Advertisement

ಎಸ್‌ಐಟಿ ತೆಕ್ಕೆಗೆ ಚಾಟ್‌ ವಿವರ

01:44 AM Apr 01, 2021 | Team Udayavani |

ಬೆಂಗಳೂರು: ಸಿ.ಡಿ. ಪ್ರಕರಣದಲ್ಲಿ ಬುಧವಾರ ಎಸ್‌ಐಟಿಯಿಂದ ವಿಚಾರಣೆ ಎದುರಿಸಿದ ಸಂದರ್ಭದಲ್ಲಿ ಸಂತ್ರಸ್ತೆಯು ರಮೇಶ್‌ ಜಾರಕಿಹೊಳಿ ಜತೆಗಿನ 280 ವಾಟ್ಸ್‌ಆ್ಯಪ್‌ ಚಾಟ್‌ಗಳನ್ನು ನೀಡುವ ಮೂಲಕ ಸ್ಫೋಟಕ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

Advertisement

ಬುಧವಾರ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ಮುಕ್ತಾಯವಾದ ಬಳಿಕ ಆಕೆಯನ್ನು ತನಿಖಾಧಿಕಾರಿಗಳು ಆಡುಗೋಡಿಯ ಟೆಕ್ನಿಕಲ್‌ ಸೆಲ್‌ಗೆ ಕರೆದೊಯ್ದರು. ಅಲ್ಲಿ ಎರಡೂವರೆ ತಾಸು ವಿಚಾರಣೆ ನಡೆಸಿ, ರಾತ್ರಿ 8ಕ್ಕೆ ಕಳುಹಿಸಲಾಗಿದೆ. ಗುರುವಾರ ಮತ್ತೆ ಹಾಜರಾಗಲು ಸೂಚಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಆಕೆ ಈ ಹಿಂದೆ ಬಳಸುತ್ತಿದ್ದ ಮೊಬೈಲ್‌ ಕೊಡುವಂತೆ ಎಸ್‌ಐಟಿ ಕೇಳಿದ್ದು, ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ದುಬಾರಿ ಉಡುಗೊರೆ? :

ಜಾರಕಿಹೊಳಿ ಅವರು ಸಂತ್ರಸ್ತೆಗೆ ದುಬಾರಿ ಉಡುಗೊರೆ ನೀಡಿದ್ದಾರೆ ಎನ್ನಲಾಗಿದೆ. ಅದಕ್ಕೆ ಸಂಬಂಧಿಸಿದ ದಾಖಲೆಯನ್ನು ಸಂತ್ರಸ್ತೆ ಎಸ್‌ಐಟಿಗೆ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಮಂಗಳವಾರದ ವಿಚಾರಣೆ ಸಂದರ್ಭದಲ್ಲಿ ಆಕೆ ಪ್ರಕರಣದ ಕಿಂಗ್‌ಪಿನ್‌ಗಳು ಎನ್ನಲಾದ ಪತ್ರಕರ್ತ ನರೇಶ್‌ ಗೌಡ ಮತ್ತು ಶ್ರವಣ್‌ ಹೇಗೆ ಪರಿಚಯವಾದರು ಎಂಬ ಬಗ್ಗೆಯೂ ಉಲ್ಲೇಖೀಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

“ರಮೇಶ್‌ ಜಾರಕಿಹೊಳಿ ಪರಿಚಯವಾದ ಬಳಿಕ ಕಾಳಜಿಯಿಂದ ಮಾತನಾಡಿದರು. ಹೀಗಾಗಿ ಅವರಿಗೆ ನನ್ನ ಮೊಬೈಲ್‌ ನಂಬರ್‌ ಕೊಟ್ಟಿದ್ದೆ. ಅನಂತರ ಪದೇ ಪದೆ ಕರೆ ಮಾಡಿ ಆತ್ಮೀಯವಾಗಿ ಮಾತನಾಡುತ್ತಿದ್ದರು. ಈ ಮಧ್ಯೆ ಹೊಸ ಮೊಬೈಲ್‌ ನಂಬರ್‌ ಕೊಟ್ಟು ಇದನ್ನು ಯಾರಿಗೂ ಕೊಡಬೇಡ ಎಂದಿದ್ದರು. ಅಲ್ಲದೆ ಸರಕಾರಿ ಕೆಲಸ ಕೊಡಿಸುತ್ತೇನೆ. ಅದಕ್ಕೆ ನನ್ನೊಂದಿಗೆ ಸಹಕರಿಸಬೇಕು ಎಂದು ಒತ್ತಡ ಹಾಕಿದ್ದರು. ಅವರ ಒತ್ತಡಕ್ಕೆ ಮಣಿದಿದ್ದರಿಂದ 2-3 ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಈ ಬಗ್ಗೆ ನಮ್ಮ ಕುಟುಂಬದವರ ಜತೆಯೂ ಹೇಳಿಕೊಂಡಿರಲಿಲ್ಲ. ಆ ವೇಳೆ ನನಗೆ ನನ್ನ ಮೇಲೆಯೇ ಜಿಗುಪ್ಸೆ, ಭಯ ಕಾಡಿತ್ತು’ ಎಂದು ಯುವತಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಟಿ.ವಿ. ಪತ್ರಕರ್ತರ ಪರಿಚಯ :

