ಮಂಗಳೂರು/ಉಡುಪಿ/ಕಾಸರಗೋಡು: ತುಳುನಾಡಿನಲ್ಲಿ ಹೊಸ ವರ್ಷಾಚರಣೆ ಎಂದೇ ಕರೆಯಲಾಗುವ ಸೌರಮಾನ ಯುಗಾದಿ ಅಂದರೆ ವಿಷು ಹಬ್ಬವನ್ನು ಶುಕ್ರವಾರ ಕರಾವಳಿಯಾದ್ಯಂತ ಸಂಭ್ರಮ,ಸಡಗರದಿಂದ ಆಚರಿಸಲಾಯಿತು. ಜಿಲ್ಲೆಯ ವಿವಿಧ ದೇವಾಲಯಗಳು, ಮನೆಗಳಲ್ಲಿ ವಿಷು ಕಣಿ ಇಟ್ಟು ಪೂಜಿಸಲಾಯಿತು.
ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಪೇಜಾವರ ಶ್ರೀ ನೇತೃತ್ವದಲ್ಲಿ ಸುವರ್ಣ ರಥೋತ್ಸವ ನಡೆಯಿತು. ಬಳಿಕ ಪುರೋಹಿತರು ಪಂಚಾಂಗ ಶ್ರವಣ ಮಾಡಿದರು.
ವಿಷು ಹಬ್ಬ ಕೃಷಿ ಪ್ರಧಾನ ಹಬ್ಬವಾಗಿದ್ದು, ಈ ದಿನ ಮನೆಮಂದಿ ವಿಷು ಕಣಿ ಇಟ್ಟು ಬೆಳಗ್ಗೆ ಬೇಗ ಎದ್ದು ವೀಕ್ಷಿಸುತ್ತಾರೆ. ಅದರಂತೆ ಜಿಲ್ಲೆಯ ಹೆಚ್ಚಿನ ಮನೆ, ದೇವಸ್ಥಾನ, ದೈವಸ್ಥಾನಗಳಲ್ಲಿ ವಿಷು ಕಣಿ ಇಟ್ಟು ವೀಕ್ಷಿಸಲಾಯಿತು. ಬಾಳೆಹಣ್ಣು, ಎಳನೀರು, ಹಲಸಿನ ಹಣ್ಣು, ಕನ್ನಡಿ, ತಂಬಿಗೆಯಲ್ಲಿ ನೀರು, ಎಲೆಅಡಿಕೆ, ಹಣ, ಕುಂಕುಮ ಮೊದಲಾದ ಸುವಸ್ತುಗಳನ್ನು ಜೋಡಿಸಿ ವಿಷು ಕಣಿ ಮಾಡಲಾಗಿತ್ತು.
ಈ ಸಂದರ್ಭ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ-ಪುನಸ್ಕಾರ ನಡೆದವು. ಸಾವಿರಾರು ಭಕ್ತರು ಪಾಲ್ಗೊಂಡು ಶ್ರೀ ದೇವರ ದರುಶನ ಪಡೆದು ಅನ್ನಪ್ರಸಾದ ಸ್ವೀಕರಿಸಿದರು. ಬಹುತೇಕ ಮನೆಗಳಲ್ಲಿ ವಿಷುಕಣಿ ಇಟ್ಟು ಕುಟುಂಬದ ಸದಸ್ಯರೆಲ್ಲರೂ ಜತೆ ಸೇರಿ ಹಬ್ಬ ಆಚರಿಸಿ ಸಿಹಿಯೂಟ ಮಾಡಿದರು.
ಇದು ಶುಭ ದಿನ ಎಂಬ ಹಿನ್ನೆಲೆಯಲ್ಲಿ ಕೆಲವರು ಚಿನ್ನದಂಗಡಿಗಳಿಗೆ ತೆರಳಿ ಕಿವಿ, ಮೂಗು ಚುಚ್ಚಿ ಆಭರಣ ಹಾಕಿಸಿಕೊಂಡರು. ಹೊಸ ಉದ್ಯಮ ಆರಂಭಕ್ಕೂ ಇದು ಮಂಗಳ ದಿನ ಎಂಬ ನೆಲೆಯಲ್ಲಿ ಕೆಲವೊಂದು ಅಂಗಡಿ ಮುಂಗಟ್ಟುಗಳನ್ನು ಶುಭಾರಂಭಗೊಳಿಸಲಾಯಿತು. ಒಟ್ಟಿನಲ್ಲಿ ಜಿಲ್ಲೆಯಾದ್ಯಂತ ವಿಷು ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.