ಹೊಸದಿಲ್ಲಿ : ಗಣರಾಜ್ಯೋತ್ಸವ ದಿನಕ್ಕೆ ಇನ್ನು ಎರಡೇ ದಿನಗಳು ಬಾಕಿ ಇವೆ. ಈ ನಡುವೆ ಸಂಭವನೀಯ ಉಗ್ರ ದಾಳಿಗಾಗಿ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಗುಪ್ತಚರ ದಳದ ಮಾಹಿತಿ ಪ್ರಕಾರ ಉಗ್ರರು ಮತ್ತೂಮ್ಮೆ ದೇಶದ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ.
ಉಗ್ರರು ಅಫ್ಘಾನ್ ಶೈಲಿಯ ಉಡುಗೆ ತೊಡುಗೆಗಳಲ್ಲಿ ಬಂದು ದಾಳಿ ಎಸಗುವ ಸಾಧ್ಯತೆ ಇದೆ ಎಂದು ಗುಪ್ತಚರ ದಳ ತಿಳಿಸಿದೆ. ಕಳ್ಳ ಮಾರ್ಗದ ಮೂಲಕ ಉಗ್ರರು ಈಗಾಗಲೇ ದೇಶ ಪ್ರವೇಶಿಸಲು ಪಾಸ್ ಪೋರ್ಟ್ ಗಳನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವ ಅಬುಧಾಬಿಯ ಕ್ರೌನ್ ಪ್ರಿನ್ಸ್ ಹಾಗೂ ಯುಎಇಯ ಸಶಸ್ತ್ರ ದಳದ ಪರಮೋಚ್ಚ ಉಪ ಕಮಾಂಡರ್ ಆಗಿರುವ ಶೇಖ್ ಮೊಹಮ್ಮದ್ ಬಿನ್ ಝಾಯೇದ್ ಅಲ್ ನಹ್ಯಾನ್ ಅವರು ಮೂರು ದಿನಗಳ ಭಾರತ ಭೇಟಿಗಾಗಿ ಇಂದು ಹೊಸದಿಲ್ಲಿಗೆ ಆಗಮಿಸಲಿದ್ದಾರೆ.
ಅವರಿಗೆ ನಾಳೆ ರಾಷ್ಟ್ರಪತಿ ಭವನದಲ್ಲಿ ನಾಳೆ ವಿಧ್ಯುಕ್ತ ಸ್ವಾಗತವನ್ನು ನೀಡಲಾಗುತ್ತದೆ. ರಾಜಘಾಟ್‌ನಲ್ಲಿ ಅವರು ಮಹಾತ್ಮ ಗಾಂಧಿ ಪ್ರತಿಮೆಯ ಮೇಲೆ ಹೂ ಗುತ್ಛ ಇಟ್ಟು ಗೌರವಾರ್ಪಣೆ ಮಾಡಲಿದ್ದಾರೆ.
ಗಣರಾಜ್ಯೋತ್ಸವ ದಿನದ ಪರೇಡ್ ವೀಕ್ಷಿಸಿದ ಬಳಿಕ ಅವರು ಅಬುಧಾಬಿಗೆ ಮರಳಲಿದ್ದಾರೆ.
ಗಣರಾಜ್ಯೋತ್ಸವ ದಿನದ ಪ್ರಯುಕ್ತ ಪೂರ್ಣ ಪ್ರಮಾಣದ ಡ್ರೆಸ್ ರಿಹರ್ಸಲ್ ನಿನ್ನೆ ನಡೆದ ಸಂದರ್ಭದಲ್ಲಿ ದಿಲ್ಲಿಯಲ್ಲಿ ನಿನ್ನೆ ಸೋಮವಾರ ವಾಹನಗಳು ಬಸವನಹುಳುಗಳಂತೆ ಚಲಿಸಿವೆ. ರಾಜಧಾನಿಯ ಆದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದ್ದು ಕಟ್ಟೆಚ್ಚರ ವಹಿಸಲಾಗಿದೆ.