ಧಾರವಾಡ: ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಸಂಘಟನೆಯ 53ನೇ ಸಂಸ್ಥಾಪನಾ ದಿನವನ್ನು ತಾಲೂಕಿನ ಗರಗದ ಎಸ್‌ಜಿಎಂ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸಸಿ ನೆಡುವ ಮೂಲಕ ಆಚರಿಸಲಾಯಿತು.
ಸಂಸ್ಥೆ ಅಧ್ಯಕ್ಷ ಮಡಿವಾಳಗೌಡರ ಪಾಟೀಲ್ ಮಾತನಾಡಿ, ಇಂದು ಪರಿಸರ ನಾಶದಿಂದ ರೈತರ ಬದುಕು ಹೈರಾಣಾಗಿದೆ. ಮಳೆಯಿಲ್ಲದೆ, ಬರಗಾಲದಿಂದ ಕಂಗೆಟ್ಟಿದ್ದಾರೆ. ಪರಿಸರ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳು ತಮ್ಮ ಮನೆಗಳ ಸುತ್ತಮುತ್ತ ಪರಿಸರದಲ್ಲಿ ಸಸಿ ನೆಡುವ ಪ್ರತಿಜ್ಞೆ ಮಾಡೋಣ ಎಂದರು.
ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಭವಾನಿಶಂಕರ್ ಎಸ್.ಗೌಡ ಮಾತನಾಡಿ, ಎಐಡಿವೈಒ ಸಂಘಟನೆ ಇಡೀ ದೇಶವ್ಯಾಪಿ ಯುವ ಜನರ ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಟಗಳನ್ನು ಕಟ್ಟುತ್ತಿದೆ. 1966 ಜೂನ್ 26ರಂದು ಶಿವದಾಸ್‌ಘೋಷ್‌ರವರ ಮಾರ್ಗದರ್ಶನದಲ್ಲಿ ಪ್ರಾರಂಭವಾದ ಕ್ರಾಂತಿಕಾರಿ ಯುವಜನ ಸಂಘಟನೆ ಯುವಜನರಲ್ಲಿ ಉನ್ನತವಾದ ನೀತಿ ನೈತಿಕತೆಗಳನ್ನು ಬೆಳೆಸುತ್ತ ಬಂದಿದೆ ಎಂದರು.
ಪರಿಸರ ನಾಶವಾಗುತ್ತಿರುವ ಈ ಸಂದರ್ಭದಲ್ಲಿ ನಾವೆಲ್ಲರೂ ಪರಿಸರ ಕಾಪಾಡಲು ಜವಾಬ್ದಾರಿ ತೆಗೆದುಕೊಳ್ಳಬೇಕಿದೆ ಎಂದರು. ಕಾಲೇಜಿನ ಉಪನ್ಯಾಸಕರಾದ ಆರ್.ಎಲ್.ಲಮಾಣಿ, ಆನಂದ ತೋಟಗಿ, ಭಾಗ್ಯಶ್ರೀ ಕುಲಕರ್ಣಿ, ಜಯಶ್ರೀ, ಎಐಡಿವೈಒನ ಹನುಮೇಶ ಹುಡೇದ, ಮಂಜುನಾಥ್, ಅಭಿಷೇಕ್, ಶ್ರೀಧರ, ಚೇತನ್ ಸೇರಿದಂತೆ ಹಲವರು ಇದ್ದರು.
ಎಐಡಿವೈಒ ಜಿಲ್ಲಾಧ್ಯಕ್ಷ ರಮೇಶ ಹೊಸಮನಿ ನಿರೂಪಿಸಿದರು.