ತಿರುವನಂತಪುರಂ: ಇಡೀ ಪ್ರಪಂಚದಲ್ಲೇ ಮದುವೆಗೆ ತನ್ನದೇ ಆದ ವಿಶೇಷ ಮಹತ್ವವಿದೆ. ಆದರೆ ಈ ಆಧುನಿಕ ಯುಗದಲ್ಲಿ ಮದುವೆಯ ಬಳಿಕದ ಸಂಬಂಧವನ್ನು ಉಳಿಸಿಕೊಳ್ಳಲು ಸತಿ-ಪತಿಗಳಿಗೆ ಅಸಾಧ್ಯವೆಂದಾದಾಗ ಅವರು ವಿಚ್ಚೇದನ ಪಡೆದುಕೊಳ್ಳುತ್ತಿರುವುದು ತೀರಾ ಸಾಮಾನ್ಯ ಎನಿಸಿಬಿಟ್ಟಿದೆ. ಕೆಲವು ವರ್ಷಗಳ ಹಿಂದೆಯೇ ಪಾಶಿಮಾತ್ಯ ರಾಷ್ಟ್ರಗಳಲ್ಲಿ ವಿಚ್ಚೇದನವನ್ನು ಸಂಭ್ರಮಿಸುವ ಟ್ರೆಂಡ್ ಕೂಡಾ ಶುರುವಾಗಿಬಿಟ್ಟಿತ್ತು. ಅದು ಈಗ ಭಾರತಕ್ಕೂ ಎಂಟ್ರಿ ಕೊಟ್ಟಿದೆ..!
ಕೆಲ ದಿನಗಳ ಹಿಂದಷ್ಟೇ ಅಮೇರಿಕದಲ್ಲಿ ಮಹಿಳೆಯೊಬ್ಬರು ಇದೇ ರೀತಿ ತಮ್ಮ ವಿವಾಹ ವಿಚ್ಚೇದನ ವನ್ನು ಸಂಭ್ರಮಿಸಿದ್ದರು. ಅವರು ತಮ್ಮ ವಿವಾಹದ ದಿನ ಧರಿಸಿದ್ದ ಬಟ್ಟೆಗಳನ್ನು ಸುಟ್ಟು ಹಾಕಿದ್ದಳು. ಅದಕ್ಕೂ ಮೊದಲು ಮಹಿಳೆಯೊಬ್ಬಳು ತಾವು ವಿಚ್ಚೇದನ ಪಡೆದು ನಾಲ್ಕು ವರ್ಷವಾಗಿದ್ದಕ್ಕೆ ವಿಚ್ಚೇದನ ವಾರ್ಷಿಕೋತ್ಸವವನ್ನು ಆಚರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದೂ ಸುದ್ದಿಯಾಗಿತ್ತು.
ಈಗ ಇದೇ ರೀತಿಯ ಸಂಭ್ರಮಾಚರಣೆ ಕೇರಳದಲ್ಲೂ ನಡೆದಿದೆ. ಕಲಾವಿದೆ, ಫ್ಯಾಷನ್ ಡಿಸೈನರ್ ಆಗಿರುವ ಶಾಲಿನಿ ಎಂಬವರು ತಮ್ಮ ಮದುವೆ ವಿಚ್ಚೇದನವನ್ನೇ ಸಂಭ್ರಮಿಸಿದ್ದಾರೆ. ಅದೂ ಅಂತಿಂಥಾ ಸೆಲೆಬ್ರೇಷನ್ ಅಲ್ಲ. ಕೆಂಪು ಗೌನ್ ಧರಿಸಿ, ಫೋಟೋಶೂಟ್ ಕೂಡಾ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶಾಲಿನಿ ಅವರು ಪೋಸ್ಟ್ ಮಾಡಿಕೊಂಡಿರುವ ಫೋಟೋಗಳಿಗೆ ನೆಟ್ಟಿಗರು ಪರ-ವಿರೋಧ ಕಾಮೆಂಟ್‌ಗಳನ್ನೂ ಮಾಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಾವು ಹಂಚಿಕೊಂಡ ಫೋಟೋಗಳ ಜೊತೆಯಲ್ಲಿ ಶಾಲಿನಿ ಅವರು ಇದು ʻಸಮಾಜದಲ್ಲಿರುವ ಧ್ವನಿರಹಿತ ಮಹಿಳೆಯರಿಗೆ ಒಬ್ಬ ವಿಚ್ಚೇದನ ಪಡೆದುಕೊಂಡ ಮಹಿಳೆಯ ಸಂದೇಶʼ ಅಂತಲೂ ಬರೆದುಕೊಂಡಿದ್ದಾರೆ. ಅದರ ಜೊತೆಯಲ್ಲಿ ʻDIVORCE is NOT a FAILUREʼ ಅಂತಲೂ ಕ್ಯಾಪ್ಷನ್ ಹಾಕಿದ್ದಾರೆ. ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಚರ್ಚೆಯನ್ನೇ ಹುಟ್ಟುಹಾಕಿದೆ.
ಇದನ್ನೂ ಓದಿ: ʼದಿ ಕೇರಳ ಸ್ಟೋರಿʼಗೆ ʼಎʼ ಸರ್ಟಿಫಿಕೇಟ್:10 ದೃಶ್ಯಗಳಿಗೆ ಕತ್ತರಿ ಹಾಕಿದ ಸೆನ್ಸಾರ್ ಬೋರ್ಡ್