Advertisement
ಕಾರ್ಯಕರ್ತರು ಅತ್ಯಂತ ಸಂಭ್ರಮ, ಸಡಗರದಿಂದ ಕಚೇರಿಯಲ್ಲಿ ಸುತ್ತಾಡುತ್ತಿದ್ದರು. ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಅವರು ಪಕ್ಷದ ಕಚೇರಿಗೆ ಭೇಟಿ ನೀಡಿ, ಕೆಲ ಗಂಟೆಗಳ ಕಾಲ ಪ್ರಮುಖರೊಂದಿಗೆ ಚರ್ಚೆ ನಡೆಸಿದರು. ರಾಜ್ಯ ಬಿಜೆಪಿ ಸಹ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಕೂಡ ದಿನವಿಡಿ ಪಕ್ಷದ ಕಚೇರಿಯಲ್ಲೇ ಇದ್ದು, ಸಂಘಟನಾತ್ಮಕವಾಗಿ ಆಗಬೇಕಿರುವ ಹಲವು ವಿಚಾರಗಳ ಬಗ್ಗೆ ಕಾರ್ಯಕರ್ತರು ಮತ್ತು ಪ್ರಮುಖರೊಂದಿಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
Related Articles
Advertisement
ಎಲ್ಲೆಲ್ಲೂ ಸಚಿವ ಸ್ಥಾನದ ಮಾತು…: ಬಿಜೆಪಿ ಕಚೇರಿಯಲ್ಲಿ ಎಲ್ಲಿ, ಯಾರಲ್ಲಿ ಕೇಳಿದರೂ, ಬಿಎಸ್‌ವೈ ಮುಖ್ಯಮಂತ್ರಿ ಆಗುತ್ತಾರೆ. ಯಾರ್ಯಾರು ಉಪ ಮುಖ್ಯಮಂತ್ರಿ ಆಗುತ್ತಾರೆ. ಮಂತ್ರಿಗಿರಿ ಯಾರಿಗೆ ಸಿಗಲಿದೆ. ಬೆಂಗಳೂರಿನ ಎಷ್ಟು ಶಾಸಕರಿಗೆ ಮಂತ್ರಿಗಿರಿ ಸಿಗಲಿದೆ ಎಂಬಿತ್ಯಾದಿ ವಿಚಾರಗಳ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಕರಾವಳಿ ಅಥವಾ ಉತ್ತರ ಕರ್ನಾಟಕ ಭಾಗಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಸಿಗಬಹುದು. ಕರಾವಳಿಗೆ ಹೆಚ್ಚಿನ ಮಂತ್ರಿ ಸ್ಥಾನ ಸಿಗದೇ ಇದ್ದರೂ ನಿಗಮ ಮಂಡಳಿಯಲ್ಲಿ ಹೆಚ್ಚಿನ ಅವಕಾಶ ದೊರೆಯಲಿದೆ ಎಂಬ ಮಾತುಕತೆಗಳು ಕಾರ್ಯಕರ್ತರು ಹಾಗೂ ಪ್ರಮುಖರ ಮಧ್ಯೆ ಆರಂಭವಾಗಿದೆ.
ಯಡಿಯೂರಪ್ಪ ಅವರ ಡಾಲರ್ ಕಾಲೋನಿಯ ನಿವಾಸಕ್ಕೆ ಸಚಿವ ಸ್ಥಾನದ ಆಕಾಂಕ್ಷಿಗಳು ಭೇಟಿ ನೀಡಿದ್ದು ಕಂಡು ಬಂತು. ಪ್ರದೇಶವಾರು, ಹಿರಿತನ, ಜಾತಿ, ಪಕ್ಷ ನಿಷ್ಠೆ ಇತ್ಯಾದಿ ವಿಷಯಗಳ ಆಧಾರದಲ್ಲಿ ಮಂತ್ರಿ ಸ್ಥಾನದ ಹಂಚಿಕೆಯಾಗಲಿದೆ ಎಂಬ ಚರ್ಚೆಯೂ ನಡೆಯುತ್ತಿದೆ. ಬಿಜೆಪಿಯ ಬೆಂಗಳೂರಿನ ಪ್ರಬಲ ನಾಯಕರಾದ ಆರ್.ಅಶೋಕ್, ವಿ.ಸೋಮಣ್ಣ, ಡಾ.ಅಶ್ವತ್ಥನಾರಾಯಣ, ಎಸ್.ಆರ್.ವಿಶ್ವನಾಥ್, ಸತೀಶ್ ರೆಡ್ಡಿ, ಅರವಿಂದ ಲಿಂಬಾವಳಿ ಮೊದಲಾದವರು ಸಚಿವಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ.ಮಾಧುಸ್ವಾಮಿ, ಮೊಳಕಾಲ್ಮೂರು ಶಾಸಕ ಶ್ರೀರಾಮುಲು,
ಮೈಸೂರಿನ ರಾಮದಾಸ್, ಶಿವಮೊಗ್ಗದಿಂದ ಕೆ.ಎಸ್.ಈಶ್ವರಪ್ಪ, ದಾವಣಗೆರೆಯಿಂದ ಎಸ್.ಎ.ರವೀಂದ್ರನಾಥ್, ಎಂ.ಪಿ.ರೇಣುಕಾಚಾರ್ಯ, ಕರಾವಳಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುನೀಲ್ ಕುಮಾರ್, ಅಂಗಾರ, ಸಂಜೀವ್ ಮಟ್ಟಂದೂರು, ಉತ್ತರ ಕರ್ನಾಟಕ ಭಾಗದಲ್ಲೂ ಸಚಿವ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಆದರೆ, ಯಾರ್ಯಾರು ಸಚಿವರಾಗಲಿದ್ದಾರೆ ಎಂಬುದು ಸಂಪುಟ ರಚನೆಯ ನಂತರವಷ್ಟೇ ತಿಳಿಯಲಿದೆ. ಆದರೆ, ಇದರ ಬಗ್ಗೆ ಕಾರ್ಯಕರ್ತರು ಹಾಗೂ ಪ್ರಮುಖರ ಚರ್ಚೆ ಈಗಲೇ ಆರಂಭವಾಗಿದೆ.