Advertisement
ಆಟಿಯ ಹಬ್ಬ ತಿಂಗಳಿಡೀ ಅಲ್ಲಲ್ಲಿ ನಡೆಯುತ್ತಿರುತ್ತದೆ. ಕಾರ್ಯಕ್ರಮಗಳ ಶೀರ್ಷಿಕೆಗಳಲ್ಲಿ ಈ ವೈಭವೀಕರಣದ ಛಾಯೆಯನ್ನು ಕಾಣಬಹುದು. ಬಹುತೇಕ ಆಚರಣೆಗಳಲ್ಲಿ ವೈಭವ, ಸಂಭ್ರಮಗಳು ತುಂಬಿ ತುಳುಕುತ್ತಿರುತ್ತವೆ. ಹೀಗೆ ವೈಭವ, ತಿಂಡಿ ತಿನಿಸುಗಳ ಭರಾಟೆ, ಭರ್ಜರಿ ಊಟೋಪಚಾರ ಒಂದು ಕಡೆಯಾದರೆ, ಮಳೆಗಾಲದಲ್ಲಿ ಬೇಸಾಯದ ಕಷ್ಟಕಾಲದಲ್ಲಿ ಒಂದು ಹೊತ್ತಿನ ಊಟಕ್ಕೆ ತತ್ವಾರ ಇದ್ದ ಕಾಲದ ನೆನಪುಗಳನ್ನು ಮಾಡಿಕೊಳ್ಳುವುದು ಇನ್ನೊಂದು ಕಡೆ ನಡೆಯುತ್ತದೆ. ಕಷ್ಟಗಳು ಇದ್ದೇ ಇರುತ್ತವೆ, ಅದಕ್ಕೆ ನಿತ್ಯನಿರಂತರ ಮರುಗುವುದರಲ್ಲಿ ಅರ್ಥವಿಲ್ಲ, ಹಾಗಾಗಿ ಸಂಭ್ರಮ ಪಡುವುದು ಸರಿ ಎಂಬ ತರ್ಕವನ್ನು ಮಾಡುವವರೂ ಇರಬಹುದು. ಆದರೆ ಆಟಿಯ ಆಚರಣೆಗಳಲ್ಲಿ ಗತಕಾಲದ ಯಾವ ಅಂಶಗಳು ಮುನ್ನೆಲೆಗೆ ಬರಬೇಕು, ಇಂದಿನ ತಲೆಮಾರಿಗೆ ದಾಟಿಸಬೇಕಾದ ಮಾಹಿತಿಗಳೇನು, ಆಟಿ ಆಚರಣೆಗಳ ಆಶಯಗಳೇನು, ಮಳೆಗಾಲದ ಸಮಸ್ಯೆಗಳು, ಪ್ರಾಕೃತಿಕ ವಿಕೋಪಗಳು, ಆಹಾರದ ಕೊರತೆ, ದೈಹಿಕ ಕಾಯಿಲೆಗಳು ಇವುಗಳ ಕುರಿತಂತೆ ಇಂದಿನ ತಲೆಮಾರಿನ ಜನರಿಗೆ ನೀಡಬೇಕಾದ ತಿಳಿವಳಿಕೆಗಳೇನು? ಹೀಗೆ ಅರಿವು ನೀಡುವ ಕಾರ್ಯಕ್ರಮವಾಗಿ ಆಟಿ ಆಚರಣೆಗೊಳ್ಳಬೇಕಾದುದು ಇಂದಿನ ಅಗತ್ಯವಾಗಿದೆ. ಆಟಿ ತಿಂಗಳ ಒಂದು ಕಾಲಘಟ್ಟದ ಸ್ವರೂಪವನ್ನು ತಿಳಿದುಕೊಂಡು, ಅದಕ್ಕೆ ಹಿರಿಯರು ಪ್ರತಿಕ್ರಿಯಿಸಿದ ಬಗೆಯನ್ನು ನಾವು ಮೊದಲು ಅರಿತುಕೊಳ್ಳಬೇಕು. ಪ್ರಾಕೃತಿಕ ವೈಪರೀತ್ಯಗಳನ್ನು ಹಿರಿಯರು ನಿಭಾಯಿಸಿದ ಕ್ರಮಗಳನ್ನು ಅರಿತುಕೊಂಡು ಇಂದು ಮತ್ತು ಮುಂದಿನ ಕಾಲಘಟ್ಟದಲ್ಲಿ ಪ್ರಕೃತಿಯ ಜತೆ ಸಂತುಲಿತ ಸಂಬಂಧವನ್ನು ಹೊಂದಿರಬೇಕಾದ ಅನಿವಾರ್ಯತೆಯ ಪಾಠವನ್ನು ನಾವು ತಿಳಿದುಕೊಳ್ಳುವ ಆವಶ್ಯಕತೆಯಿದೆ.
