Advertisement

ಬಕ್ರೀದ್‌-ಸ್ವಾತಂತ್ರ್ಯೋತ್ಸವದಲ್ಲಿ ಶಾಂತಿ ಪಾಲಿಸಿ

03:05 PM Aug 06, 2019 | Suhan S |

ಬೀದರ: ಜಿಲ್ಲೆಯಲ್ಲಿ ಬಕ್ರೀದ್‌ ಮತ್ತು ಸ್ವಾತಂತ್ರ್ಯ ದಿನಾಚರಣೆಯನ್ನು ಶಾಂತಿಯುತವಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲೆಯ ಜನರು ಕಾನೂನು ಪಾಲನೆ ಮಾಡಬೇಕು. ಯಾರಿಗೂ ತೊಂದರೆಯಾಗದಂತೆ ಹಬ್ಬ ಆಚರಣೆ ಮಾಡಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್‌ ಹೇಳಿದರು.

Advertisement

ನಗರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಬಕ್ರೀದ್‌ ಮತ್ತು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ಸ್ವಚ್ಛನಗರ ಎಂದೇ ಹೆಸರಾದ ಮೈಸೂರಿನಲ್ಲಿ ಬೀದರನಲ್ಲಿರುವಂತಹ ರಸ್ತೆಗಳು ಇಲ್ಲ. ಇಲ್ಲಿಗೆ ಬರುವ ಸಾಕಷ್ಟು ಜನರು ಬೀದರ ಸಿಟಿ ಚೆನ್ನಾಗಿದೆ ಎಂದು ಹೇಳುತ್ತಾರೆ. ಬೀದರ ಐತಿಹಾಸಿಕ ಪಟ್ಟಣವಾಗಿದ್ದು, ತ್ಯಾಜ್ಯವನ್ನು ಎಲ್ಲೆಂದರಲ್ಲಿ ಹಾಕಿದಲ್ಲಿ ಪಟ್ಟಣದಲ್ಲಿ ಗಲೀಜು ಉಂಟಾಗಲಿದೆ. ಇದಕ್ಕೆ ಯಾರೂ ಕೂಡ ಅವಕಾಶ ಮಾಡಿಕೊಡಬಾರದು. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೇ ನಗರಸಭೆ ಹೇಳುವ ಪ್ರಕಾರ ಅದರ ವಿಲೇವಾರಿಗೆ ಸಹಕಾರ ನೀಡೋಣ ಎಂದು ಹೇಳಿದರು.

ಹಬ್ಬದ ಸಂದರ್ಭದಲ್ಲಿ ನಗರದ ಕೆಲವು ಕಡೆಗಳಲ್ಲಿ ಸಹಜವಾಗಿ ಟ್ರಾಫಿಕ್‌ ಕಿರಿಕಿರಿಯಾಗುತ್ತದೆ. ಓಲ್ಡ್ ಸಿಟಿ, ನಯಾ ಕಮಾನ್‌ ಮತ್ತು ಬಸ್‌ ನಿಲ್ದಾಣದಲ್ಲಿ ಟ್ರಾಫಿಕ್‌ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡುತ್ತೇವೆ. ಈ ಹಿನ್ನೆಲೆಯಲ್ಲಿ ಇಬ್ಬರು ಸಿಪಿಐ, 12 ಜನರು ಪಿಎಸ್‌ಐ, 22 ಜನರು ಎಎಸ್‌ಐ ಮತ್ತು 96 ಇನ್ನಿತರ ಸಿಬ್ಬಂದಿ ಸೇರಿ ಒಟ್ಟು 110 ಜನರನ್ನು ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ ಎಂದು ವಿವರಿಸಿದರು.

ನಗರಸಭೆ ಪೌರಾಯುಕ್ತ ಬಸಪ್ಪ ಮಾತನಾಡಿ, ನಗರದ 1ರಿಂದ 14 ವಾರ್ಡ್‌ಗಳಿಗೆ ಎರಡು ವಾಹನಗಳನ್ನು ಕಳಿಸುತ್ತೇವೆ. ಉಳಿದ ವಾರ್ಡ್‌ಗಳಿಗೆ ಒಂದು ವಾಹನ ಕಳಿಸುತ್ತೇವೆ. ಕಡ್ಡಾಯ ಈ ವಾಹನಗಳಲ್ಲಿಯೇ ತ್ಯಾಜ್ಯ ಹಾಕಿ ಸ್ವಚ್ಛತೆಗೆ ಸಹಕರಿಸಬೇಕು. ಈ ವಾಹನಗಳಲ್ಲಿ ಸೂಪರವೈಸರ್‌, ಪರಿಸರ ಅಭಿಯಂತರರು ಕೂಡ ಇರುತ್ತಾರೆ. ತಾವು ಕರೆ ಮಾಡಿದ ಕೂಡಲೇ ತಮ್ಮಲ್ಲಿಗೆ ವಾಹನ ಕಳುಹಿಸುತ್ತೇವೆ. ಈ ವಾಹಗಳನ್ನು ತಮ್ಮಲ್ಲಿ ಕಳುಹಿಸುವುದರ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿ, ಆಟೋ ಮೂಲಕ ಪ್ರಚಾರ ಮಾಡಿ ತಮಗೆ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು.

Advertisement

ಇದಕ್ಕೂ ಮೊದಲು ಸಭೆಯಲ್ಲಿದ್ದ ನಾಗರಿಕರು ಸಭೆಗೆ ಹಲವಾರು ಸಲಹೆ ನೀಡಿದರು. ಬೀದರ ಶಾಂತಿಗೆ ಹೆಸರಾದ ಜಿಲ್ಲೆಯಾಗಿದೆ. ಹಲವಾರು ಧರ್ಮಿಯರು ಇರುವ ಈ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ರೀತಿಯ ಗಲಭೆಗಳು ನಡೆದಿಲ್ಲ. ಎಲ್ಲರೂ ಸೇರಿ ಶಾಂತಿಯಿಂದ ಹಬ್ಬ ಆಚರಣೆ ಮಾಡುವುದಾಗಿ ಸಭೆಯಲ್ಲಿದ್ದ ನಾಗರಿಕರು ತಿಳಿಸಿದರು. ಹಬ್ಬದ ದಿನದಂದು ನಯಾಕಮಾನ್‌ ಹಾಗೂ ಇನ್ನಿತರ ಕಡೆಗಳಲ್ಲಿ ಸಾಕಷ್ಟು ಟ್ರಾಫಿಕ್‌ ಜಾಮ್‌ ಉಂಟಾಗಿ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತದೆ. ಆದ್ದರಿಂದ ಇದಕ್ಕೆ ಅಗತ್ಯ ವ್ಯವಸ್ಥೆ ಮಾಡುವಂತೆ ಕೆಲವರು ಪೊಲೀಸ್‌ ಇಲಾಖೆಗೆ ಮನವಿ ಮಾಡಿದರು. ಸಾಜೀದ್‌ ಪಾಟೀಲ, ದೇವೇಂದ್ರ ಸೋನಿ, ಸೈಯ್ಯದ್‌ ಖಾದ್ರಿ, ನಬಿ ಖುರೇಷಿ, ಟೌನ್‌ ಸಿಪಿಐ ರಾಜಣ್ಣ, ಡಿಎಸ್‌ಪಿ ಬಸವೇಶ್ವರ ಹೀರಾ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next