ಜಾರಕಿಹೊಳಿ ಹಿಂಸೆ ನೀಡುತ್ತಿದ್ದ ವಿಚಾರವನ್ನು ಶ್ರವಣ್‌ ಜತೆ ಹೇಳಿಕೊಂಡಿದ್ದೆ. ಆತ ನರೇಶ್‌ ಅವರನ್ನು ಪರಿಚಯಿಸಿದ್ದ. ಹಿಂಸೆಯ ಬಗ್ಗೆ ಅವರ ಬಳಿ ಹೇಳಿದ್ದೆ. ಆಗ ಅವರು ದಾಖಲೆಗಳು ಇಲ್ಲದೆ ಏನೂ ಆಗುವುದಿಲ್ಲ ಎಂದಿದ್ದರು. ಹೀಗಾಗಿ ಜಾರಕಿಹೊಳಿ ಜತೆ ಖಾಸಗಿಯಾಗಿ ಇರುವ ವೀಡಿಯೋ ಚಿತ್ರೀಕರಿಸಿಕೊಂಡು, ಇರಿಸಿದ್ದೆ. ಒಂದು ಕಾಪಿಯನ್ನು ನರೇಶ್‌ಗೆ ಕೊಟ್ಟಿದ್ದೆ. ಆದರೆ ಅದನ್ನು ಹರಿಯಬಿಟ್ಟಿದ್ದು ಯಾರು ಎಂದು ಗೊತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಂದು ಸ್ಥಳ ಮಹಜರು? :

ಗುರುವಾರ ಸಂತ್ರಸ್ತೆಯನ್ನು ವಿಚಾರಣೆ ನಡೆಸಿ ಬಳಿಕ ಕೃತ್ಯ ನಡೆದ ಸ್ಥಳಕ್ಕೆ ಎಸ್‌ಐಟಿ ಕರೆದೊಯ್ಯಲಿದೆ. ಮಲ್ಲೇಶ್ವರ, ಸದಾಶಿವನಗರ ಮತ್ತು ಇತರೆಡೆ ಕರೆದೊಯ್ದು ಸ್ಥಳ ಮಹಜರು ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಹೈಕೋರ್ಟ್‌ಗೆ ತಂದೆ ಅರ್ಜಿ :

ಸಂತ್ರಸ್ತೆ ನ್ಯಾಯಾಧೀಶರ ಮುಂದೆ ಸಿಆರ್‌ಪಿಸಿ 164 ಅಡಿಯಲ್ಲಿ ದಾಖಲಿಸಿರುವ ಹೇಳಿಕೆಯನ್ನು ರದ್ದುಪಡಿಸಲು ಕೋರಿ ಸಂತ್ರಸ್ತೆಯ ತಂದೆ ಹೈಕೋರ್ಟ್‌ಗೆ ಬುಧವಾರ ತಕರಾರು ಅರ್ಜಿ ಸಲ್ಲಿಸಿ ದ್ದಾರೆ. ಅರ್ಜಿಯಲ್ಲಿ ರಾಜ್ಯ ಗೃಹ ಇಲಾಖೆಯ ಕಾರ್ಯದರ್ಶಿ, ಎಸ್‌ಐಟಿ ಮತ್ತು ಕಬ್ಬನ್‌ ಪಾರ್ಕ್‌ ಠಾಣೆಯ ತನಿಖಾಧಿಕಾರಿಯನ್ನು ಪ್ರತಿವಾದಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next