Related Articles
Advertisement
ಆಟಿ ತಿಂಗಳಲ್ಲಿ ಔಷಧ ರೂಪದ ಆಹಾರ ಪದಾರ್ಥಗಳನ್ನು ಬಳಸುವ ಸಂಪ್ರದಾಯವಿತ್ತು. ಈಗಲೂ ಈ ಪದ್ಧತಿ ಚಾಲ್ತಿಯಲ್ಲಿದೆ. ಅದರಲ್ಲಿ ಮುಖ್ಯವಾದುದು ಆಟಿ ಅಮಾವಾಸ್ಯೆಯ ದಿನ ಹಾಲೆ ಮರದ ಹಾಲನ್ನು ತುಳುನಾಡಿನಾದ್ಯಂತ ಜನರು ಸೇವಿಸುತ್ತಾರೆ. ಅಂದು ಬೆಳಗ್ಗೆ ಹಾಲೆ ಮರದ ಹಾಲು ಕುಡಿದರೆ ಅಥವಾ ಗುಳಿಗೆ ಮಾಡಿ ಸೇವಿಸಿದರೆ ಮಧ್ಯಾಹ್ನ ಮೆಂತೆಯ ಗಂಜಿ ಮಾಡಿ ತಿನ್ನುವ ಕ್ರಮ ಇತ್ತು. ದೇಹದ ಉಷ್ಣ ಮತ್ತು ತಂಪಿನ ಸಮತೋಲನ ಕಾಪಾಡಲು ಹೀಗೆ ಮಾಡುತ್ತಿದ್ದರು ಎಂಬುದು ಗ್ರಾಮೀಣರ ನಂಬಿಕೆ. ಕೇಪುಳ, ತರೊಳಿ ಮೊದಲಾದ ಗಿಡಗಳ ಚಿಗುರನ್ನು ಕಿತ್ತು ತಂದು ಕಷಾಯ ಮಾಡಿ ಆಟಿ ತಿಂಗಳಲ್ಲಿ ಕುಡಿಯುವ ಪರಿಪಾಠ ಇತ್ತು. ಇದನ್ನು ನೋಡಿದರೆ ಕಾಲಮಾನಕ್ಕೆ ಬರುವ ರೋಗಗಳನ್ನು ತಡೆಯಲು ಮತ್ತು ಕಾಯಿಲೆ ಬಂದರೆ ಉಪಶಮನಗೊಳಿಸಲು ಸೂಕ್ತ ಔಷಧಗಳನ್ನು ತಯಾರಿಸಿ ಸೇವಿಸುತ್ತಿದ್ದರು ಎಂಬುದು ಸ್ಪಷ್ಟವಾಗುತ್ತದೆ.
ಆದರೆ ಇವತ್ತು ಆಟಿ ತಿಂಗಳ ಹೆಸರಿನಲ್ಲಿ ಏನು ಆಚರಣೆಗಳನ್ನು ಮಾಡುತ್ತಿದ್ದೇವೆ? ಸಂಕಷ್ಟಗಳೇ ತುಂಬಿದ್ದ ಕಾಲಘಟ್ಟದ ಬದುಕನ್ನು ವೈಭವೀಕರಿಸಿ ಕಟ್ಟಿಕೊಡುತ್ತಿದ್ದೇವೆ. ಆಟಿಯನ್ನು ಮುಂದಿಟ್ಟುಕೊಂಡು ನಾವು ಎಳೆಯರಿಗೆ ತಿಳಿಸಬಹುದಾದ ಕೆಲವು ಆದರ್ಶಗಳಿವೆ. ಹಿರಿಯರ ಬದುಕಿನಲ್ಲಿ ಕಷ್ಟಗಳಿದ್ದುವು, ಬಡತನ ಇತ್ತು ನಿಜ, ಹಾಗಿದ್ದೂ ಅವರು ಹೋರಾಟದ ಬದುಕನ್ನು ನಡೆಸಿದ್ದರು. ಪ್ರಕೃತಿಯ ಮೇಲೆ ದಬ್ಟಾಳಿಕೆ ಮಾಡದೆಯೂ ಪ್ರಾಕೃತಿಕ ವಿಕೋಪಗಳಿಗೆ ತುತ್ತಾಗುತ್ತಿದ್ದರು. ಹಾಗಿದ್ದೂ ಪ್ರಕೃತಿಯನ್ನು ದೇವರಂತೆ ಪೂಜಿಸುತ್ತಿದ್ದರು. ನಾಗನಿಗೆ ಬದುಕಲು ಮರಮಟ್ಟುಗಳನ್ನು ಕಡಿಯದೆ ಬನಗಳನ್ನು ನಿರ್ಮಿಸುತ್ತಿದ್ದರು. ವಿಷದ ನಾಗನಿಗೂ ಹಾಲೆರೆದು ಕೈಮುಗಿಯುತ್ತಿದ್ದರು. ನಾವು ಗುಡ್ಡ-ಬೆಟ್ಟಗಳನ್ನು ಅಗೆದು ಬಗೆದು ಕಾಡು-ಗುಡ್ಡಗಳ ಕುಸಿತಕ್ಕೆ ಕಾರಣರಾಗುತ್ತಿದ್ದೇವೆ. ತೋಡುಗಳು ಮಾಯವಾಗಿವೆ. ನದಿಗಳು ಬತ್ತುತ್ತಿವೆ. ಬಯಲು ಗದ್ದೆಗಳು ಕಣ್ಮರೆಯಾಗುತ್ತಿವೆ. ನಿಭಾಯಿಸಲಾಗದ ಮಟ್ಟದಲ್ಲಿ ನಗರಗಳನ್ನು ಕಟ್ಟುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಎಂತಹ ದುರಂತಗಳಿಗೆ ನಾವು ಬಲಿಯಾಗಬೇಕೋ ಗೊತ್ತಿಲ್ಲ. ನಿಸರ್ಗವನ್ನು ಒಪ್ಪಿ ಬದುಕಿದ ನಮ್ಮ ಹಿರಿಯರೇ ಸಾಕಷ್ಟು ಪಾಡು ಪಟ್ಟಿ¨ªಾರೆ. ಹಾಗಾದರೆ ನಮ್ಮ ಬದುಕಿನ ದಾರಿ ಯಾವುದಿರಬೇಕು? ಹೇಗಿರಬೇಕು? ಎಂಬುದನ್ನು ಇಂದಿನ ಯುವ ತಲೆಮಾರಿಗೆ ತಿಳಿಹೇಳುವುದಕ್ಕೆ ಆಟಿ ತಿಂಗಳ ಆಚರಣೆಗಳು ವೇದಿಕೆಯಾಗಬೇಕು, ಸಮಾರಂಭಗಳು ಆಯೋಜನೆಗೊಳ್ಳಬೇಕು. “ಆಟಿ ಆಡ ಆಡ, ಸೋಣ ಓಡ ಓಡ’ ಎಂಬ ಗಾದೆಯ ಮಾತಿದೆ. ಕಷ್ಟದ ಆಟಿ ತಿಂಗಳ ನಡೆ ಬಹಳ ನಿಧಾನ. ಯಾಕಪ್ಪಾ ಆಟಿ ತಿಂಗಳ ದಿನಗಳೇ ಕಳೆಯುವುದಿಲ್ಲ. ಕಷ್ಟದ ಕಾರಣದಿಂದಾಗಿ ಸಮಯವೇ ಹೋಗುವುದಿಲ್ಲ ಎಂದು ಚಡಪಡಿಸುತ್ತಿದ್ದರು. ಯಾವಾಗ ಒಮ್ಮೆ ಆಟಿ ತಿಂಗಳು ಯಾವಾಗ ಮುಗಿಯುತ್ತದೋ ಎಂದು ಕಾಯವಂತಹ ದುಃಸ್ಥಿತಿ ಹಿರಿಯರದಾಗಿತ್ತು. ಸೋಣ ತಿಂಗಳು ಬಂದರೆ ಸಾಲು ಸಾಲು ಹಬ್ಬಗಳು. ದಿನಗಳು ಹೋದದ್ದೇ ಗೊತ್ತಾಗುವುದಿಲ್ಲ. ಸದ್ಯ ನಮ್ಮ ಆಟಿ ತಿಂಗಳ ಸಂಭ್ರಮಾಚರಣೆಗಳನ್ನು ನೋಡಿ ನಮ್ಮ ಎಳೆಯರು ಹೇಳಿಯಾರು “ಆಟಿ ಓಡ ಓಡ, ಸೋಣ ನೋಡ ನೋಡ’!
ಕೆ. ಚಿನ್ನಪ್ಪ ಗೌಡ, ಮಂಗಳೂರು