ. ಇಂದು ನಗರದ ಮೇಗಳ ಬೀದಿ, ವಿವೇಕಾನಂದ ನಗರ, ಮೆಜೆಸ್ಟಿಕ್ ವೃತ್ತ, ಕುಂಬಾರರ ಕಾಲೋನಿ, ನವಗ್ರಹ ದೇವಾಸ್ಥಾನದ ಬಡಾವಣೆ, ಬಾಣಂತಮಾರಮ್ಮನ ಬಡಾವಣೆ, ಎಸ್. ಕರಿಯಪ್ಪ ರಸ್ತೆ, ಸೇರಿದಂತೆ ಹಲವು ಬಡಾವಣೆಗಳಲ್ಲಿ ದೇವರು ಕೊಂಡೋತ್ಸವಕ್ಕೆ ಮುನ್ನ ಮೆರವಣಿಗೆಯಲ್ಲಿ ಬರುವಾಗ ದಾರಿಯುದ್ದಕ್ಕೂ ಮೇಕೆಗಳನ್ನು ಬಲಿಕೊಟ್ಟು ನಂತರ ಹಬ್ಬದ ಪ್ರಯುಕ್ತ ಬಾಡೂಟ ಮಾಡಿ ಹಬ್ಬದಲ್ಲಿ ನೆಂಟರಿಗೆ ಉಣಬಡಿಸಲಾಗುತ್ತದೆ, ಶುಕ್ರವಾರ ಸಿಟಿಗಾವು, ಜಾತ್ರೆ ನಡೆಯಲಿದೆ.
Advertisement
ಪ್ರತಿ ವರ್ಷ ಯುಗಾದಿ ಹಬ್ಬದ 15 ದಿನಗಳ ನಂತರ ಆಚರಣೆಯಾಗುವ ಬಾಣಂತ ಮಾರಮ್ಮನ ಕೊಂಡೋತ್ಸವಕ್ಕೆ ನಗರದ ಪ್ರಮುಖ ಬೀದಿಗಳು ವಿದ್ಯುತ್‌ದೀಪಗಳಿಂದ ಅಲಂಕಾರಗೊಂಡು ಯಳವಾರದ ಮೂಲಕ ಕೊಂಡೋತ್ಸವಕ್ಕೆ ಅಗತ್ಯವಾದ ಸೌದೆಗಳನ್ನು ವಾದ್ಯಮೇಳಗಳ ಮೂಲಕ ಕರೆತಂದು ಕಟ್ಟಿಗೆಗಳನ್ನು ರಾತ್ರಿಯಿಡಿ ಸುಟ್ಟು ಅಗ್ನಿ ಕೊಂಡಕ್ಕೆ ಸಿದ್ಧತೆ ಮಾಡಿ ನಂತರ ಬಾಣಂತ ಮಾರಮ್ಮನ ಕಲಶವನ್ನು ಹೊತ್ತ ಅರ್ಚಕ ಅಗ್ನಿಕೊಂಡ ಪ್ರವೇಶಿಸುವುದು ವಾಡಿಕೆಯಾಗಿದೆ.
Related Articles
Advertisement